ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾಗಿದ್ದ ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿ ಅವರ ದ್ವಿತೀಯ ಪುಣ್ಯತಿಥಿ ಆರಾಧನಾ ಮಹೋತ್ಸವದ ಪ್ರಯುಕ್ತ ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ವತಿಯಿಂದ “ಗುರು ಸ್ಮರಣೆ’ ಮಂಗಳೂರಿನ ಸಂಘನಿಕೇತನದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಹಾಗೂ ಸಮಾಜದ ಮುಖಂಡ ಡಾ| ಪಿ. ದಯಾನಂದ ಪೈ ಮಾತನಾಡಿ, ಶ್ರೀ ಕಾಶೀ ಮಠ ಸಂಸ್ಥಾನದ ಜತೆಗೆ ಸಮಾಜವನ್ನೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಗೌಡ ಸಾರಸ್ವತ ಸಮಾಜ ಬಾಂಧವರು ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಕೊಡುಗೆ ಸಲ್ಲಿಸುವಂತಾಗಿದ್ದರೆ ಅದಕ್ಕೆ ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿ ಯವರ ಅನುಗ್ರಹವೇ ಕಾರಣ ಎಂದರು.
ತಮ್ಮ ಸನ್ಯಾಸ ಜೀವನದುದ್ದಕ್ಕೂ ಪರಮಾತ್ಮನ ಸೇವೆ, ಸಮಾಜದ ಉನ್ನತಿಗಾಗಿ ಪ್ರಾರ್ಥಿಸಿ, ಜತೆಗೆ ಸಮಗ್ರ ಜಿಎಸ್‌ಬಿ ಸಮಾಜವನ್ನು ಅಭಿವೃದ್ಧಿಯ ಪಥದಲ್ಲಿ ಶ್ರೇಷ್ಠತೆಯತ್ತ ಮುನ್ನಡೆಸಿದ ಹಿರಿಮೆ ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಸಮಸ್ತ ಶಿಷ್ಯವರ್ಗದ ಪಾಲಿಗೆ ಅಭಯ ದಾತರಾದ ಗುರುಗಳು ಸಮಾಜವನ್ನು ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾಗಿ ಉನ್ನತಿಗೇರಿಸಿದ್ದಾರೆ ಎಂದವರು ಹೇಳಿದರು.
ಪಂಡಿತ್ ನರಸಿಂಹ ಆಚಾರ್ ಮಾತನಾಡಿ, ಶ್ರೀ ಗುರುಗಳು ಭೌತಿಕ ಶರೀರವನ್ನಗಲಿ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದರೂ ಗುರು ವರ್ಯರ ದಿವ್ಯ ಚೇತನ ಇನ್ನೂ ಶಿಷ್ಯವರ್ಗದ ಮನೆ ಮನ ಗಳಲ್ಲಿ ನಂದಾದೀಪದಂತೆ ಬೆಳಗುತ್ತಲೇ ಇದೆ. ಸಮಾಜದ ಸರ್ವತೋಮುಖ ಅಭಿ ವೃದ್ಧಿಗೆ ಕಾರಣರಾದ ಗುರುವರ್ಯರನ್ನು ಸ್ಮರಿಸಿ ಗುರು ನಮನ ಸಲ್ಲಿಸುವುದು ಅಗತ್ಯ ಎಂದರು.
ಪ್ರಮುಖರಾದ ಚೇಂಪಿ ಶ್ರೀಕಾಂತ್ ಭಟ್, ನಾಮ್‌ದೇವ್ ಮಲ್ಯ, ಪದ್ಮನಾಭ ಪೈ, ಕಾಪು ನಾರಾಯಣ ಶೆಣೈ, ವಾಮನ್ ಕಾಮತ್, ರಾಧಾಕೃಷ್ಣ ಭಕ್ತ, ಗಣಪತಿ ಪೈ, ಜಗನ್ನಾಥ ಕಾಮತ್ ಮುಂತಾದವರು ಉಪಸ್ಥಿತರಿದ್ದರು. ಡಿ. ವೇದವ್ಯಾಸ ಕಾಮತ್ ಅವರು ಸ್ವಾಗತಿಸಿ ದರು. ಕೊಂಚಾಡಿ ರತ್ನಾಕರ ಕಾಮತ್ ಅವರು ವಂದಿಸಿ ದರು. ಗಣೇಶ್ ಪ್ರಸಾದ್ ಮಲ್ಯ ಕಾರ್ಯಕ್ರಮ ನಿರೂಪಿಸಿದರು.
ಗುರು ಸ್ಮರಣೆ
ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿ ಅವರ ದ್ವಿತೀಯ ಪುಣ್ಯತಿಥಿ ಆರಾಧನಾ ಮಹೋ ತ್ಸವದ ಪ್ರಯುಕ್ತ ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ವತಿಯಿಂದ “ಗುರು ಸ್ಮರಣೆ’ಯ ಗುರು ಗುಣಗಾನ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ, ಸಹಭೋಜನ, ಸಂಕೀರ್ತನೆ, ಶಿಷ್ಯ ವರ್ಗದಿಂದ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪಾಲ್ಗೊಂಡ ಸಮಾಜ ಬಾಂಧವರಿಗೆ ಶ್ರೀಗುರು ಗಳ ಸ್ಮರಣಿಕೆ ಹಾಗೂ ಶ್ರೀ ಕಾಶೀ ಮಠಾಧೀಶ ಶ್ರೀಮತ್‌ಸಂಯಮೀಂದ್ರತೀರ್ಥ ಸ್ವಾಮೀಜಿ ಯವರು ಸಮಾರಂಭಕ್ಕೆ ಆಶೀರ್ವಾದಪೂರ್ವಕ ಸಂಘಟಕರಿಗೆ ನೀಡಿದ ಮಂತ್ರಾಕ್ಷತೆಯ ಪ್ರಸಾದ ವನ್ನು ವಿತರಿಸಲಾಯಿತು.