Advertisement

ಶ್ರೀಕೃಷ್ಣ ಮಠ: 730 ದಿನಗಳ ಅಖಂಡ ಭಜನೆ ಸಮಾಪನ

10:20 AM Jan 18, 2020 | mahesh |

ಉಡುಪಿ: ಎರಡು ವರ್ಷ ಅಂದರೆ 730 ದಿನಗಳ ಕಾಲ ಅನುಕ್ಷಣವೂ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆದ ಗೋವಿಂದನಾಮ ಸ್ಮರಣೆ ಜ. 18ರ ಪ್ರಾತಃಕಾಲ ಸಮಾಪನಗೊಳ್ಳುತ್ತಿದೆ. 2 ವರ್ಷ ಅನುದಿನವೂ ನಡೆದ ಲಕ್ಷತುಳಸೀ ಅರ್ಚನೆ ಮತ್ತು ಲಕ್ಷ ವಿಷ್ಣುಸಹಸ್ರನಾಮಾರ್ಚನೆ ಜ. 17ರಂದು ಮುಕ್ತಾಯಗೊಂಡಿದೆ. ಇಂತಹ ಅದ್ಭುತ ಸೇವೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಸಂದಂತಾಗಿದೆ. ಗಿನ್ನೆಸ್‌ ದಾಖಲೆಗೆ ಸೇರುವಂಥದ್ದಾದರೂ ಅಂಥ ಪ್ರಯತ್ನ ನಡೆದಿಲ್ಲ.

Advertisement

ದಿನಕ್ಕೆ 6 ಭಜನ ಮಂಡಳಿಗಳೆಂದು ಲೆಕ್ಕ ಹಾಕಿದರೆ ಎರಡು ವರ್ಷಗಳಲ್ಲಿ 8,7ಚ60 ಮಂಡಳಿಗಳು ಭಾಗವಹಿಸಿ ದಂತಾಯಿತು. 2 ದಿನಗಳಿಗೊಮ್ಮೆ 6 ಮಂಡಳಿಗಳೆಂದು ಲೆಕ್ಕ ಹಾಕಿದರೆ 4,380 ತಂಡಗಳು ಭಾಗವಹಿಸಿದಂತಾಗುತ್ತದೆ. ಸರಾಸರಿ 20 ಜನರನ್ನು ಲೆಕ್ಕ ಹಾಕಿದರೆ 8,760 ತಂಡಗಳಲ್ಲಿ 1.75 ಲಕ್ಷಕ್ಕೂ ಹೆಚ್ಚು ಸದಸ್ಯರು ಶ್ರೀಕೃಷ್ಣನ ಸನ್ನಿಧಿಯಲ್ಲಿ ಭಜಿಸಿದಂತಾಗುತ್ತದೆ. ಒಮ್ಮೆ ಒಂದು ಪಾಳಿಯಲ್ಲಿ ಭಾಗವಹಿಸಿದವರನ್ನು ಗಣಿಸಿದರೆ ಭಜಕರ ಸಂಖ್ಯೆ 2 ಲಕ್ಷವನ್ನೂ ಮೀರಲಿದೆ.

ಇಷ್ಟೊಂದು ಸಂಖ್ಯೆಯ ಭಜನ ಮಂಡಳಿಗಳನ್ನು ಒದಗಿಸಿದವರು ತಿರುಪತಿ ಮತ್ತು ಮಂತ್ರಾಲಯದ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದವರು. ಅಖಂಡ ಭಜನೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ವಿವಿಧ ಜಾತಿಯವರು ಪಾಲ್ಗೊಂಡರು. ಹುಬ್ಬಳ್ಳಿ, ಆಂಧ್ರಪ್ರದೇಶದ ಕೌತಾಳಂನಿಂದ ಮುಸ್ಲಿಮರೂ ಬಂದು ದಾಸರ ಹಾಡುಗಳನ್ನು ಹಾಡಿ ಕೃಷ್ಣಾರ್ಪಣಗೊಳಿಸಿದರು.

ಇದರ ಸಂಪೂರ್ಣ ಸಮನ್ವಯಕಾರರಾಗಿದ್ದ ವರು ದಾವಣಗೆರೆಯ ನಿವೃತ್ತ ಎಂಜಿನಿಯರ್‌ ಕಂಪ್ಲಿ ಗುರುರಾಜ ಆಚಾರ್ಯ ಮತ್ತು ಪತ್ನಿ ಗೀತಾ ಗುರುರಾಜಾ ಚಾರ್ಯ. ಇವರು 2 ವರ್ಷ ಮನೆ ಬಿಟ್ಟು ಇಲ್ಲಿದ್ದು ಕಾರ್ಯನಿರ್ವಹಿಸಿದ್ದಾರೆ.

ನಿತ್ಯ ಲಕ್ಷಾರ್ಚನೆ
2018ರ ಜ. 18ರಂದು ಆರಂಭಗೊಂಡ ಲಕ್ಷ ತುಳಸೀ ಅರ್ಚನೆ 2020ರ ಜ. 17ರಂದು ಮುಕ್ತಾಯಗೊಂಡಿದೆ. ಇದು ಲಕ್ಷ ತುಳಸೀ ಅರ್ಚನೆ ಎಂದು ಪ್ರಸಿದ್ಧವಾದರೂ ಇದರೊಳಗೆ ಲಕ್ಷ ನಾಮ ಅರ್ಚನೆಯೂ ಸೇರಿಕೊಂಡಿತ್ತು.

Advertisement

50 ವೈದಿಕರು ವಿಷ್ಣುಸಹಸ್ರನಾಮವನ್ನು ಎರಡು ಬಾರಿ ಹೇಳಿದರೆ ಲಕ್ಷ ಸಲವಾಗುತ್ತದೆ. 108 ನಾಮಗಳು ಶ್ರೀಕೃಷ್ಣಾಷ್ಟೋತ್ತರದ ಶತನಾಮಾವಳಿಗಳು ಪ್ರತ್ಯೇಕ. 60 ವೈದಿಕರನ್ನು ನಿಗದಿಪಡಿಸಿದ್ದರು. ಇದಲ್ಲದೆ 10-15 ಜನರು ಸ್ವಯಂ ಇಚ್ಛೆಯಿಂದ ಸೇರಿದ್ದರಿಂದ ಒಟ್ಟಾರೆ ಲಕ್ಷಕ್ಕಿಂತ ಹೆಚ್ಚು ಬಾರಿ ವಿಷ್ಣು ಸಹಸ್ರನಾಮದ ಉಚ್ಚಾರಣೆ ನಡೆಯಿತು. ಇದರ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದವರು ಮುಂಬಯಿಯ ಪುರೋಹಿತರೂ ಜ್ಯೋತಿಷಿಗಳೂ ಆದ ಎಂ.ಪಿ. ಗುರುರಾಜ ಉಪಾಧ್ಯಾಯ ಮತ್ತು ಉಡುಪಿಯ ಪೂರ್ಣಚಂದ್ರ ಉಪಾಧ್ಯಾಯ ಅವರು.

ಎದ್ದು ನಿಂತ ತುಳಸೀವನಗಳು
ನಾನಾ ಕಡೆಗಳಲ್ಲಿ ತುಳಸೀ ವನಗಳು ನಿರ್ಮಾಣಗೊಂಡು ತುಳಸಿಪತ್ರಗಳು ಅವಿರತವಾಗಿ ಪೂರೈಕೆಯಾದವು. ಅರ್ಚನೆ ಯಾದ ತುಳಸಿ ಕುಡಿಗಳು ಪ್ರಸಾದ ರೂಪದಲ್ಲಿ ವಿನಿಯೋಗವಾದ ಬಳಿಕ ಉಳಿದುದನ್ನು ಉದ್ಯಾವರ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಔಷಧ ತಯಾರಿಗಾಗಿ ಬಳಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next