ಪುತ್ತೂರು : ಹೆಣ್ಣು ಮಕ್ಕಳಿಗೆ ರಕ್ಷಣೆಯ ಸಂದೇಶ ಸಾರುವ ಮೂಲಕ ಅವರ ಪರ ನಿಂತ ಮಹಾನ್ ವ್ಯಕ್ತಿ ಶ್ರೀಕೃಷ್ಣ. ಸಾರ್ವಜನಿಕವಾಗಿ ಬೆಳೆದ ಶ್ರೀ ಕೃಷ್ಣ ಸಮಾಜಕ್ಕೆ ಗುರು, ಗೆಳೆಯ, ಹಿತೈಷಿಯಾದ ಮಹಾನ್ ನಾಯಕ ಎಂದು ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಯಾದವ ಸಂಘದ ವತಿಯಿಂದ ಸೋಮವಾರ ಅಪರಾಹ್ನ ನಗರದ ಪುರಭವನದಲ್ಲಿ ಆಯೋಜಿಸಲಾದ ಶ್ರೀಕೃಷ್ಣ ಜಯಂತಿಯನ್ನು ಅವರು ಉದ್ಘಾಟಿಸಿದರು.
ಶ್ರೀಕೃಷ್ಣನ ಪ್ರತಿಯೊಂದು ನಡೆಯಲ್ಲೂ ಜೀವನ ಸಂದೇಶವಿದೆ. ಅನುಸರಣೆ ಮಾಡುವ ರಾಜ ಕಾರಣಿಗಳಿಗೆ ಶ್ರೀ ಕೃಷ್ಣ ಅತ್ಯುತ್ತಮ ಗುರು. 16 ಸಾವಿರ ಹೆಣ್ಣಮಕ್ಕಳನ್ನು ಬಂಧಮುಕ್ತಗೊಳಿಸಿದ, ಧರ್ಮಯುದ್ಧ ಮಾಡಿ, ಧರ್ಮರಾಜ್ಯ ಸ್ಥಾಪಿಸಿ ಧರ್ಮರಾಯನಿಗೆ ಪಟ್ಟ ಕಟ್ಟಿದ ಮಾತೃತ್ವ, ಗೆಳೆತನದ ಮನಸ್ಸಿನ ಶ್ರೀಕೃಷ್ಣ ಪ್ರತಿಯೊಬ್ಬರಿಗೂ ಅನುಕರಣೀಯ ಅವತಾರ ಎಂದರು.
ಅನಂತ ವಿಚಾರಧಾರೆ
ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಉಪ್ಪಿನಂಗಡಿ ಸ.ಪ.ಪೂ. ಕಾಲೇಜಿನ ಅಧ್ಯಾಪಕ ಗುಡ್ಡಪ್ಪ ಗೌಡ ಬಲ್ಯ, ಶ್ರೀಕೃಷ್ಣನ ಜೀವನ ಸಂದೇಶದ ವಿಚಾರಧಾರೆಗಳೇ ಅನಂತ. ವಿಷ್ಣುವಿನ ಅವತಾರ ಗಳಲ್ಲಿ ಕೃಷ್ಣ ಪರಿಪೂರ್ಣ ಅವತಾರ. ಉದ್ಧರಣಕ್ಕಾಗಿ ಅವತಾರ ತಾಳಿದವ ಶ್ರೀಕೃಷ್ಣ ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಯಾದವ ಸಂಘದ ಅಧ್ಯಕ್ಷ ಇ.ಎಸ್. ವಾಸುದೇವ್ ಮಾತ ನಾಡಿ, ಸರಕಾರಿ ಮಟ್ಟದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ತಂದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ದರು. ಸವಣೂರಿನಲ್ಲಿ ಸಂಘದ 50 ಸೆಂಟ್ಸ್ ಜಾಗಕ್ಕೆ ಸರಕಾರದಿಂದ ಶಿಫಾರಸ್ಸು ಪತ್ರಕ್ಕಾಗಿ ಸಹಕಾರ ನೀಡುವಂತೆ ಶಾಸಕರಲ್ಲಿ ವಿನಂತಿಸಿದರು.
ತಾಲೂಕಿನ ವಿವಿಧೆಡೆ ಆಚರಣೆ
ಪುತ್ತೂರು ತಾಲೂಕಿನಾದ್ಯಂತ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ-ಸಡಗರದಿಂದ ನಡೆಯಿತು. ದೇವಾಲಯಗಳಲ್ಲಿ ಪೂಜೆ, ಮನೆಗಳಲ್ಲಿ ಅಷ್ಟಮಿಯ ಆಚರಣೆ ಭಕ್ತಿ, ಶ್ರದ್ಧೆಯಿಂದ ನಡೆಯಿತು.