ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಹರಿದ್ವಾರದಲ್ಲಿ ಈ ಹಿಂದೆ ನಿರ್ಮಾಣ ಗೊಂಡಿದ್ದ ಶ್ರೀ ಮಾಧವೇಂದ್ರ ಆಸ್ಪತ್ರೆಯನ್ನು ಅತ್ಯಾಧುನಿಕವಾಗಿ ಪುನರ್ ನಿರ್ಮಾಣಗೊಳಿಸಲಾಗಿದ್ದು, ರವಿವಾರ ಸಂಸ್ಥಾನದ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು.
ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಈ ಆಸ್ಪತ್ರೆ ಯನ್ನು ಸುಸಜ್ಜಿತಗೊಳಿಸ ಲಾಗಿದ್ದು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ, ಸಲಕರಣೆಗಳನ್ನು ಅಳವಡಿಸಲಾಗಿದೆ.
ಆಸ್ಪತ್ರೆಯು ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಕನಸಿನ ಕೂಸು. ಹರಿದ್ವಾರದಲ್ಲಿರುವ ಬಡ ಜನರ ಹಾಗೂ ಸಾಧು ಸಂತರಿಗೆ ಉಚಿತ ಸೇವೆ ಕಲ್ಪಿಸಬೇಕೆಂಬುದು ಅವರ ಆಶಯವಾಗಿತ್ತು. ಇದನ್ನು ಅರಿತುಕೊಂಡ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಆಸ್ಪತ್ರೆಯ ನವೀಕರಣ ಕಾರ್ಯ ಆರಂಭಿಸಿದ್ದರು. ಈಗ ಆಸ್ಪತ್ರೆಯನ್ನು ಅತ್ಯಾಧುನಿಕ ಮಾದರಿಯಲ್ಲಿ ರೂಪಿಸಲಾಗಿದ್ದು, ಎಲ್ಲ ವಿಧದ ಚಿಕಿತ್ಸೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆಸ್ಪತ್ರೆಯು ಹರಿದ್ವಾರದ ಶ್ರೀ ವೇದವ್ಯಾಸ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರಾದ ಗಣೇಶ್ ಮಲ್ಯ ಹೊಸದಿಲ್ಲಿ, ಹರಿದ್ವಾರ ವ್ಯವಸ್ಥಾಪಕ ಸಮಿತಿಯ ಸುರೇಶ ಶೆಣೈ, ವಸಂತ್ ಶೆಣೈ, ರಮಾನಂದ ಭಟ್ ಚೇಂಪಿ, ಡಾ| ಅನಂತ್ ಕಿಣಿ, ಡಾ| ನಾಗರಾಜ್ ಕಾಮತ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ| ವಿಕ್ರಾಂತ್, ಡಾ| ಅಂಕುರ್, ಸತೀಶ್ ಪೈ, ಜಯಸಿಂಹ ಪೈ ಉಪಸ್ಥಿತರಿದ್ದರು.