ಕೊಲಂಬೋ : ಈಸ್ಟರ್ ಭಾನುವಾರದ ಆತ್ಮಾಹುತಿ ದಾಳಿಗೆ 40 ವಿದೇಶೀಯರ ಸಹಿತ 253 ಜನರನ್ನು ಬಲಿಪಡೆದಿರುವ ಇಸ್ಲಾಮಿಕ್ ಉಗ್ರರ ಭಯೋತ್ಪಾದಕ ಕೃತ್ಯಗಳಿಂದಾಗಿ ಲಂಕೆಯ ಪ್ರಧಾನ ಆದಾಯ ಮೂಲಗಳಲ್ಲಿ ಒಂದಾಗಿರುವ ಪ್ರವಾಸೋದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದೆ.
ವಿದೇಶೀ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸೀ ತಾಣಗಳಲ್ಲಿನ ವೈಭವೋಪೇತ ಪಂಚತಾರಾ ಹೊಟೇಲುಗಳ ಉದ್ಯಮ ಬಹುತೇಕ ನಿಲುಗಡೆಯನ್ನು ತಲುಪಿದೆ. ಈ ಹೊಟೇಲುಗಳೆಲ್ಲ ಈಗ ಖಾಲಿ ಖಾಲಿ.
ಈ ಸಂದರ್ಭದಲ್ಲಿ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಹೊಟೇಲ್ ಮಾಲಕರಿಗೆ ಸರಕಾರದಿಂದ ಗರಿಷ್ಠ ಸಾಧ್ಯ ಹಣಕಾಸು ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಲಂಕಾ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಗರಿಷ್ಠ ನೆರವು ನೀಡುವುದಾಗಿ ಹೇಳಿದ್ದಾರೆ.
ಲಂಕೆಯ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಶೇ.5ರಷ್ಟಿದೆ. 2018ರಲ್ಲಿ 23 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವ ಲಂಕೆಗೆ ಭಾರತವು ಬೃಹತ್ ಸಂಪನ್ಮೂಲ ಮಾರುಕಟ್ಟೆಯಾಗಿದೆ.
ಕಳೆದ ವರ್ಷ ಸುಮಾರು 4.50 ಲಕ್ಷ ಭಾರತೀಯರು ಲಂಕಾ ಪ್ರವಾಸ ಕೈಗೊಂಡಿದ್ದರು. ಈ ವರ್ಷ ಅದು 10 ಲಕ್ಷ ದಾಟುವ ನಿರೀಕ್ಷೆ ಇತ್ತು. ಆದರೆ ಈ ನಡುವೆ ನಡೆದಿರುವ ಇಸ್ಲಾಮಿಕ್ ಉಗ್ರ ದಾಳಿಯ ಪರಿಣಾಮವಾಗಿ ಲಂಕೆಯ ಪ್ರವಾಸೋದ್ಯಮ ನೆಲಕಚ್ಚಿದೆ ಎಂದು ಮೂಲಗಳು ತಿಳಿಸಿವೆ.