Advertisement

ಕುಲಶೇಖರ ಕ್ರಿಕೆಟ್‌ನಿಂದ ದೂರ

11:35 PM Jul 24, 2019 | Sriram |

ಕೊಲಂಬೊ: ಶ್ರೀಲಂಕಾದ ಅನುಭವಿ ಸ್ವಿಂಗ್‌ ಬೌಲರ್‌ ನುವಾನ್‌ ಕುಲಶೇಖರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಇನ್ನೇನು ಲಂಕೆಯ ಮತ್ತೋರ್ವ ಹಿರಿಯ ಬೌಲರ್‌ ಲಸಿತ ಮಾಲಿಂಗ ನಿವೃತ್ತಿಯ ಕ್ಷಣಗಣನೆಯಲ್ಲಿರುವಾಗಲೇ ಕುಲಶೇಖರ ಅವರ ವಿದಾಯದ ಸುದ್ದಿ ಹೊರಬಿದ್ದಿದೆ.

Advertisement

ಕುಲಶೇಖರ ಅವರ ಗಮನಾರ್ಹ ಸಾಧನೆ ದಾಖಲಾದದ್ದೇ ಏಕದಿನದಲ್ಲಿ. ನಂಬರ್‌ ವನ್‌ ಬೌಲರ್‌ ಕೂಡ ಆಗಿದ್ದ ನುವಾನ್‌ ಕುಲಶೇಖರ 184 ಪಂದ್ಯಗಳಿಂದ 199 ವಿಕೆಟ್‌ ಉರುಳಿಸಿದ್ದಾರೆ. ಲಂಕೆಯ ಬೌಲಿಂಗ್‌ ಸಾಧಕರ ಯಾದಿಯಲ್ಲಿ ಅವರಿಗೆ 5ನೇ ಸ್ಥಾನ. 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಬ್ರಿಸ್ಬೇನ್‌ನಲ್ಲಿ 22ಕ್ಕೆ 5 ವಿಕೆಟ್‌ ಉರುಳಿಸಿದ್ದು ಅವರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವಾಗಿದೆ.

2017ರಲ್ಲಿ ಕೊನೆಯ ಪಂದ್ಯ
2003ರಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನಕ್ಕೆ ಪದಾರ್ಪಣೆ ಮಾಡಿದ ಕುಲಶೇಖರ, 2017ರ ಜು. 19ರಂದು ಕೊನೆಯ ಪಂದ್ಯವಾಡಿದ್ದರು. ಈ ಪಂದ್ಯವಾಡಿದ 2 ವರ್ಷಗಳ ಬಳಿಕ ಕುಲಶೇಖರ ಅವರ ನಿವೃತ್ತಿ ಪ್ರಕಟಗೊಂಡಿದೆ.

ಕುಲಶೇಖರ ಅಪರೂಪಕ್ಕೊಮ್ಮೆ ಬ್ಯಾಟಿಂಗ್‌ನಲ್ಲೂ ಕ್ಲಿಕ್‌ ಆದದ್ದುಂಟು. 2012ರ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಬಿರುಸಿನ 73 ರನ್‌ ಬಾರಿಸಿದ್ದೇ ಇದಕ್ಕೆ ಸಾಕ್ಷಿ.

2005-14ರ ಅವಧಿಯಲ್ಲಿ 21 ಟೆಸ್ಟ್‌ ಗಳನ್ನಾಡಿದ ಕುಲಶೇಖರ, 48 ವಿಕೆಟ್‌ ಉರುಳಿಸಿದ್ದಾರೆ. 58 ಟಿ20 ಪಂದ್ಯಗಳಲ್ಲಿ 66 ವಿಕೆಟ್‌ ಹಾರಿಸಿದ್ದಾರೆ. 2014ರ ಟಿ20 ವಿಶ್ವಕಪ್‌ ವಿಜೇತ ಶ್ರೀಲಂಕಾ ತಂಡದ ಸದಸ್ಯರೂ ಆಗಿದ್ದರು.

Advertisement

ವಿದಾಯ ಪಂದ್ಯಕ್ಕೆ ಆಯ್ಕೆ ಸಮಿತಿ ನಿಯಮ ಅಡ್ಡಿ
ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯ ಲಸಿತ ಮಾಲಿಂಗ ಪಾಲಿಗೆ ವಿದಾಯ ಪಂದ್ಯವಾಗಲಿದೆ. ಆದರೆ ನುವಾನ್‌ ಕುಲಶೇಖರ ಅವರಿಗೆ ಈ ಭಾಗ್ಯ ಇಲ್ಲವಾಗಿದೆ. ಇದಕ್ಕೆ ಆಯ್ಕೆ ಮಂಡಳಿಯ ನಿಯಮ ಅಡ್ಡಿಯಾಗಿದೆ.

ತನಗೊಂದು ವಿದಾಯ ಪಂದ್ಯ ಏರ್ಪಡಿಸಿ ಎಂದು ನುವಾನ್‌ ಕುಲಶೇಖರ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯಲ್ಲಿ ವಿನಂತಿಸಿಕೊಂಡಿದ್ದರು. ಇದಕ್ಕೆ ಕ್ರೀಡಾ ಸಚಿವ ಹ್ಯಾರಿನ್‌ ಫೆರ್ನಾಂಡೊ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಇದಕ್ಕೆ ಆಯ್ಕೆ ಸಮಿತಿ ನಿಯಮ ಅಡ್ಡಿಯಾಗಿದೆ.ಕಳೆದ ಕೆಲವು ತಿಂಗಳಿಂದ ಯಾವುದೇ ದೇಶಿ ಕ್ರಿಕೆಟ್‌ನಲ್ಲಿ ಆಡದ ಕ್ರಿಕೆಟಿಗನೊಬ್ಬನನ್ನು ಏಕಾಏಕಿ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಲಂಕಾ ಆಯ್ಕೆ ಸಮಿತಿಯ ಖಡಕ್‌ ನಿರ್ಧಾರ.ಆದರೆ ಬಾಂಗ್ಲಾ ಸರಣಿಯ ಅಂತಿಮ ಏಕದಿನ ಪಂದ್ಯವನ್ನು ನುವಾನ್‌ ಕುಲಶೇಖರ ಅವರಿಗೆ ಅರ್ಪಿಸಲು ನಿರ್ಧರಿಸಲಾಗಿದೆ ಎಂದು ಫೆರ್ನಾಂಡೊ ಹೇಳಿದ್ದಾರೆ.

“ಮಂಡಳಿ, ಆಯ್ಕೆ ಸಮಿತಿಯ ನಿರ್ಧಾರದಲ್ಲಿ ನಾನು ಕೈ ಆಡಿಸುವುದಿಲ್ಲ. 3ನೇ ಪಂದ್ಯದ ವೇಳೆ ಕುಲಶೇಖರ ಕ್ರಿಕೆಟ್‌ ಸಾಧನೆಗೆ ಗೌರವ ಸಲ್ಲಿಸಲಾಗುವುದು. ಇದಕ್ಕಾಗಿ ಎಲ್ಲ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ’ ಎಂಬುದಾಗಿ ಕ್ರೀಡಾ ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next