Advertisement

ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘ: ಸಾಂಸ್ಕೃತಿಕ ಕಾರ್ಯಕ್ರಮ

04:58 PM Dec 13, 2017 | |

ಮುಂಬಯಿ: ಜಡತ್ವ, ದುರಾಸೆ, ಅಜ್ಞಾನ, ಅಹಂ ಮೊದಲಾದ ದುಶ್ಚಟಗಳನ್ನು ದೂರಗೊಳಿಸುವ ವಿಶಿಷ್ಟವಾದ ಶಕ್ತಿ ಒಂದು ಮಂಡಲದ ಅಯ್ಯಪ್ಪ ವ್ರತದಲ್ಲಿದೆ. ಸಿರಿವಂತ ನಾದರೂ ಶ್ರೀ ಸಾಮಾನ್ಯನಾಗಿ ವಯೋಭೇದ‌‌, ಕುಲ ಬೇಧಗಳಿಲ್ಲದೆ ಒಬ್ಬರಿಗೊಬ್ಬರು ಕಾಲು ಮುಟ್ಟಿ ಸ್ವಾಮಿ ಶರಣಂ ಹೇಳುವ ಪದ್ಧತಿ ಸ್ನೇಹ ಹೊಂದಾಣಿಕೆಯನ್ನು ಸೂಚಿಸುತ್ತದೆ. ದಿನಚರಿಯನ್ನು ಅದ್ಭುತ ಶಿಸ್ತಿಗೆ ಕೊಂಡೊಯ್ಯವ ದೇಹಕ್ಕೆ ಸಂಯಮದ ಪಾಠ ಬೋಧಿಸುವ ಅಯ್ಯಪ್ಪ ವ್ರತ ದೈವಿಕ ಶಕ್ತಿಯಿಂದ ಕೂಡಿದೆ ಎಂದು ದಹಿಸರ್‌ ಕರ್ನಾಟಕ ಸಂಘದ ಅಧ್ಯಕ್ಷ,  ನಿಟ್ಟೆ ಎಂ. ಜಿ. ಶೆಟ್ಟಿ  ಹೇಳಿದರು.

Advertisement

ಡಿ. 9ರಂದು ದಹಿಸರ್‌ ಪೂರ್ವದ ಶೈಲೇಂದ್ರ ನಗರದ ಹ್ಯಾಪಿ ಹೋಂ ಸೊಸೈಟಿಯ ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘದ 25 ನೇ ವಾರ್ಷಿಕ ಮಹಾಪೂಜೆಯಲ್ಲಿ ನಡೆದ ಸಮ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ದೈಹಿಕ ಶ್ರಮ, ಧೃಡ ಮನೋಭಾವ, ಅಪಾರ ತಾಳ್ಮೆಯಿಂದ ಬದುಕನ್ನು ಕಟ್ಟಬೇಕು. ಪ್ರತಿಯೊಂದು ಆಚರಣೆಯು ಮೌಲ್ಯತೆಯ ಪರಂಪರೆಯಾಗಬೇಕು. ಆಧ್ಯಾತ್ಮಿಕ ಚಿಂತನೆ ಯೊಂದಿಗೆ ಮಾತಾಪಿತರಲ್ಲಿ ದೇವರನ್ನು ಕಾಣುವ ವಿಶಾಲ ಹೃದಯ ನಮ್ಮದಾಗಬೇಕು ಎಂದರು.

ವಿದೇಶದಲ್ಲಿ ಯಶಸ್ವಿ ಭರತನಾಟ್ಯ ಪ್ರದರ್ಶನ ನೀಡಿದ ರಾಧಾಕೃಷ್ಣ  ನೃತ್ಯ ಅಕಾಡೆಲಿಯ ವಿದುಷಿ ಸುಕನ್ಯಾ ಭಟ್‌ ಮತ್ತು ಶಿಷ್ಯೆಯಂದಿರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷ, ರಾಜಕೀಯ ಮುಖಂಡ ಡಾ| ಹರೀಶ್‌  ಶೆಟ್ಟಿ ಅವರು ಮಾತನಾಡಿ, ಬಿಡುವಿಲ್ಲದ ಸಮಯದಲ್ಲಿ ಬೆರಳೆಣಿಕೆಯ ಮಂದಿ ಸ್ಥಾಪಿಸಿದ ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘದ 25ನೇ ವಾರ್ಷಿಕೋತ್ಸವವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ವಿಚಾರ ವಾಗಿದೆ. ಅಂದಿನವರ ಅವಿರತ ಶ್ರಮ ಇಂದು ಕಾರ್ಯಗತಗೊಂಡಿದೆ. ಸಮಾನತೆಯ ಸಂದೇಶ ಸಾರುವ, ಸಮವಸ್ತ್ರದಿಂದ ಶೋಭಿಸುವ ಅಯ್ಯಪ್ಪ ಸ್ವಾಮಿಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿ ಎಂದು  ಶುಭಹಾರೈಸಿದರು.

Advertisement

ಇದೇ ಸಂದರ್ಭದಲ್ಲಿ 18 ನೇ ವಾರ್ಷಿಕ ಶಬರಿಮಲೆ ಯಾತ್ರೆಗೈಯುವ ಜಗದೀಶ್‌ ಶೆಟ್ಟಿ ಗುರುಸ್ವಾಮಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಪ್ರಸಾದವನ್ನಿತ್ತು ಸಮ್ಮಾನಿಸಲಾಯಿತು. ಸ್ಥಾಪಕ ಸದಸ್ಯ ಸುಕೇಶ್‌ ಗುರುಸ್ವಾಮಿ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘದ ಗೌರವಾಧ್ಯಕ್ಷ ಸುರೇಂದ್ರ ಗುರುಸ್ವಾಮಿ ಬೆಳಗಾವಿ, ಅಧ್ಯಕ್ಷ ಸುಧಾಕರ ಎನ್‌. ಶೆಟ್ಟಿ ಬಿಯಾಳಿ ಮಂದಾರ್ತಿ, ಕಾರ್ಯದರ್ಶಿ ಹಾಗೂ ಶಿಬಿರದ ಗುರುಸ್ವಾಮಿ ಮೋಹನ್‌ ರೈ ಉಪ್ಪಳ ಉಪಸ್ಥಿತರಿದ್ದರು. ಪ್ರಕಾಶ್‌ ರೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾಧಾಕೃಷ್ಣ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರುಗಳಿಂದ ಬ್ರಹ್ಮ ಬಲಾಂಡಿ ಯಕ್ಷಗಾನ ಪ್ರದರ್ಶನಗೊಂಡಿತು. ಭಕ್ತಾದಿಗಳು, ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಅಯ್ಯಪ್ಪ ಸ್ವಾಮಿಯ ಪ್ರಸಾದ ಸ್ವೀಕರಿಸಿದರು. 

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next