Advertisement

ಮಹದೇಶ್ವರ ಬೆಟ್ಟದ ಭಲೇ ಭೋಜನ

09:55 PM Aug 16, 2019 | mahesh |

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ, ಮಲೆ ಮಹದೇಶ್ವರ ಬೆಟ್ಟವು ಮಧ್ಯಮ ವರ್ಗದ ಶ್ರದ್ಧಾ ಕೇಂದ್ರ. ಸುತ್ತಲಿನ 7 ಮಲೆಗಳ ನಡುವೆ ನೆಲೆನಿಂತ ಮಹದೇಶ್ವರನ ಈ ದೇಗುಲವು, 600 ವರ್ಷಗಳ ಇತಿಹಾಸ ಹೊಂದಿದೆ. ಏಳು ಮಲೆಯ ಮಾರ್ಗವಾಗಿ ನಡುಮಲೆಯನ್ನು ತಪಸ್ಸಿಗೆ ಆರಿಸಿಕೊಂಡ ಮಹದೇವನ, ಈ ಪುಣ್ಯಸ್ಥಾನದ ದಾಸೋಹಕ್ಕೆ ದೈವಿಕ ಮಹತ್ವವಿದೆ.

Advertisement

ನಿತ್ಯ ಎಷ್ಟು ಮಂದಿಗೆ ಊಟ?
ಪ್ರತಿನಿತ್ಯ ಇಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ಸುಸಜ್ಜಿತವಾದ ದಾಸೋಹ ಭವನದಲ್ಲಿ ಒಮ್ಮೆಲೆ 700 ಮಂದಿ ಊಟಕ್ಕೆ ಕುಳಿತುಕೊಳ್ಳಬಹುದು. ಟೇಬಲ್‌ ಮೇಲೆ ಸ್ಟೀಲ್‌ ತಟ್ಟೆಯಲ್ಲಿ ಊಟದ ವ್ಯವಸ್ಥೆ. ಅಮಾವಾಸ್ಯೆ, ಯುಗಾದಿ, ಶಿವರಾತ್ರಿ, ದೀಪಾವಳಿ, ಜಾತ್ರೆಯ ವೇಳೆ ಲಕ್ಷಕ್ಕೂ ಅಧಿಕ ಭಕ್ತರು, ಭೋಜನ ಸವಿದು ಪಾವನರಾಗುತ್ತಾರೆ.

ಐದು ಹೊತ್ತು ದಾಸೋಹ
ಬೇರೆಲ್ಲ ಪುಣ್ಯಕ್ಷೇತ್ರಗಳಲ್ಲಿ 2 ಅಥವಾ 3 ಹೊತ್ತು ದಾಸೋಹ ಇದ್ದರೆ, ಇಲ್ಲಿ 5 ಹೊತ್ತು ದಾಸೋಹ.
ಬೆಳಗ್ಗೆ: 7ರಿಂದ 11 ಗಂಟೆ ವರೆಗೆ ಉಪಾಹಾರ
ಮಧ್ಯಾಹ್ನ: 12.30ರಿಂದ 3.30ರವರೆಗೆ ಭೋಜನ
ಸಂಜೆ: 4ರಿಂದ 6ರವರೆಗೆ ಉಪಾಹಾರ
ರಾತ್ರಿ: 7ರಿಂದ 10.30ರ ವರೆಗೆ ಭೋಜನ
ತಡರಾತ್ರಿ: 10.30ರಿಂದ ಉಪಾಹಾರ
ವಿಶೇಷ ದಿನ, ಜಾತ್ರೆ ಸಂದರ್ಭಗಳಲ್ಲಿ ನಿರಂತರವಾಗಿ ದಿನದ 24 ಗಂಟೆಯೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಭಕ್ತರ ಸಂಖ್ಯೆ ಹೆಚ್ಚಾದಾಗ, ಊಟದ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

ದಾಸೋಹ ಹಿಂದಿನ ಕೈಗಳು
10 ಮಂದಿ ಬಾಣಸಿಗರು ಸೇರಿದಂತೆ 70 ಜನ ಸಿಬ್ಬಂದಿ, ದಾಸೋಹ ಭವನದಲ್ಲಿ ಕೆಲಸ ಮಾಡುತ್ತಾರೆ. 23 ಮಂದಿ ಶುಚಿತ್ವದ ಹೊಣೆ ಹೊರುತ್ತಾರೆ. 22 ಮಂದಿ ಊಟ ಬಡಿಸುವುದಕ್ಕೆ ನೇಮಕವಾಗಿದ್ದಾರೆ.

ಭಕ್ಷ್ಯ ವಿಚಾರ
– ಉಪಾಹಾರದ ವೇಳೆ, ಪಲಾವ್‌, ಟೊಮೇಟೊ ಬಾತ್‌, ಪುಳಿಯೊಗರೆ, ಹುಳಿಅನ್ನ ಅಥವಾ ಉಪ್ಪಿಟ್ಟುಗಳಲ್ಲಿ ಯಾವುದಾದರೂ ಒಂದನ್ನು ವಿತರಿಸಲಾಗುತ್ತದೆ.
– ಭೋಜನಕ್ಕೆ ಅನ್ನ- ಸಾಂಬಾರು, ಪಾಯಸ, ತರಕಾರಿ ಕೂಟು, ತಿಳಿ ಸಾರು ಮತ್ತು ಮಜ್ಜಿಗೆಯನ್ನು ವಿತರಿಸಲಾಗುತ್ತದೆ.

Advertisement

ಭೋಜನಶಾಲೆ ಹೇಗಿದೆ?
13 ಸ್ಟೀಮ್‌ ಬಾಯ್ಲರ್‌ಗಳುಳ್ಳ ಸುಸಜ್ಜಿತ ಅಡುಗೆ ಕೋಣೆ ಇದು. ಈ ಪೈಕಿ ಅನ್ನ ತಯಾರಿಕೆಗೆ 6, ಸಾಂಬಾರು ಮತ್ತು ತಿಳಿಸಾರು ತಯಾರಿಕೆಗೆ 3, ಪಾಯಸ ತಯಾರಿಕೆಗೆ 2 ಮತ್ತು ತರಕಾರಿ ಕೂಟು ತಯಾರಿಸಲು 2 ಸ್ಟೀಮ್‌ಗಳನ್ನು ಬಳಸಲಾಗುತ್ತಿದೆ. ಗ್ಯಾಸ್‌ ಒಲೆಯಲ್ಲಿ ಅಡುಗೆ. ಪ್ರತಿನಿತ್ಯ 20 ಕ್ವಿಂಟಲ್‌ಗ‌ೂ ಅಧಿಕ ಅಕ್ಕಿ, 100 – 150 ಕೆ.ಜಿ ತೊಗರಿ ಬೇಳೆ, 200ಕ್ಕೂ ಹೆಚ್ಚು ತೆಂಗಿನಕಾಯಿ ಮತ್ತು 500 -700 ಕೆ.ಜಿ. ತರಕಾರಿ ಅವಶ್ಯ.

ಅನ್ನದಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಆ ಪುಣ್ಯ ನಮಗೂ ದಕ್ಕುತ್ತಿದೆ. ಇಲ್ಲಿನ ದಾಸೋಹಕ್ಕೆ ಅಕ್ಕಿ, ಬೇಳೆ, ತರಕಾರಿಗಳೆಲ್ಲವನ್ನೂ ದಾನಿಗಳೇ ನೀಡುತ್ತಿದ್ದಾರೆ.
– ಸ್ವಾಮಿ, ದಾಸೋಹ ಭವನದ ಮೇಲ್ವಿಚಾರಕ

ಸಂಖ್ಯಾ ಸೋಜಿಗ
5- ಹೊತ್ತು ದಾಸೋಹ ವಿಶೇಷ
10- ಬಾಣಸಿಗರಿಂದ ಅಡುಗೆ
13- ಸ್ಟೀಮ್‌ ಬಾಯ್ಲರ್‌ಗಳ ಬಳಕೆ
15- ಸಿಲೆಂಡರ್‌ಗಳು ನಿತ್ಯ ಅವಶ್ಯ
70- ಸಿಬ್ಬಂದಿ ಪಾಕಶಾಲೆಯ ಶಕ್ತಿ
700- ಕೆ.ಜಿ. ತರಕಾರಿ ನಿತ್ಯ ಅವಶ್ಯ
20,000- ಭಕ್ತರಿಗೆ ನಿತ್ಯ ದಾಸೋಹ
1,00,00,000- ಭಕ್ತರಿಗೆ ಕಳೆದವರ್ಷ ಅನ್ನಸಂತರ್ಪಣೆ

– ವಿನೋದ್‌ ಎನ್‌ ಗೌಡ , ಹನೂರು

Advertisement

Udayavani is now on Telegram. Click here to join our channel and stay updated with the latest news.

Next