ಹೊಸದಿಲ್ಲಿ: ಮುಂದಿನ ವರ್ಷಾರಂಭದ ದಕ್ಷಿಣ ಆಫ್ರಿಕಾ ಪ್ರವಾಸ ಅತ್ಯಂತ ಸವಾಲಿನದ್ದಾಗಿದ್ದು, ಇದಕ್ಕೆ ಶ್ರೀಲಂಕಾ ವಿರುದ್ಧದ ಸರಣಿ ಉತ್ತಮ ಅಭ್ಯಾಸವಾಗಿ ಪರಿಣಮಿಸಲಿದೆ ಎಂಬುದಾಗಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧ ನಾವು ತವರಿನಲ್ಲಿ ಪೂರ್ಣ ಪ್ರಮಾಣದ ಸರಣಿ ಆಡುವುದಿದ್ದರೂ ವರ್ಷಾರಂಭದ ದಕ್ಷಿಣ ಆಫ್ರಿಕಾ ಪ್ರವಾಸದ ಸವಾಲು ದೊಡ್ಡದು. ಇದಕ್ಕೆ ಲಂಕಾ ವಿರುದ್ಧದ ಸರಣಿ ನಮ್ಮೆಲ್ಲರ ಪಾಲಿಗೆ ಅಭ್ಯಾಸವಾಗಿ ಪರಿಣಮಿಸಲಿದೆ. ಒಮ್ಮೆ ಲಂಕಾ ಎದುರು ಟೆಸ್ಟ್ ಪಂದ್ಯಗಳು ಮೊದಲ್ಗೊಂಡೊಡನೆ ದಕ್ಷಿಣ ಆಫ್ರಿಕಾ ಸರಣಿಯನ್ನೂ ಗಂಭೀರವಾಗಿ ತೆಗೆದುಕೊಳ್ಳಲಿದ್ದೇವೆ. ಸೂಕ್ತ ಕಾರ್ಯತಂತ್ರ, ಯೋಜನೆ ಬಗ್ಗೆ ಚರ್ಚೆ ಮೊದಲ್ಗೊಳ್ಳಲಿದೆ ಎಂದು ಪೂಜಾರ ಹೇಳಿದರು.
ಪ್ರತಿಯೊಂದು ಸರಣಿಗೂ ಮುನ್ನ ತನ್ನದೇ ಆದ ತಯಾರಿ ಹಾಗೂ ಅಭ್ಯಾಸ ನಡೆಸುತ್ತೇನೆ ಎಂದು ವೈಯಕ್ತಿಕ ಸಿದ್ಧತೆ ಬಗ್ಗೆ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಿಳಿಸಿದರು.
ಕಳೆದ ಶ್ರೀಲಂಕಾ ಸರಣಿಯ ಗಾಲೆ ಹಾಗೂ ಕೊಲಂಬೊ ಟೆಸ್ಟ್‌ಗಳಲ್ಲಿ 153 ಹಾಗೂ 133 ರನ್ ಬಾರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ ಹೆಗ್ಗಳಿಕೆ ಪೂಜಾರ ಅವರದು. ಈ ಸಂದರ್ಭದಲ್ಲಿ ಲಂಕಾ ಬೌಲಿಂಗ್ ದಾಳಿ ದುರ್ಬಲವಾಗಿತ್ತು ಎಂಬುದನ್ನೂ ಅವರು ಒಪ್ಪಿಕೊಳ್ಳುತ್ತಾರೆ.
ಶ್ರೀಲಂಕಾ ಬೌಲಿಂಗ್ ಶ್ರೇಷ್ಠ ಮಟ್ಟದ್ದಾಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಟೆಸ್ಟ್ ಪಂದ್ಯಗಳಲ್ಲಿ ರನ್ನುಗಳು ಅಷ್ಟು ಸುಲಭದಲ್ಲಿ ಬರುವುದಿಲ್ಲ. ಒಂದೊಂದು ರನ್ನಿಗೂ ಭಾರೀ ಹೋರಾಟ ನಡೆಸಬೇಕಾಗುತ್ತದೆ. ನಮ್ಮ ಪಾಲಿಗೆ ಪ್ರತಿಯೊಂದೂ ಹೊಸ ಸರಣಿ ಆಗಿರುತ್ತದೆ. ಎದುರಾಳಿಗೆ ಹೊಂದಿಕೊಂಡು ನಮ್ಮ ಆಟದ ತೀಕ್ಷ್ಣತೆಯೇನೂ ಬದಲಾಗದು. ಶ್ರೀಲಂಕಾ ಕೂಡ ಒಂದು ಅಂತಾರಾಷ್ಟ್ರೀಯ ತಂಡ. ಉಳಿದ ತಂಡಗಳಿಗೆ ಕೊಡುವಷ್ಟೇ ಗೌರವವನ್ನು ಅವರಿಗೂ ನೀಡಬೇಕು ಎಂದರು ಪೂಜಾರ.