ಡಂಬುಲ: ವೇಗಿ ಕಾಗಿಸೊ ರಬಾಡ ಹಾಗೂ ಸ್ಪಿನ್ನರ್ ತಬ್ರೇಜ್ ಶಂಸಿ ದಾಳಿಗೆ ತತ್ತರಿಸಿದ ಶ್ರೀಲಂಕಾ, ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ ಸೋಲನುಭವಿಸಿದೆ. ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿದ್ದ ಹರಿಣಗಳ ಪಡೆಯೀಗ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೇಡು ತೀರಿಸಲು ಹೊರಟಂತಿದೆ.
ರವಿವಾರ ಡಂಬುಲದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದ ಶ್ರೀಲಂಕಾ 34.3 ಓವರ್‌ಗಳಲ್ಲಿ 193 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 31 ಓವರ್‌ಗಳಲ್ಲಿ 5 ವಿಕೆಟಿಗೆ 196 ರನ್ ಬಾರಿಸಿ ಗೆಲುವು ಸಾಧಿಸಿತು.
ರಬಾಡ ಮತ್ತು ಶಂಸಿ ತಲಾ 4 ವಿಕೆಟ್ ಹಾರಿಸಿ ಶ್ರೀಲಂಕಾದ ಬ್ಯಾಟಿಂಗ್ ಸರದಿಯನ್ನು ಸೀಳಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕುಸಲ್ ಪೆರೆರ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು 81 ರನ್ (72 ಎಸೆತ, 11 ಬೌಂಡರಿ, 1 ಸಿಕ್ಸರ್) ಮಾಡದೇ ಹೋಗಿದ್ದಲ್ಲಿ ಲಂಕಾ ಸ್ಥಿತಿ ಇನ್ನಷ್ಟು ಶೋಚನೀಯವಾಗುತ್ತಿತ್ತು.
ಲಂಕೆಯ 5 ವಿಕೆಟ್ 36 ರನ್ ಆಗುವಷ್ಟರಲ್ಲಿ ಹಾರಿಹೋಗಿತ್ತು. ಕುಸಲ್ ಪೆರೆರ-ತಿಸರ ಪೆರೆರ 6ನೇ ವಿಕೆಟಿಗೆ 92 ರನ್ ಜತೆಯಾಟ ನಡೆಸಿ ಕುಸಿತಕ್ಕೆ ತಡೆಯಾದರು. ತಿಸರ ಪೆರೆರ 30 ಎಸೆತಗಳಿಂದ 49 ರನ್ ಹೊಡೆದರು (8 ಬೌಂಡರಿ).
ದಕ್ಷಿಣ ಆಫ್ರಿಕಾ ಪರ ಜೆಪಿ ಡ್ಯುಮಿನಿ ಅಜೇಯ 53 ರನ್ ಹೊಡೆದರು. ಕ್ವಿಂಟನ್ ಡಿ ಕಾಕ್, ನಾಯಕ ಫಾಡು ಪ್ಲೆಸಿಸ್ ತಲಾ 47 ರನ್ ಮಾಡಿದರು.
ದ್ವಿತೀಯ ಪಂದ್ಯ ಬುಧವಾರ ಡಂಬುಲದಲ್ಲೇ ನಡೆಯಲಿದ್ದು, ಇದು ಡೇ-ನೈಟ್ ಮುಖಾಮುಖೀಯಾಗಿದೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-34.3 ಓವರ್‌ಗಳಲ್ಲಿ 193 (ಕುಸಲ್ ಪೆರೆರ 81, ತಿಸರ ಪೆರೆರ 49, ಶಂಸಿ 33ಕ್ಕೆ 4, ರಬಾಡ 41ಕ್ಕೆ 4). ದಕ್ಷಿಣ ಆಫ್ರಿಕಾ-31 ಓವರ್‌ಗಳಲ್ಲಿ 5 ವಿಕೆಟಿಗೆ 196 (ಡುಮಿನಿ ಔಟಾಗದೆ 53, ಡಿ ಕಾಕ್ 47, ಡು ಪ್ಲೆಸಿಸ್ 47, ಧನಂಜಯ 50ಕ್ಕೆ 3). ಪಂದ್ಯಶ್ರೇಷ್ಠ: ತಬ್ರೇಜ್ ಶಂಸಿ.