Advertisement

ಶ್ರೀಲಂಕಾದಲ್ಲಿ ಮತ್ತೆ ರಕ್ತಪಾತ

02:47 AM Apr 22, 2019 | Team Udayavani |

ಕೊಲಂಬೋ: ಈಸ್ಟರ್‌ ದಿನವಾದ ರವಿವಾರ ದ್ವೀಪರಾಷ್ಟ್ರ ಶ್ರೀಲಂಕಾ ದಲ್ಲಿ ಭೀಕರ ಆತ್ಮಾಹುತಿ ದಾಳಿ ನಡೆದಿದೆ. ಚರ್ಚ್‌ಗಳಲ್ಲಿ ಪ್ರಾರ್ಥನೆಯಲ್ಲಿ ನಿರತ ರಾಗಿದ್ದವರ ಮೇಲೆ ಮತ್ತು ವಿಲಾಸಿ ಹೊಟೇಲ್ಗಳಲ್ಲಿ ತಂಗಿದ್ದವರನ್ನು ಗುರಿಯಾಗಿರಿಸಿಕೊಂಡು ಬಾಂಬ್‌ ಸ್ಫೋಟಿಸ ಲಾಗಿದ್ದು, ಕನಿಷ್ಠ 215 ಮಂದಿ ಸಾವಿ ಗೀಡಾಗಿದ್ದಾರೆ. 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Advertisement

ಅಸುನೀಗಿದವರಲ್ಲಿ ಮಂಗಳೂರು ಸಮೀಪದ ಸುರತ್ಕಲ್ ನಿವಾಸಿ ರಝೀನಾ ಮತ್ತು ಇನ್ನೂ ಇಬ್ಬರು ಭಾರತೀಯರು ಸೇರಿದ್ದಾರೆ. 2009ರ ವರೆಗೆ ಆ ರಾಷ್ಟ್ರದಲ್ಲಿ ಹಿಂಸಾಕೃತ್ಯಗಳಿಗೆ ಕಾರಣವಾಗುತ್ತಿದ್ದ ಎಲ್ಟಿಟಿಇ ಉಗ್ರ ಸಂಘಟನೆಯನ್ನು ಮಟ್ಟ ಹಾಕಿದ ಬಳಿಕ ಅಲ್ಲಿ ಇಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ.

ಶ್ರೀಲಂಕೆಯ ಇತಿಹಾಸದಲ್ಲಿಯೇ ಇದು ಅತ್ಯಂತ ಭೀಕರ ದಾಳಿ ಎಂದೇ ಹೇಳಲಾಗಿದೆ. ಕೊಲಂಬೋದಲ್ಲಿನ ಸೈಂಟ್ ಆ್ಯಂಟನಿ ಚರ್ಚ್‌, ಪಶ್ಚಿಮ ಕರಾವಳಿ ನಗರ ನೆಗೊಂಬೋದಲ್ಲಿನ ಸೈಂಟ್ ಸೆಬಾಸ್ಟಿಯನ್‌ ಚರ್ಚ್‌, ಪೂರ್ವ ಭಾಗದ ಬಟ್ಟಿಕಲೋವಾದಲ್ಲಿನ ಮತ್ತೂಂದು ಚರ್ಚ್‌ನಲ್ಲಿ ಏಕಕಾಲಕ್ಕೆ ರವಿವಾರ ಬೆಳಗ್ಗೆ 8.45ಕ್ಕೆ ಸ್ಫೋಟ ಸಂಭವಿಸಿದೆ. ಇದರ ಜತೆಗೆ ಮೂರು ಪಂಚತಾರಾ ಹೊಟೇಲ್ಗಳಾಗಿರುವ ದ ಶಾಂಗ್ರೀಲಾ, ದ ಸಿನ್ನಮಾನ್‌ ಗ್ರ್ಯಾಂಡ್‌ ಮತ್ತು ಕಿಂಗ್ಸ್‌ಬರಿಗಳಲ್ಲಿಯೂ ಸ್ಫೋಟಗಳು ನಡೆದಿವೆ. ಅಪರಾಹ್ನದ ಬಳಿಕ ರಾಜಧಾನಿ ದಕ್ಷಿಣ ಭಾಗದ ಹೊರವಲಯದಲ್ಲಿರುವ ಮೃಗಾಲಯದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಅಸುನೀಗಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ರಜೆ
ಘಟನೆಯ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ. ಜತೆಗೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣವನ್ನೂ ಹೇರಲಾಗಿದೆ. ಹತ್ತು ದಿನಗಳ ಹಿಂದಷ್ಟೇ ಭಾರತದ ರಾಯಭಾರ ಕಚೇರಿ, ಚರ್ಚ್‌ಗಳ ಸಹಿತ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಯಲಿದೆ ಎಂಬ ಎಚ್ಚರಿಕೆಯೂ ರವಾನೆಯಾಗಿತ್ತು. ಯಾವುದೇ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತತ್‌ಕ್ಷಣವೇ ಶೋಧ ಕಾರ್ಯ ನಡೆಸಲಾಗಿದ್ದು 13 ಮಂದಿ ಶಂಕಿತರನ್ನು ಬಂಧಿಸಲಾಗಿದೆ.

ಕರ್ಫ್ಯೂ, ಕಟ್ಟೆಚ್ಚರ
ಸರಣಿ ಬಾಂಬ್‌ ಸ್ಫೋಟದ ಬಳಿಕ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ. ವಿಮಾನ ನಿಲ್ದಾಣ ಸಹಿತ ಆಯಕಟ್ಟಿನ ತಾಣ ಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ದೇಶಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.

Advertisement

ಭಾರತ, ಪಾಕ್‌ ಅಮೆರಿಕ, ಡೆನ್ಮಾರ್ಕ್‌, ಜಪಾನ್‌, ಚೀನ, ಬಾಂಗ್ಲಾದೇಶಗಳ 35 ಪ್ರಜೆಗಳು ಅಸುನೀಗಿದ್ದಾರೆ. ಭಾರತದ ರಾಷ್ಟ್ರಪತಿ ಕೋವಿಂದ್‌, ಉಪ ರಾಷ್ಟ್ರಪತಿ ನಾಯ್ಡು, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಘಟನೆಯನ್ನು ಖಂಡಿಸಿದ್ದಾರೆ.

ಘಟನೆಯನ್ನು ಖಂಡಿಸುತ್ತೇನೆ. ನಮ್ಮ ಸರಕಾರ ಇದರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಲು ಎಲ್ಲರೂ ಸಹಕರಿಸಬೇಕು.
-ರನಿಲ್ ವಿಕ್ರಮಸಿಂಘೆ, ಶ್ರೀಲಂಕಾ ಪ್ರಧಾನಿ

ಶ್ರೀಲಂಕಾದಲ್ಲಿ ನಡೆದ ಭೀಕರ ಘಟನೆಯನ್ನು ಖಂಡಿಸುತ್ತೇನೆ. ನಮ್ಮ ನಡುವೆ ಇಂಥ ಘಟನೆಗಳಿಗೆ ಆಸ್ಪದವೇ ಇಲ್ಲ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತವು ಶ್ರೀಲಂಕಾ ಜತೆಯಲ್ಲಿ ನಿಲ್ಲಲಿದೆ. ಅಸುನೀಗಿದವರಿಗೆ ನನ್ನ ಶ್ರದ್ಧಾಂಜಲಿ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ.
-ನರೇಂದ್ರ ಮೋದಿ, ಪ್ರಧಾನಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next