Advertisement

ಮಂತ್ರಾಲಯದಲ್ಲಿ ಪ್ರಹ್ಲಾದರಾಜರ ಅದ್ಧೂರಿ ರಥೋತ್ಸವ

06:00 AM Aug 30, 2018 | Team Udayavani |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಬುಧವಾರ ಗುರು ಪ್ರಹ್ಲಾದರಾಜರ ರಥೋತ್ಸವ ಲಕ್ಷಾಂತರ ಭಕ್ತರ ಉದ್ಘೋಷಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.

Advertisement

ಉತ್ತರಾರಾಧನೆ ನಿಮಿತ್ತ ಶ್ರೀಮಠದಲ್ಲಿ ಬೆಳಗ್ಗೆಯಿಂದ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಜರುಗಿದವು. ಎಂದಿನಂತೆ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಗ್ರಂಥಗಳ ಪಾರಾಯಣ, ದಾಸವಾಣಿ, ಪ್ರವಚನಗಳು ಜರುಗಿದವು. ಶ್ರೀ ಗುರುರಾಯರ ಮೂಲಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿವಿಧ ಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು. ಶ್ರೀಮಠದ ಪೀಠಾಧಿ ಪತಿ ಸುಬುಧೇಂದ್ರ ತೀರ್ಥರಿಂದ ಶ್ರೀ ಮೂಲ ರಾಮದೇವರಿಗೆ ವಿಶೇಷ ಪೂಜೆ, ಹಸ್ತೋದಕ ಸಮರ್ಪಣೆ, ಮಹಾಮಂಗಳಾರತಿ ಸೇವೆಗಳು ಜರುಗಿದವು.

ನಂತರ ಪ್ರಹ್ಲಾದರಾಜರ ಉತ್ಸವಮೂರ್ತಿಯನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ ಶ್ರೀಮಠದ ಪ್ರಾಕಾರೋತ್ಸವ ಮಾಡಲಾಯಿತು. ಈ ಬಾರಿ ನೂತನ ಶಿಲಾ ಮಂಟಪದಲ್ಲಿ ಪ್ರಹ್ಲಾದರಾಜರ ಉತ್ಸವಮೂರ್ತಿಗೆ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು. ನಂತರ ವಸಂತ್ಯುತ್ಸವಕ್ಕೆ ಚಾಲನೆ ನೀಡಿದ ಶ್ರೀಗಳು ಮಠದ ಹಿರಿಯ, ಕಿರಿಯ ಪಂಡಿತ, ವಿದ್ವಾಂಸರು, ಆಡಳಿತ ವರ್ಗದ ಸಿಬ್ಬಂದಿ, ಆಪ್ತರಿಗೆ ಗುಲಾಲು ಎರಚುವ ಮೂಲಕ ಓಕುಳಿಯಾಡಿದರು. ಬಳಿಕ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು, ರಾಯರ ಮಠ ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೇ ಎಲ್ಲ ರಂಗಗಳಿಗೆ ಸೇವೆ ವಿಸ್ತರಿಸುತ್ತಿದೆ. ಈ ಬಾರಿ ಜನರ ಅನುಕೂಲಕ್ಕಾಗಿ ಅತ್ಯಾಧುನಿಕ ಆಸ್ಪತ್ರೆಯನ್ನು ಲೋಕಾರ್ಪಣೆಗೆ ಸಿದ್ಧಗೊಳಿಸಲಾಗಿದೆ. ಇದು ಭಕ್ತರೇ ಮುನ್ನಡೆಸುತ್ತಿರುವ ಮಠವಾಗಿದ್ದು, ಅವರ ಅಗತ್ಯತೆ ಅರಿತು ಕೆಲಸ ಮಾಡುತ್ತಿದೆ ಎಂದರು.

ಶ್ರೀಮಠವನ್ನು ಕೆಲವೇ ವರ್ಷಗಳಲ್ಲಿ ಸ್ವರ್ಣ ಮಠವನ್ನಾಗಿ ರೂಪಿಸಲಾಗುವುದು. ಬೃಂದಾವನ ಸುತ್ತಲಿನ ಮಂಟಪವನ್ನು ಸಂಪೂರ್ಣ ಸ್ವರ್ಣಮಯ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಆದರೆ, ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ಭಕ್ತರೇ ರಾಯರನ್ನು ಮತ್ತಷ್ಟು ವೈಭವದಿಂದ ಕಣ್ತುಂಬಿಕೊಳ್ಳಬೇಕು ಎಂದು ಹಂಬಲಿಸುತ್ತಿದ್ದಾರೆ. ಮಠದ ಸಿಬ್ಬಂದಿಗೆ ಸರ್ಕಾರಿ ಸಂಸ್ಥೆಯ ಮಾದರಿಯಲ್ಲಿಯೇ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ಬಾರಿ ಶೇ.8.5ರಷ್ಟು ತುಟ್ಟಿಭತ್ಯೆ ಘೋಷಿಸಿದ್ದು, ಈಗಾಗಲೇ ಶೇ.5ರಷ್ಟು ನೀಡಲಾಗಿದೆ. ಕೇರಳ, ಕೊಡಗು ತಾಣಗಳಿಗೆ ತಾತ್ಕಾಲಿಕವಾಗಿ 15 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು.

Advertisement

ನಂತರ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಕಲಾ ತಂಡಗಳು, ಭಜನಾ ಮಂಡಳಿಗಳ ಸದಸ್ಯರು ರಥೋತ್ಸವದ ಮೆರುಗು ಹೆಚ್ಚಿಸಿದರು. ಶ್ರೀ ಸುಬುಧೇಂದ್ರ ತೀರ್ಥರು ಹೆಲಿಕಾಪ್ಟರ್‌ ಮೂಲಕ ರಥಕ್ಕೆ, ಮಠದ ಗೋಪುರಕ್ಕೆ ಪುಷ್ಪವೃಷ್ಟಿಗೈದರು. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿ ದೇಶ-ವಿದೇಶಗಳಿಂದ ಭಕ್ತರ ದಂಡೇ ಮಂತ್ರಾಲಯಕ್ಕೆ ಹರಿದು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next