ಕೊಲಂಬೋ: ತೀವ್ರ ಆರ್ಥಿಕ ಬಿಕ್ಕಟ್ಟು, ಔಷಧ, ಉಪಕರಣಗಳ ಕೊರತೆಯಿಂದಾಗಿ ದ್ವೀಪರಾಷ್ಟ್ರವಾದ ಶ್ರೀಲಂಕಾ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದನ್ನೂ ಕೂಡಾ ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ (ಮಾರ್ಚ್ 29) ಶ್ರೀಲಂಕಾದಲ್ಲಿನ ಆಸ್ಪತ್ರೆಗಳಿಗೆ ನೆರವು ನೀಡುವಂತೆ ಭಾರತೀಯ ಹೈಕಮಿಷನರ್ ಗೆ ಸೂಚಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 350 ಅಂಕ ಜಿಗಿತ, 17,300 ಅಂಕಗಳ ಗಡಿ ದಾಟಿದ ನಿಫ್ಟಿ
“ಔಷಧಗಳ ಕೊರತೆಯಿಂದಾಗಿ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಪೆರಾಡೇನಿಯಾ ಆಸ್ಪತ್ರೆಯ ನಿರ್ದೇಶಕರು ಸೋಮವಾರ ಘೋಷಿಸಿದ್ದರು. ಈ ನಿಟ್ಟಿನಲ್ಲಿ ಔಷಧ ಕೊರತೆಯಿಂದ ಶಸ್ತ್ರಚಿಕಿತ್ಸೆ ನಡೆಸುವುದನ್ನು ಸ್ಥಗಿತಗೊಳಿಸಿರುವ ಶ್ರೀಲಂಕಾಕ್ಕೆ ಭಾರತದ ನೆರವಿನ ಬಗ್ಗೆ ಚರ್ಚೆ ನಡೆಸುವಂತೆ ಕೊಲಂಬೋದಲ್ಲಿರುವ ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೈ ಅವರಿಗೆ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಶ್ರೀಲಂಕಾದ ಈ ಸುದ್ದಿಯನ್ನು ಕೇಳಿ ವ್ಯಾಕುಲಗೊಂಡಿದ್ದೇನೆ. ಭಾರತ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬ ಕುರಿತು ಶ್ರೀಲಂಕಾದ ಅಧಿಕಾರಿಗಳ ಜತೆ ಚರ್ಚೆ ನಡೆಸುವಂತೆ ಬಾಗ್ಲೈಗೆ ತಿಳಿಸಿರುವುದಾಗಿ ಜೈಶಂಕರ್ ಹೇಳಿದರು.
ದ್ವೀಪರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ಔಷಧಗಳ ಕೊರತೆ ಉಂಟಾಗಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ಸರ್ಜರಿ ನಡೆಸಲ ಅಗತ್ಯವಿರುವ ಅನಸ್ತೇಶಿಯಾ, ಉಪಕರಣಗಳ ಕೊರತೆ ಎದುರಿಸುವಂತಾಗಿದೆ ಎಂದು ವರದಿ ವಿವರಿಸಿದೆ.