ಉಡುಪಿ : ಶ್ರೀಕೃಷ್ಣಮಠದಲ್ಲಿ ಸುಮಾರು ಎರಡೂವರೆ ತಿಂಗಳ ಲಾಕ್‌ಡೌನ್ ಬಳಿಕ ರವಿವಾರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಭಕ್ತರ ಅಪೇಕ್ಷೆಗೆ ಅನುಗುಣವಾಗಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮೊದಲ ಹಂತದಲ್ಲಿ ಪ್ರತಿನಿತ್ಯ ಅಪರಾಹ್ನ 2ರಿಂದ ಸಂಜೆ 6 ಗಂಟೆವರೆಗೆ ದರ್ಶನಾವಕಾಶ ನೀಡುವ ನಿರ್ಧಾರಕ್ಕೆ ಬಂದರು. ಅದರಂತೆ ಮೊದಲ ದಿನ ಸುಮಾರು 1,160 ಭಕ್ತರು ದರ್ಶನ ಪಡೆದರು. ಇದರಲ್ಲಿ ಸುಮಾರು 1,000 ಮಂದಿ ಪರಸ್ಥಳದವರು, 160 ಮಂದಿ ಸ್ಥಳೀಯರು.
ಪರಸ್ಥಳದ ಭಕ್ತರು ನೂತನ ಮಾರ್ಗ ವಿಶ್ವಪಥದ ಮೂಲಕ ದರ್ಶನ ಪಡೆದರೆ ಸ್ಥಳೀಯ ಪಾಸು ಹೊಂದಿದ ಭಕ್ತರಿಗೆ ರಥಬೀದಿಯ ಮುಂಭಾಗ ಮತ್ತು ರಾಜಾಂಗಣ ಬಳಿಯ ಉತ್ತರ ದ್ವಾರದಿಂದ ಪ್ರವೇಶಾವಕಾಶ ನೀಡಲಾಯಿತು.
ಇದನ್ನೂ ಓದಿ :ಅಧಿಕಾರಕ್ಕೆ ಬಂದರೇ,ಕೋವಿಡ್ ನಿರ್ವಹಣೆಯ ಬಗ್ಗೆ ಲೆಕ್ಕ ಪರಿಶೋಧನೆ ಮಾಡ್ತೇವೆ: ಯಾದವ್ ವ್ಯಂಗ್ಯ
ವೈಯಕ್ತಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ದೇವರಿಗೆ ನೈವೇದ್ಯ ಮಾಡಿದ ಪಂಚಕಜ್ಜಾಯ, ಲಡ್ಡು ಇತ್ಯಾದಿ ಪ್ರಸಾದ ಲಭ್ಯವಿದ್ದು ಇದನ್ನು ಭಕ್ತರು ಪಡೆದುಕೊಂಡರು. ಸೇವೆ ಅವಕಾಶ, ಭೋಜನಪ್ರಸಾದವನ್ನು ಇನ್ನೂ ಆರಂಭಿಸಿಲ್ಲ.
ರವಿವಾರ ಕೃಷ್ಣಾಪುರ ಮಠ ಪರ್ಯಾಯದ ಕಟ್ಟಿಗೆ ಮುಹೂರ್ತವೂ ನಡೆದ ಕಾರಣ ಮುಹೂರ್ತಕ್ಕೆ ಬಂದ ಭಕ್ತರಿಗೂ ದೇವರ ದರ್ಶನಾವಕಾಶ ಆಯಿತು.