Advertisement

ಶ್ರೀಕೃಷ್ಣ ಮಠದಲ್ಲಿ ಸಕ್ಕರೆ, ಮೈದಾಗೆ ಪ್ರಾಯೋಗಿಕ ಖೊಕ್‌

09:52 AM Nov 24, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಲಾಗಾಯ್ತಿನಿಂದಲೂ ಟೊಮೆಟೊ, ಕ್ಯಾಬೇಜ್‌, ಹೂ ಕೋಸು, ಬೀಟ್‌ರೂಟ್‌, ಮೂಲಂಗಿ ಮೊದಲಾದ ತರಕಾರಿಗಳ ಬಳಕೆ ಇಲ್ಲ. ಇದರರ್ಥ ಶ್ರೀಕೃಷ್ಣ ಮಠದಲ್ಲಿ ಮಾತ್ರ ಇವುಗಳ ಬಳಕೆ ಇಲ್ಲ ಎಂದಲ್ಲ. ಸ್ವಾಮೀಜಿಯವರು ಎಲ್ಲೆಲ್ಲಿ ಸಂಚರಿಸುತ್ತಾರೋ ಅಲ್ಲೆಲ್ಲ ಈ ಪಾಲನೆ ನಡೆಯುತ್ತದೆ. ಪಾಲಕ್‌ ಮೊದಲಾದ ಸೊಪ್ಪುಗಳೂ ಇಲ್ಲ. ಪ್ರಾಯಃ ಇವುಗಳು ವಿದೇಶೀ ಮೂಲದಿಂದ ಬಂದವು ಎಂಬ ಕಾರಣವಿರಲೂಬಹುದು.

Advertisement

ಈಗ ಇವುಗಳ ಸಾಲಿಗೆ ಸಕ್ಕರೆ, ಮೈದಾ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದರ ಪ್ರಯೋಗ ಈಗಾಗಲೇ ಚಾಲ್ತಿಗೆ ಬಂದಿದೆ. ಯೊಗ ಗುರು ಬಾಬಾ ರಾಮ್‌ದೇವ್‌ ನ. 16ರಿಂದ 20ರ ವರೆಗೆ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪಲಿಮಾರು ಮಠದ ಸಹಕಾರದಲ್ಲಿ ನಡೆಸಿದ ಯೋಗ ಶಿಬಿರದಲ್ಲಿ ಸಕ್ಕರೆ ಮತ್ತು ಮೈದಾವನ್ನು ಸಂಪೂರ್ಣ ಕೈಬಿಡಿ ಎಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಪರಿಣಾಮವಾಗಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಇದರ ಪ್ರಯೋಗ ನಡೆಸಲು ಮುಂದಾಗಿದ್ದಾರೆ. ಈಗ ಸ್ವಾಮೀಜಿಯವರು ಶ್ರೀಕೃಷ್ಣ ಮಠದಲ್ಲಿ ಉಪಯೋಗಿಸುವ ನೈವೇದ್ಯ ಇತ್ಯಾದಿ ಖಾದ್ಯಗಳಿಗೆ ಸಕ್ಕರೆ ಮತ್ತು ಮೈದಾವನ್ನು ನಿಷೇಧಿಸಿದ್ದಾರೆ.

ಪಲಿಮಾರು ಕಿರಿಯ ಶ್ರೀ ಯೋಗಾಭ್ಯಾಸ
ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ರಾಮದೇವ್‌ ಅವರ ಕೊನೆಯ ದಿನದ ಯೋಗ ಶಿಬಿರದಂದು ಯೋಗಾಭ್ಯಾಸ ನಡೆಸಿದ್ದರು. ಮೂರು ದಿನಗಳಿಂದ ಅವರು ಬೆಳಗ್ಗೆ 4.15ರಿಂದ 5.15ರ ವರೆಗೆ ಯೋಗಾಭ್ಯಾಸ ನಡೆಸುತ್ತಿದ್ದಾರೆ. ಇವರಿಗೆ ಪತಂಜಲಿ ಯೋಗ ಸಮಿತಿ ಯೋಗ ಶಿಕ್ಷಕ ರಾಘವೇಂದ್ರ ಭಟ್‌ ಯೋಗಾಸನ, ಪ್ರಾಣಾಯಾಮಗಳನ್ನು ಕಲಿಸುತ್ತಿದ್ದಾರೆ. “ಸರಿಯಾಗಿ ಅಭ್ಯಾಸ ಮಾಡಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಸ್ವಾಮೀಜಿಯವರ ವಯಸ್ಸು ಮತ್ತು ದೇಹ ಎರಡೂ ಯೋಗಾಸನಗಳಿಗೆ ಸೂಕ್ತವಾಗಿದೆ. ಮುಂದೊಂದು ದಿನ ರಾಮದೇವ್‌ ಮಾಡುವ ನೌಲಿಯಂತಹ ಕ್ಲಿಷ್ಟಕರ ಪ್ರಯೋಗಗಳನ್ನು ಶ್ರೀ ವಿದ್ಯಾರಾಜೇಶ್ವರತೀರ್ಥರೂ ಮಾಡಲು ಸಾಧ್ಯ’ ಎಂದು ರಾಘವೇಂದ್ರ ಭಟ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ರಾಮದೇವ್‌ ಅವರು ಹೇಳಿದಾಗ ಸ್ವಾಮೀಜಿಯವರು ಸಕ್ಕರೆ, ಮೈದಾವನ್ನು ಕೈಬಿಡಲು ನಿರ್ಧರಿಸಿದರು. ಆದರೆ ಇದನ್ನು ಒಮ್ಮೆಲೆ ಸಾರ್ವಜನಿಕವಾಗಿ ಜಾರಿಗೊಳಿಸುವುದು ಕಷ್ಟ. ಆದರೂ ಪ್ರಾಯೋಗಿಕವಾಗಿ ನಿಷೇಧಿಸಿದ್ದೇವೆ. ರಾಮದೇವ್‌ ಅವರು ಸಕ್ಕರೆ ಬದಲು ಬೆಲ್ಲವನ್ನು ಬಳಸಬೇಕೆನ್ನುವಾಗ ಬಿಳಿ ಬೆಲ್ಲವಲ್ಲ, ಕಪ್ಪು ಬೆಲ್ಲವನ್ನು ಬಳಸಬೇಕೆನ್ನುತ್ತಾರೆ. ಇದು ರುಚಿಕರವಾಗಿದ್ದರೂ ಕಾಣಲು ಆಕರ್ಷಕವಾಗಿರುವುದಿಲ್ಲ. ಕೆಲವು ಸಿಹಿತಿಂಡಿಗಳಿಗೆ ಸ್ವಲ್ಪವಾದರೂ ಮೈದಾ ಹಾಕದಿದ್ದರೆ ಆಗುವುದಿಲ್ಲ. ಹೀಗೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಕ್ತರಿಗೆ ವಿತರಿಸುವ ಲಡ್ಡುಗಳನ್ನು ಬೆಲ್ಲದಿಂದ ಮಾಡಿದರೆ ಆಗಬಹುದೇ ಇತ್ಯಾದಿ ಅಧ್ಯಯನ ನಡೆಸಲಾಗುತ್ತಿದೆ.
– ಪ್ರಹ್ಲಾದ ಆಚಾರ್ಯ,
ಆಡಳಿತಾಧಿಕಾರಿಗಳು, ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠ, ಉಡುಪಿ.

ರಾಮದೇವ್‌ ಅವರು ಸಕ್ಕರೆ, ಮೈದಾ ತ್ಯಜಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದು ಮಾತ್ರವಲ್ಲ, ಸ್ವತಃ ಇವರೆಡನ್ನೂ ಬಿಟ್ಟಿದ್ದಾರೆ. ಇದು ಉಡುಪಿ ಭೇಟಿಯ ಸ್ಮರಣೆಗಾಗಿ. ಕೇವಲ ರಾಮದೇವ್‌ ಮಾತ್ರವಲ್ಲದೆ, ನೂರಾರು ಕುಟುಂಬಗಳು ಸಕ್ಕರೆ ಮತ್ತು ಮೈದಾ ಬಳಕೆಯನ್ನು ಕೈಬಿಟ್ಟಿರುವುದಾಗಿ ಹೇಳಿವೆ ಎಂದು ಪತಂಜಲಿ ಸಮಿತಿಯ ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ ಬೆಟ್ಟು ಮಾಡುತ್ತಾರೆ. ಒಂದರ್ಥದಲ್ಲಿ ರಾಮದೇವ್‌ ಮತ್ತು ಪಲಿಮಾರು ಮಠಾಧೀಶರ ನಡುವೆ ಕೊಡುಕೊಳ್ಳುವಿಕೆ ಒಪ್ಪಂದ ನಡೆದಿದೆ. ಇಬ್ಬರೂ ಸಕ್ಕರೆ ಮತ್ತು ಮೈದಾವನ್ನು ಬಿಡುವ ಒಡಂಬಡಿಕೆಯನ್ನು ಜಾರಿಗೆ ತಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next