Advertisement

ಮಾ. 13: ಕೃಷ್ಣ ಮಠದ ಸ್ವರ್ಣಗೋಪುರಕ್ಕೆ ಚಾಲನೆ

12:30 AM Mar 09, 2019 | |

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನದ ತಗಡು ಅಳವಡಿಸುವ ಕಾರ್ಯಕ್ಕೆ ಮಾ. 13ರ ಮಧ್ಯಾಹ್ನ 12.10ಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಸುವರ್ಣ ಹೊದಿಕೆಯ ಪೂರ್ವಭಾವಿಯಾಗಿ 
ಮಾ. 12ರಂದು ಹೋಮ, ಧಾರ್ಮಿಕ ವಿಧಿ ವಿಧಾನಗ‌ಳನ್ನು ನೆ‌ರವೇರಿಸಲಾಗುತ್ತದೆ. ಮಾ. 13ರಂದು ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಿಖರ ಕಲಶವನ್ನು ಕೆಳಗಿಳಿಸಿ ಮೇಲ್ಛಾವಣಿಯ ನವೀಕರಣ ಕೆಲಸ ಆರಂಭಿಸಲಾಗುತ್ತದೆ ಎಂದರು.

ಕೆಲಸ ಪೂರ್ಣಗೊಳ್ಳುವ ವರೆಗೆ ಪೂಜೆಗಳನ್ನು ಪೂರ್ವಾಹ್ನ 11 ಗಂಟೆಗೆ ಮುಗಿಸಿ, ಗರ್ಭಗೃಹ ಬಾಗಿಲು ಮುಚ್ಚಿದ ಬಳಿಕ ಸುವರ್ಣ ಹೊದಿಕೆಯ ಕೆಲಸ ಆರಂಭಿಸಲಾಗುವುದು. ಸಂಜೆ 5 ಗಂಟೆಗೆ ಕೆಲಸ ಮುಗಿಸಿ ರಾತ್ರಿ ದೇವರಿಗೆ ನಿತ್ಯ ಪೂಜೆಯ ಬಳಿಕ ಮತ್ತೆ ಕೆಲಸ ಮುಂದುವರಿಯಲಿದೆ. ಮರುದಿನ ಕವಾಟೋದ್ಘಾಟನೆಯ ಮೊದಲು ಕೆಲಸವನ್ನು ಮುಗಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಶ್ರೀಕೃಷ್ಣ ದೇವರಿಗೆ ನಿತ್ಯ ನಡೆಯುವ ಎಲ್ಲ ಸೇವೆಗಳು ಅಬಾಧಿತವಾಗಿದ್ದು, ಉತ್ಸವಾದಿಗಳು ಯಥಾಪ್ರಕಾರ ನಡೆಯಲಿವೆ. ಆದರೆ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ಭಕ್ತರಿಗೆ ದೇವರ ದರ್ಶನಕ್ಕೆ ತೊಂದರೆಯಾಗದ ರೀತಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಮುಷ್ಟಿ ಕಾಣಿಕೆ 
ದೇವಾಲಯದ ಶಿಖರ ಅವರೋಹಣ ನಡೆಸಿದರೆ, ಆ ಊರಿನಲ್ಲಿ ನೆಲೆಸಿದ ಎಲ್ಲರೂ ಬ್ರಹ್ಮಕ‌ಲಶದ ವರೆಗೆ ದೀಕ್ಷಾಬದ್ಧರಾಗಬೇಕೆಂಬ ನಿಯಮವಿದೆ. ಅದನ್ನು ಎಲ್ಲರಿಗೂ ಪಾಲಿಸಲು ಸಾಧ್ಯವಾಗದೆ ಇರುವುದರಿಂದ ಪರ್ಯಾಯ ಮಾರ್ಗವಾಗಿ ಮುಷ್ಟಿ ಕಾಣಿಕೆ ಹಾಕಲು ಅವಕಾಶ ಕಲ್ಪಿಸಲಾಗಿದೆ. ಮಾ. 12ರಿಂದ ಮಠದಲ್ಲಿ ಮುಷ್ಟಿ ಕಾಣಿಕೆ ಹುಂಡಿಯನ್ನು ಇಡಲಾಗುತ್ತದೆ. ಭಕ್ತರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ವಾಸ್ತುತಜ್ಞ ಸುಬ್ರಹ್ಮಣ್ಯ ಅವಧಾನಿ ತಿಳಿಸಿದರು. ಚಿನ್ನದ ಗೋಪುರ ನಿರ್ಮಾಣ ಉಸ್ತುವಾರಿ ಯು. ವೆಂಕಟೇಶ ಶೇಟ್‌ ಉಪಸ್ಥಿತರಿದ್ದರು.

23 ಕ್ಯಾರೆಟ್‌ ಬಂಗಾರದ ಹಾಳೆಗಳನ್ನು ತಯಾರಿಸಲಾಗಿದ್ದು, ಗೋಪುರಕ್ಕೆ ಅಳವಡಿಸುವ ಮುನ್ನ ಎನ್‌ಐಟಿಕೆಯ ಪರಿಣತರಿಂದ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಮುಂದಿನ ಮೂರು ತಿಂಗಳ ಒಳಗಾಗಿ ಸುವರ್ಣಗೋಪುರ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ.
– ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ, ಉಡುಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next