Advertisement

ಭಕ್ತರಿಗೆ ತೆರೆಯಿತು ಶ್ರೀಕೃಷ್ಣ ಮಠ

10:55 PM Sep 28, 2020 | mahesh |

ಉಡುಪಿ: ಕೋವಿಡ್ ಸೋಂಕಿನ ಕಾರಣ ಭಕ್ತರ ಪ್ರವೇಶಕ್ಕೆ ನಿಷೇಧವಿದ್ದ ಶ್ರೀಕೃಷ್ಣ ಮಠದಲ್ಲಿ ಸುಮಾರು ಆರು ತಿಂಗಳ ಬಳಿಕ ಸೋಮವಾರ ಭಕ್ತರ ಪ್ರವೇಶ ಆರಂಭಗೊಂಡಿತು. ಶ್ರೀಕೃಷ್ಣ ಮಠದ ಚಂದ್ರ ಶಾಲೆಯಲ್ಲಿ ಪುನಃ ಪ್ರವೇಶದ ಸರಳ ಸಮಾರಂಭ ನೆರವೇರಿತು. ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾ ಧೀಶತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವ   ಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭತೀರ್ಥ ಶ್ರೀಪಾದರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಶುಭ ಕೋರಿದರು.

Advertisement

ಶುಭ ಸಂಕೇತ
ಪ್ರಾರ್ಥನೆ ಸಲ್ಲಿಸಿ ಮುಖ್ಯಪ್ರಾಣನ ದರ್ಶನ ಪಡೆಯುವಾಗ ಅಲಂಕರಿಸಿದ್ದ ಸೇವಂತಿಗೆ ಹಾರ ಕೆಳಗೆ ಬಿತ್ತು. “ಸೇವೆಯ ಅಂತಿಕೆ’ (ಸೇವೆಯ ಸ್ವೀಕಾರ) ಸಂಕೇತವಾಗಿದೆ ಎಂದು ಪಲಿಮಾರು ಸ್ವಾಮೀಜಿ ಹೇಳಿದರು. ಅನಂತರ ಮಧ್ವಾಚಾರ್ಯರ ಗುಡಿ ಎದುರು ದರ್ಶನ ಪಡೆಯುವಾಗ ಶ್ರೀಕೃಷ್ಣ ಮಠದಲ್ಲಿ ಎಂದಿನಂತೆ ಎರಡು ಗಂಟೆಯಾದ ಕಾರಣ ಎರಡು ಗಂಟೆಯ ನಿನಾದವಾಯಿತು. ಇದು ಮಧ್ವರ ಸಿದ್ಧಾಂತದಂತೆ ಘಟಿಸಿದೆ ಎಂದು ಇತರ ಶ್ರೀಪಾದರು ಅಭಿಪ್ರಾಯಪಟ್ಟರು.

ಹೊಸ ಮಾರ್ಗ
ಯಾತ್ರಾರ್ಥಿಗಳ ದರ್ಶನಕ್ಕೆ ಮಾರ್ಗವನ್ನು ಬದಲಾಯಿಸಲಾಗಿದೆ. ರಾಜಾಂ ಗಣದಿಂದ ಭೋಜನ ಶಾಲೆ ಉಪ್ಪರಿಗೆಯಲ್ಲಿ ತೆರಳಿ ಕೃಷ್ಣ ಮಠದ ಗರ್ಭಗುಡಿ ಎದುರು ಇಳಿಯುವ ಮತ್ತು ಅಲ್ಲಿಂದಲೇ ಮೆಟ್ಟಿಲು ಗಳನ್ನು ಏರಿ ನಿರ್ಗಮಿಸುವ ಹೊಸ ಮಾರ್ಗದಲ್ಲಿ ಎಲ್ಲ ಶ್ರೀಪಾದರು ತೆರಳಿ ದೇವರ ದರ್ಶನ ಪಡೆದ ಬಳಿಕ ಭಕ್ತರು ದರ್ಶನ ಪಡೆದರು. ಹೊಸ ಮಾರ್ಗವನ್ನು ರೂಪಿಸಿದ ಎಂಜಿನಿಯರ್‌ ಯು.ಕೆ. ರಾಘವೇಂದ್ರ ರಾವ್‌, ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ ಅವರನ್ನು ಸಮ್ಮಾನಿಸಲಾಯಿತು.

1,000ಕ್ಕೂ ಅಧಿಕ ಭಕ್ತರಿಂದ ದರ್ಶನ
ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ಮೊದಲ ದಿನ ಸುಮಾರು 1,000ಕ್ಕೂ ಅಧಿಕ ಭಕ್ತರು ದರ್ಶನ ಪಡೆದರು. ಪರಸ್ಥಳದ ಭಕ್ತರ ಮಾರ್ಗದರ್ಶನಕ್ಕಾಗಿ ಎರಡು ಕೌಂಟರ್‌ಗಳನ್ನು ತೆರೆಯಲಾಗಿದೆ. ಸ್ಥಳೀಯ ಭಕ್ತರಿಗೆ ರಥಬೀದಿ ಎದುರು ಭಾಗದಿಂದ ದರ್ಶನಕ್ಕೆ ಬಿಡಲಾಗುತ್ತಿದೆ. ಈಗ ಮೊದಲ ಹಂತದಲ್ಲಿ ನಿತ್ಯ ಅಪರಾಹ್ನ 2ರಿಂದ 5ರ ವರೆಗೆ ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಗುತ್ತಿದೆ.

ಎಳ್ಳೆಣ್ಣೆ ಬದಲು ಎಳ್ಳು ಸಮರ್ಪಣೆ
ಭಕ್ತರು ಕಾಲುದೀಪಕ್ಕೆ ಎಣ್ಣೆ ಹಾಕುತ್ತಿದ್ದ ಕ್ರಮವನ್ನು ಬದಲಾಯಿಸಲಾಯಿತು. ಮಾರು ಕಟ್ಟೆಯಲ್ಲಿ ಸಿಗುವ ಎಣ್ಣೆ ಶುದ್ಧ ಎಳ್ಳೆಣ್ಣೆ ಅಲ್ಲದಿರುವ ಕಾರಣ ಈ ಕ್ರಮವನ್ನು ಕೈಬಿಡಲಾಗಿದೆ. ಇದರ ಬದಲು ಎಳ್ಳನ್ನು ತಂದು ಒಪ್ಪಿಸಿದರೆ ಅದನ್ನು ಗಾಣಕ್ಕೆ ಕೊಟ್ಟು ಅಲ್ಲಿಂದ ಶುದ್ಧ ಎಳ್ಳೆಣ್ಣೆ ತರಿಸಿ ದೀಪಕ್ಕೆ ಬಳಸಲಾಗುತ್ತದೆ. ಮಠದ ಕೌಂಟರ್‌ನಲ್ಲಿಯೂ ಎಳ್ಳನ್ನು ಪಡೆದು ಸಲ್ಲಿಸಬಹುದು. ಇತರ ಮಠಾಧೀಶರು ಎಳ್ಳನ್ನು ಸಾಂಕೇತಿಕವಾಗಿ ಪರ್ಯಾಯ ಶ್ರೀಗಳಿಗೆ ಹಸ್ತಾಂತರಿ ಸಿದರು. ಇದಕ್ಕೆ ಭಕ್ತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮೊದಲ ದಿನವೇ ಸುಮಾರು 10 ಕೆಜಿ ಎಳ್ಳನ್ನು ಸಮರ್ಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next