Advertisement
ಆಚಾರ್ಯ ಮಧ್ವರೆಂಬ ತೌಳವ ದಾರ್ಶನಿಕ ಮಹಾಪುರುಷ ನೆಲೆಸಿದ್ದು 12-13 ನೇ ಶತಮಾನದಲ್ಲಿ. 1239ರಿಂದ 1317ರ ವರೆಗೆ 79 ವರ್ಷ ಭೌತಿಕ ಶರೀರದಲ್ಲಿದ್ದ ಅವರು 80ನೆಯ ವಯಸ್ಸಿನಲ್ಲಿ ಉಡುಪಿಯನ್ನು ಬಿಟ್ಟು ತೆರಳಿದರು. ಮಾಘೇ ಮಕರಗೇ.. ಮಾಘ ಮಾಸದಲ್ಲಿ ಮಕರ ರಾಶಿಯಲ್ಲಿ ಸೂರ್ಯನಿರುವಾಗ ಮಾಘ ಮಾಸದ ಶುಕ್ಲಪಕ್ಷದ ನವಮಿ ಆ ದಿನ. ಅಂದು ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಶಿಷ್ಯರಿಗೆ ಐತರೇಯೋಪನಿಷತ್ತು ಪಾಠ ಮಾಡುತ್ತಿದ್ದಾಗ ಪುಷ್ಪವೃಷ್ಟಿಯಾಯಿತು.
Advertisement
ಆಚಾರ್ಯರ ದೇಶಪರ್ಯಟನೆಯ ಯಾದಿಯಲ್ಲಿ ಮೊದಲಿಗೆ ದಾಖಲಾದದ್ದು ಕಾಸರಗೋಡಿನ ವಿಷ್ಣುಮಂಗಲ. ಇಲ್ಲಿಗೆ ಮತ್ತೊಮ್ಮೆ ಜಯಸಿಂಹ ರಾಜನ ಆಹ್ವಾನದ ಮೇರೆಗೆ ಬಂದು ತ್ರಿವಿಕ್ರಮಪಂಡಿತಾಚಾರ್ಯರ ಜತೆಗೆ ಏಳೆಂಟು ದಿನಗಳ ವಾದ ನಡೆಯಿತು. ಅಲ್ಲಿಂದ ಮುನ್ನಡೆಯುವಾಗ ಕೇರಳ ರಾಜ್ಯಕ್ಕೇ ಆಭರಣದಂತಿರುವ ಪಯಸ್ವಿನೀ ನದಿಯನ್ನು ದಾಟಿ ಹೋಗಿದ್ದಾರೆ. ಅಲ್ಲಿಂದ ನೇರವಾಗಿ ಹೋದದ್ದು ತಿರುವನಂತಪುರಕ್ಕೆ. ಮುಂದೆ ಹೋಗಿ ಸ್ನಾತ್ವಾತ್ರ ತೀರ್ಥೇಷ್ವಚಿರೇಣ ಕನ್ಯಕಾತೀರ್ಥೇ ಸುತೀರ್ಥೇ ಸುಖತೀರ್ಥ ಎಂದು ಕನ್ಯಾಕುಮಾರಿಗೆ ಹೋಗಿ ರಾಮಸೇತುವನ್ನು ತಲುಪಿ ರಾಮನಾಥನನ್ನು ನಮಸ್ಕರಿಸಿದ್ದು ಮತ್ತು ನಾಲ್ಕು ತಿಂಗಳ ಕಾಲ ಚಾತುರ್ಮಾಸ ವ್ರತವನ್ನು ಆಚರಿಸಿದ್ದು ಮಧ್ವವಿಜಯದಲ್ಲಿ ದಾಖಲುಗೊಂಡಿದೆ. ಅಲ್ಲಿಂದ ತಮಿಳುನಾಡಿಗೆ ಬಂದು ಶ್ರೀರಂಗ ಮತ್ತು ಕಾವೇರಿಯರ ದರ್ಶನ ಮಾಡಿ ನಾನಾ ದೇವಾಲಯಗಳನ್ನು ಕಂಡು ಮತ್ತೆ ಪಯಸ್ವಿನೀ ನದಿಯ ದಡದ ಅಡೂರು ದೇವಸ್ಥಾನಕ್ಕೆ ಬಂದ ಬಗ್ಗೆ ಸ್ಪಷ್ಟ ದಾಖಲೆ ಸಿಕ್ಕಿದೆ.
ಎರಡನೇ ಬಾರಿ ವ್ಯಾಸರ ದರ್ಶನಕ್ಕೆ ತೆರಳಿದ ಮಧ್ವಾಚಾರ್ಯರ ಮಾರ್ಗ ಕ್ರಮವನ್ನು ಸ್ವಲ್ಪ ವಿವರವಾಗಿ ತಿಳಿಯಬಹುದು. ತೆಪ್ಪವಿಲ್ಲದೇ ಗಂಗೆಯನ್ನು ದಾಟುವ ಪ್ರಸಂಗ ಬಂದಾಗ ಮುಸಲ್ಮಾನ ರಾಜನೊಂದಿಗೆ ಅವನ ಭಾಷೆಯಲ್ಲೇ ವ್ಯವಹರಿಸಿದ್ದು ದಾಖಲಾಗಿದೆ. ಪ್ರಾಯಃ ಮೊಘಲ ದೊರೆಯಾದ ಅಲ್ಲಾವುದ್ದೀನ್ ಖೀಲ್ಜಿಯೇ ಆ ರಾಜನಿರಬಹುದಾಗಿದೆ. ಕೆಳಗಿಳಿಯುತ್ತಾ ಹಸ್ತಿನಾಪುರ ಅಂದರೆ ಇವತ್ತಿನ ಮೇರಠ್ ಗೆ ಬಂದಿದ್ದಾರೆ. ಕುರುಕ್ಷೇತ್ರದಲ್ಲಿ ಹಿಂದೆ ಮಹಾಭಾರತ ಯುದ್ಧದಲ್ಲಿ ಉಪಯೋಗಿಸಿದ ಆಯುಧಗಳನ್ನು ತೋರಿಸಿದ್ದಾರೆ. ಅಲ್ಲಿಂದ ಗೋವೆಗೆ ಬಂದಿದ್ದಾರೆ.
ಈ ರೀತಿಯಾಗಿ ಉತ್ತರಭಾರತದಲ್ಲಿ ಮಧ್ವರು ಸಂಚರಿಸಿದ ಸ್ಥಳಗಳಲ್ಲಿ ಕೆಲವೊಂದು ಉಲ್ಲೇಖಗೊಂಡಿವೆಯಾದರೂ ಇನ್ನೂ ಅನೇಕ ಸ್ಥಳಗಳು ಕಾಲಗರ್ಭದಲ್ಲಿ ಅಡಗಿಹೋಗಿರಬಹುದು. ಇಷ್ಟಲ್ಲದೇ ಪುತ್ತೂರು ಕೊಡಿಪಾಡಿ ದೇವಸ್ಥಾನ, ಮಧೂರು ದೇವಸ್ಥಾನ, ರಾಮಕುಂಜ, ವರ್ಕಾಡಿ ದೇವಸ್ಥಾನ, ಸುಬ್ರಹ್ಮಣ್ಯದ ಬಳಿಯ ಇಡೆತುದೆ, ಕೊಕ್ಕಡ ದೇವಸ್ಥಾನ, ಉಜಿರೆ, ಪುಂಜಾಲಕಟ್ಟೆಯ ಬಳಿಯ ಪಾರೆಂಕಿ ದೇವಸ್ಥಾನ, ಮಧ್ಯವಾಟಮಠ, ಕಾಂತಾವರ ದೇವಸ್ಥಾನ, ಉಡುಪಿಯ ಸುತ್ತಮುತ್ತಲಿನ ಹಲವು ಸ್ಥಳಗಳು ಆಚಾರ್ಯಮಧ್ವರು ಓಡಾಡಿದ ಸ್ಥಳಗಳಾಗಿ ಈಗಲೂ ಜನಜನಿತವಾಗಿದೆ. ಮಂಗಳೂರಿನಿಂದ ಬಿ.ಸಿ.ರೋಡ್ ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವಾಗ ಪುಂಜಾಲಕಟ್ಟೆಗಿಂತ ಮೊದಲು ಮದ್ದ ಎಂಬ ಒಂದು ಚಿಕ್ಕ ಊರು ಇದೆ. ಇದರ ನಿಜವಾದ ಹೆಸರು ಮಧ್ವ ಎಂದು, ಆಡುಭಾಷೆಯಲ್ಲಿ ಮದ್ದ ಎಂದಾಗಿದೆ. ಶ್ರೀಮಧ್ವಾಚಾರ್ಯರು ಉಡುಪಿಯಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಮಧ್ಯೆ ಈ ಊರಿನಲ್ಲಿ ವಿಶ್ರಮಿಸುತ್ತಿದ್ದರು. ಇವತ್ತೂ ಆ ಕಟ್ಟೆಯನ್ನು ಮಧ್ವಕಟ್ಟೆಯೆಂದೇ ಜನ ಗೌರವಿಸುತ್ತಾ ಬಂದಿದ್ದಾರೆ. ಇನ್ನೂ ಹಲವು ಅಪ್ರಸಿದ್ಧವಾದರೂ ಮಧ್ವಾಚಾರ್ಯರು ಸಂಚರಿಸಿದ ಸ್ಥಳಗಳಾಗಿ ಗುರುತಿಸಲ್ಪಟ್ಟಿವೆ.
ಆದರೆ ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಆಚಾರ್ಯರು ಸಂಚರಿಸಿದ ಬಗ್ಗೆ ಉಲ್ಲೇಖಗಳಿಲ್ಲ. ಬದರಿಯಿಂದ ಹಿಂದಿರು ಗುವಾಗ ಒಂದು ಬಾರಿ ಗೋದಾವರಿ ತೀರದ ಮೂಲಕ ಬಂದದ್ದನ್ನು ಉಲ್ಲೇಖೀಸಲಾಗಿದೆ. ಗೋದಾವರಿ ನದೀ ಮಹಾರಾಷ್ಟ್ರ ಆಂಧ್ರಗಳಲ್ಲಿ ಹರಿಯುತ್ತದೆ. ಪ್ರಾಯಃ ಆಂಧ್ರದಲ್ಲಿರುವ ಗೋದಾವರಿ ತೀರದ ಜಿಲ್ಲೆಗಳ ಮೂಲಕ ಸಂಚರಿಸಿರಬೇಕು. ಮಧ್ವಾಚಾರ್ಯರ ಶಿಷ್ಯರಲ್ಲೊಬ್ಬರು ಶ್ರೀ ನರಹರಿತೀರ್ಥರು ಒಡಿಶಾ ಮೂಲದವರೆಂದೂ ಆಂಧ್ರ – ತಮಿಳುನಾಡುಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿದವ ರೆಂದು ಕೆಲವು ಸಂಶೋಧನೆಗಳು ಗುರುತಿಸಿವೆ. ಮತ್ತೂಂದೆಡೆ ಪುರಿ ಜಗನ್ನಾಥ ಸನ್ನಿಧಿ ಪುರಾಣ ಪ್ರಸಿದ್ಧವಾದ ಕ್ಷೇತ್ರ. ಆದ್ದರಿಂದ ಮಧ್ವರು ಅತ್ತಕಡೆಯೂ ಸಂಚರಿಸಿರುವ ಸಂಭವವಿದೆ. ಮತ್ತೂಮ್ಮೆ ಬದರಿಯಿಂದ ಬಂದಾಗ ಗೋವಾದ ಮೂಲಕ ಉಡುಪಿಗೆ ಬಂದಿದ್ದಾರೆ. ಪಂಢರಪುರ, ಅದರ ಮೇಲಿರುವ ಉಡುಪಿ ಶ್ರೀಕೃಷ್ಣನ ಮೂಲನೆಲೆಯಾದ ಗುಜರಾತ್ ರಾಜ್ಯದಲ್ಲೂ ಪ್ರವಾಸ ಮಾಡಿರುವ ಸಾಧ್ಯತೆ ಇದೆ. ಆದರೆ ಆಧಾರಗಳು ಸಿಗಬೇಕು.
ಸಂಚಾರ ಮಾರ್ಗದಲ್ಲಿ ಈಶ್ವರ ದೇವ ಎಂಬ ರಾಜನ ಜತೆಯ ಪ್ರಸಂಗವೊಂದಿದೆ. ತೌಳವ ಈಶ್ವರ ದೇವನೋ ಅಥವಾ ಮಹಾರಾಷ್ಟ್ರದ ಮಹಾದೇವನೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಮಹಾರಾಷ್ಟ್ರದವನಾದರೆ ಆ ಮಾರ್ಗದಲ್ಲಿ ಉತ್ತರಕ್ಕೆ ಹೋಗಿದ್ದಾರೆ ಎಂದು ತಿಳಿಯಬಹುದು. ಆಚಾರ್ಯ ಮಧ್ವರು ನಡೆದಾಡಿದ ಸ್ಥಳಗಳ ಬಗ್ಗೆ ದೊಡ್ಡದಾದ ಸಂಶೋಧನೆಯ ಅಗತ್ಯವಿದೆ. ನಮ್ಮ ಕರ್ನಾಟಕದ ಮಣ್ಣಿನಲ್ಲಿ ಜನ್ಮತಳೆದ ಮಹಾಪುರುಷರೊಬ್ಬರು ಇಡಿಯ ದೇಶದಲ್ಲಿ ಸಂಚರಿಸಿ ತಣ್ತೀಜ್ಞಾನದ ಬೆಳಕನ್ನು ಪಸರಿಸಿದರು ಎಂಬುದು ನಮಗೆ ಹೆಮ್ಮೆಯ ಸಂಗತಿ. ಮಧ್ವನವಮಿಯ ಈ ಪರ್ವಕಾಲ ಮಧ್ವರು ನಡೆದ ನಾಡಿನ ಕುರಿತಾದ ಸಂಶೋಧನೆಗೆ ಹೊಸ ದಿಕ್ಕನ್ನು ತೋರಲಿ.
– ಡಾ| ಷಣ್ಮುಖ ಹೆಬ್ಟಾರ್, ಉಡುಪಿ