Advertisement

Sri Krishna Janmastami: ಚುಂಬಕ ವ್ಯಕ್ತಿತ್ವದ ಕೃಷ್ಣನೆಂಬ ಸೂಜಿಗಲ್ಲು!

02:23 AM Aug 26, 2024 | Team Udayavani |

ದ್ವಾಪರದ ಅಂತ್ಯಕ್ಕೆ ಇನ್ನೇನು 72 ವರ್ಷ ಉಳಿದಿತ್ತು. ಮುಂದೆ ಬರಲಿರುವುದೇ ಘೋರವಾದ ಕಲಿಯುಗ. ಈಗಾಗಲೇ ಭೂಮಿಯಲ್ಲಿ ಆಸುರ ಸ್ವಭಾವದ ಅರಸರ ಸಂಖ್ಯೆ ಹೆಚ್ಚಿತ್ತು. ಈ ದುರುಳರ ಭಾರವನ್ನು ತಾಳಲಾರದೆ ಭೂದೇವಿ ಗೋ ರೂಪ ಧರಿಸಿದಳು. ಚತುರ್ಮುಖನನ್ನು ಮುಂದೆ ಮಾಡಿಕೊಂಡು ಸಕಲ ದೇವತೆಗಳು ಕ್ಷೀರಸಾಗರದಲ್ಲಿದ್ದ ಪರಮಪುರುಷ ಶ್ರೀಮನ್ನಾರಾಯಣನನ್ನು ವೇದ ಮಾತುಗಳಿಂದ ಸ್ತುತಿಗೈದರು. ಭೂಭಾರಹರಣಕ್ಕಾಗಿ ಪ್ರಾರ್ಥಿಸಿದರು. ಭಗವಂತ ಪ್ರಸನ್ನನಾಗಿ ವಸುದೇವ ದೇವಕಿಯರಲ್ಲಿ ಕೃಷ್ಣನಾಗಿ ಅವತರಿಸುವುದಾಗಿ ಅನುಗ್ರಹಗೈದ.

Advertisement

ವಿಷಮ ಸಂದರ್ಭದಲ್ಲಿ ದೇವಾದಿ ದೇವತೆಗಳು ಭಗವಂತ­ನಲ್ಲಿ ಪ್ರಾರ್ಥಿಸಿದಾಗ ಭಗವಂತ ಕೃಷ್ಣನಾಗಿ ಅವತರಿಸಿದ. ದೇವತೆಗಳ ಸಂಕಷ್ಟಗಳನ್ನು ಸೆಳೆದ. ದೈತ್ಯರ ಸುಖವನ್ನೂ ಸೆಳೆದ. ಸೂಜಿಗಲ್ಲು ನಮ್ಮ ಕೃಷ್ಣ. ವಸುದೇವ-ದೇವಕಿಯರ ವಿವಾಹದ ಸಂದರ್ಭದಲ್ಲಿ ಅಶರೀರವಾಣಿಯಿಂದ ದೇವಕಿಯ ಎಂಟನೆಯ ಗರ್ಭದಿಂದ ತನ್ನ ಮೃತ್ಯು ಎಂದು ತಿಳಿದ ಕಂಸ ಹುಟ್ಟಿದ ಎಲ್ಲ ಹಸುಳೆಗಳನ್ನು ಕೊಂದ.

ಭಗವಂತ ಕೃಷ್ಣನಾಗಿ ಅವತಾರಗೈಯುವ ಪೂರ್ವದಲ್ಲೇ  ದುರುಳ ಕಂಸನನ್ನು ಭಯಗೊಳಿಸಿ ಸೂಜಿಗಲ್ಲಿನಂತೆ ಸೆಳೆದ. ಅವತಾರದ ಬಳಿಕವೂ ಕಂಸನಿಗೆ ಕೃಷ್ಣನದ್ದೇ ಚಿಂತೆ. ಭಗವಂತ ಕೃಷ್ಣಕೇಶರೂಪದಿಂದ ವಸುದೇವನ ಮೂಲಕ ದೇವಕಿಯ ಗರ್ಭ ಪ್ರವೇಶಿಸಿದ. ದೇವತೆಗಳೆಲ್ಲ ಕೃಷ್ಣನ ಸ್ತುತಿಗೈದರು. ಸಿಂಹ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಅಂದು ಗ್ರಹಗಳೆಲ್ಲ ಉಚ್ಚ ಸ್ಥಾನದಲ್ಲಿದ್ದರು. ರೋಹಿಣಿ ನಕ್ಷತ್ರ ಯೋಗ ಬೇರೆ. ಈ ಪ್ರಶಸ್ತ ಕಾಲದಲ್ಲಿ ಭಗವಂತ ಕೃಷ್ಣನಾಗಿ ಅವತರಿಸಿದ.

ಶಂಖಚಕ್ರ ಗದಾ-ಪದ್ಮಧಾರಿಯಾಗಿ ಪೀತಾಂಬರ ಧರನಾಗಿ ಅವತರಿಸಿ ನಾನು ಸಾಮಾನ್ಯ ಮಗುವಿನಂತಲ್ಲ ಎಂದು ತೋರಿಸಿದ. ವಸುದೇವ-ದೇವಕಿಯರು ಈ ದಿವ್ಯ ಬಾಲ ರೂಪವನ್ನು ಕಂಡು ಅಚ್ಚರಿಗೊಂಡರು. ಭಕ್ತಿ ಪರವಶರಾದರು. ಮುಂದೆ ಕೃಷ್ಣ ಗೋಕುಲಕ್ಕೆ ತೆರಳಿದ್ದು, ಎಂಟನೇ ಮಗು ಜನಿಸಿತೆಂದು ಕಂಸ ಕಳವಳ ಪಟ್ಟದ್ದು ಅಸುರರನ್ನು ಕೃಷ್ಣನ ಹತ್ಯೆಗೆ ಗೋಕುಲಕ್ಕೆ ಕಳುಹಿಸಿದ್ದು ಎಲ್ಲ ಜನಜನಿತ.

ಚುಂಬಕ ವ್ಯಕ್ತಿತ್ವ: ಇಲ್ಲೆಲ್ಲ ನಾವು ಗುರುತಿಸಬೇಕಾದದ್ದು ಕೃಷ್ಣನ ಚುಂಬಕ ವ್ಯಕ್ತಿತ್ವ. ಅವತಾರದ ಪೂರ್ವದಲ್ಲೂ ಅವತಾರದ ಬಳಿಕವೂ ಸಜ್ಜನರನ್ನು ತನ್ನ ಆಕರ್ಷಕ ವ್ಯಕ್ತಿತ್ವದಿಂದ ಸೆಳೆದ. ದುರುಳರನ್ನು ಅವರ ತಪ್ಪಿನಿಂದ ಭಯಗೊಂಡು ಸೆಳೆಯಲ್ಪಟ್ಟರು. ಹೀಗೆ ಕೃಷ್ಣ ಪ್ರತೀ ಹಂತದಲ್ಲೂ ತನ್ನ ದಿವ್ಯ ನಡೆಯಿಂದ ತಾನು ಭಗವಂತನೆಂದು ತೋರಿಸಿಕೊಟ್ಟ.ಕರ್ಷತೀತಿ ಕೃಷ್ಣಃ ಕೃಷ್ಣನ ಹೆಸರೇ ಹೇಳುವಂತೆ ಆಬ್ರಹ್ಮಸ್ಥಂಭ ಪರ್ಯತ ಎಲ್ಲ ಸಜ್ಜನರನ್ನೂ ಸೆಳೆಯುವ ದಿವ್ಯವಾದ ಸೂಜಿಗಲ್ಲಿ ನಂತಹ ವ್ಯಕ್ತಿತ್ವ ಅವನದ್ದು.

Advertisement

ನಡುರಾತ್ರಿ ಅವತಾರ ಮಾಡಿದ ಹೊತ್ತಿನಲ್ಲೇ ಸಜ್ಜನರ ದುಃಖವನ್ನು ಕಳೆದು ದುರ್ಜನರ ಸುಖವನ್ನು ಸೆಳೆದು ತನ್ನ ಸೂಜಿಗಲ್ಲಿನ ಸ್ವಭಾವವನ್ನು ಸಾಬೀತುಪಡಿಸಿದ. ಆ ಸಂದರ್ಭದಲ್ಲಿ ಅಸುರರೆಲ್ಲ ಅವ್ಯಕ್ತ ದುಃಖವನ್ನು ಸಜ್ಜನರೆಲ್ಲ ಸುಖವನ್ನು ಸಹಜವಾಗಿ ಅನುಭವಿಸಿದರು.

ನಂದಗೋಕುಲದಲ್ಲಿದ್ದ ಶ್ರೀಕೃಷ್ಣನ ಸಂಹಾರಕ್ಕಾಗಿ ಕಂಸ ಅನೇಕ ಅಸುರರನ್ನು ಕಳುಹಿಸಿದ್ದ. ಪೂತನೆ, ಶಕಟ, ತೃಣಾವರ್ತ ಒಂದೇ ಎರಡೇ? ಇವರೆಲ್ಲರ ಪ್ರಾಣವನ್ನೇ ಕೃಷ್ಣ ಲೀಲಾಜಾಲವಾಗಿ ಸೆಳೆದ. ಗೋಕುಲಕ್ಕೆ ಬೆಂಕಿ ಬಿದ್ದಾಗ ಅಗ್ನಿಯನ್ನೇ ಸೆಳೆದು ಪಾನಗೈದ. ಗೋಪಗೋಪಿಯರನ್ನು ರಕ್ಷಿಸಿದ. ಗೋವರ್ಧನೋದ್ಧಾರವನ್ನು ಮಾಡುವ ಮೂಲಕ ಇಂದ್ರನ ಗರ್ವವನ್ನೇ ಸೆಳೆದ. ಗೋಕುಲದ ಮಂದಿಯ ಕಷ್ಟವನ್ನೆಲ್ಲ ಸೆಳೆದ. ಮುಂದೆ ಕೃಷ್ಣನ ಮೇಲಿನ ಅಪರಿಮಿತವಾದ ಭಕ್ತಿಯಿಂದ ರಾಸಕ್ರೀಡಾ ಸಂದರ್ಭದಲ್ಲಿ ಅವನ ವೇಣುಗಾನ ಗೋಪಿಕೆಯರನ್ನೆಲ್ಲ ಸೆಳೆಯಿತು.

ಗೋವುಗಳೆಲ್ಲ ಮಂತ್ರಮುಗ್ಧಗೊಂಡವು. ಈ ಮೂಲಕ ಅವರ ಸಾಧನೆಯನ್ನೆಲ್ಲ ಪೂರ್ಣಗೈದ. ಮುಂದೆ ಕಂಸನ ಪ್ರಾಣ ಸೆಳೆದದ್ದಂತೂ ಪ್ರಸಿದ್ಧ. ಮಡದಿ ರುಕ್ಮಿಣಿಯ ಮನಸ್ಸನ್ನು ಸೆಳೆದು ಭೀಷ್ಮಕನ ರಾಜ್ಯದಿಂದ ಸೆಳೆದು ಕೊಂಡೊಯ್ದು ವಿವಾಹವಾದ. ಹೀಗೆ 16,108 ಮಡದಿಯರ ಮನಸ್ಸನ್ನು ತನ್ನ ಆಕರ್ಷಕ ದಿವ್ಯವ್ಯಕ್ತಿತ್ವದಿಂದ ಸೆಳೆದೇ ಕೃಷ್ಣ ವಿವಾಹವಾಗಿ ಅವರನ್ನೆಲ್ಲ ಅನು ಗ್ರಹಿಸಿದ. ಹೀಗೆ ಶಿಶುಪಾಲನ ಪ್ರಾಣವನ್ನೂ ಸೆಳೆದ.

ಮಹಾಭಾರತದ ಯುದ್ಧದ ಪ್ರಸಂಗದಲ್ಲಿ ಗೀತೋಪದೇಶದ ಸಂದರ್ಭ, ಅರ್ಜುನನ ವಿಷಾದಕ್ಕೆ ಕಾರಣವಾದ ಮೋಹವನ್ನು ಉಪದೇಶದ ಮೂಲಕ ಸೆಳೆದ. ಗಾಬರಿಗೊಂಡಿದ್ದ ಅರ್ಜುನನಿಗೆ ನೀನು ನಿಮಿತ್ತ ಮಾತ್ರ, ಎಲ್ಲರ ಅಸುವನ್ನು ಮೊದಲೇ ನಾನು ಸೆಳೆದಾಗಿದೆ ಎಂದು ಮತ್ತೂಮ್ಮೆ ತನ್ನ ಆಕರ್ಷಕ ವ್ಯಕ್ತಿತ್ವವನ್ನು ನಿರೂಪಿಸಿದ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಬಳಿ ಪಾಂಡವರನ್ನು ಕರೆತಂದು ಅವರಿಂದ ವಿಷ್ಣು ಸಹಸ್ರ ನಾಮಸ್ತೋತ್ರವನ್ನು ಹೊರಸೆಳೆದು ಮರೆಯಾಗುವ ಜ್ಞಾನನಿಧಿ ಯನ್ನು ಉಳಿಸಿದ. ಎಲ್ಲ ಸಜ್ಜನರ ತಾಪತ್ರಯಗಳನ್ನೆಲ್ಲ ಸೆಳೆದು ಕೃಷ್ಣ ತನ್ನ ಸೂಜಿಗಲ್ಲಿನ ವ್ಯಕ್ತಿತ್ವವನ್ನು ಸಮಯ ಬಂದಾಗಲೆಲ್ಲ ಮತ್ತೆ ಮತ್ತೆ ಸಾಬೀತುಗೊಳಿಸಿದ್ದಾನೆ.

ಕೃಷ್ಣ ನುಡಿ ಭಗವದ್ಗೀತೆ: ಕೃಷ್ಣನ ನುಡಿ ಭಗವದ್ಗೀತೆಯಂತೂ ಅತ್ಯಂತ ಪ್ರಸಿದ್ಧ. ಭಗವದ್ಗೀತೆ ಅನುವಾದವಾಗದ ಭಾಷೆ ಇರಲಿ ಕ್ಕಿಲ್ಲ. ಭಗವದ್ಗೀತೆಯನ್ನು ನೋಡದ ಸಾಧಕ ಇರಲಿಕ್ಕಿಲ್ಲ. ಎಲ್ಲ ಚಿಂತಕರನ್ನು ಕೃಷ್ಣ ಭಗವದ್ಗೀತೆಯ ಮೂಲಕ ಸೆಳೆದ. ಸಜ್ಜನರನ್ನು ಕೆಟ್ಟದಾರಿಯಿಂದ ಸೆಳೆದ. ದುರ್ಜನರ ಸುಖವನ್ನು ಸೆಳೆದ. ದೇವಾನುದೇವತೆಗಳನ್ನೂ ಆಕರ್ಷಿಸಿದ ಕೃಷ್ಣನ ಉಪಾಸನೆ ಕಲಿಯುಗದ ಮಂದಿಗೆ ಅತ್ಯಂತ ಔಚಿತ್ಯಪೂರ್ಣ.

ಕೃಷ್ಣವರ್ಣಂ ಕಲೌ ಕೃಷ್ಣಂ… ದ್ವಾಪರಾಂತ್ಯದಲ್ಲಿ ಅವತಾರಗೈದ ಕೃಷ್ಣ ಕಲಿಯುಗದ ಸಂಧಿಕಾಲದಲ್ಲೂ 36 ವರ್ಷ ಈ ಭೂಮಿಯಲ್ಲಿದ್ದು ಸಜ್ಜನರನ್ನು ಅನು ಗ್ರಹಿಸಿದ. ಕಲಿಯುಗದ ಮಂದಿಗೆ ಸಮೀಪದ ಭಗವದವತಾರವೆನಿಸಿ ಶ್ರೀಕೃಷ್ಣೋಪಾಸನೆ ಹೀಗೆ ಸಾಧನೆಗೆ ಸರ್ವಸ್ವವೆನಿಸಿದೆ. ಕೃಷ್ಣನ ಆರಾಧನೆ, ಪ್ರಣಾಮ, ನಾಮಸ್ಮರಣೆ, ಕಥಾಚಿಂತನೆ ಎಲ್ಲವೂ ಅತ್ಯಂತ ಪುಣ್ಯಪ್ರದ ಪಾಪಹರ. ಈ ಹಿನ್ನೆಲೆಯಲ್ಲಿ ಕಲಿಯುಗದ ಜನರ ಸಾಧನೆಗೆ ಒದಗುವ ವಿಘ್ನಗಳನ್ನು ಸೆಳೆದು ಸಾಧನಾಪಥದಲ್ಲಿ ಮುಂದುವರಿಯಲು ಅನುಕೂಲವಾಗುವಂತೆ ಅನುಗ್ರಹಿಸಬೇಕೆಂಬ ಸಂಕಲ್ಪದಲ್ಲಿ ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠೆಗೈದಿರುವರು.

ಸಿದ್ಧಿವಿಘ್ನಮುಖದೋಷಭೇಷಜಂ… ಯದ್ಯಪಿ ದ್ವಾಪರದ ರುಕ್ಮಿಣೀಕರಾರ್ಚಿತ ವಿಶ್ವಕರ್ಮನಿರ್ಮಿತ ಈ ಭವ್ಯ ಸಾಳಗ್ರಾಮ ಶಿಲಾಪ್ರತಿಮೆಯು ಆಚಾರ್ಯರ ಭಕ್ತಿಗೆ ಒಲಿದು ಬಂದಂತಹ ದಿವ್ಯ ಮಂಗಳಮೂರ್ತಿ. ಸಜ್ಜನರ ಮೇಲಿನ ಕರುಣೆಯಿಂದ ಉಡುಪಿಯಲ್ಲಿ ಪ್ರತಿಷ್ಠೆಗೈದು ಸಾಧಕರಿಗೆ ಮಹದುಪಕಾರವನ್ನು ಮಾಡಿದ್ದಾರೆ .

ಶ್ರೀ ಕೃಷ್ಣ ಜಯಂತಿ: ಉಡುಪಿ ಕ್ಷೇತ್ರದಲ್ಲಿ ಸಿಂಹಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಸಹಜವಾಗಿ ಒದಗುವ ರೋಹಿಣೀ ನಕ್ಷತ್ರಯೋಗದ ಪರ್ವಕಾಲದಂದು ಶ್ರೀಕೃಷ್ಣ ಜಯಂತೀ ಉತ್ಸವವು ವೈಭವದಿಂದ ಆಚರಿಸಲ್ಪಡುತ್ತದೆ. ಮರುದಿನ ಶ್ರೀಕೃಷ್ಣನ ಜನ್ಮೋತ್ಸವದ ಸಂಭ್ರಮವನ್ನು ವಿಟ್ಲಪಿಂಡಿ ಉತ್ಸವವಾಗಿ ವಿಜೃಂಭಣೆಯಿದ ಆಚರಿಸುತ್ತಾರೆ. ಕೃಷ್ಣ ಜನಿಸಿದ ದಿನ ಉಪವಾಸವಿದ್ದು ತ್ರಿಕಾಲಪೂಜೆಯನ್ನು ನಡೆಸಿ ವಿವಿಧ ದ್ರವ್ಯ-ನೈವೇದ್ಯಗಳಿಂದ ಉಂಡೆ, ಚಕ್ಕುಲಿಗಳಿಂದ ಕೃಷ್ಣನನ್ನು ಸಂತುಷ್ಟಿಗೊಳಿಸಿ ಚಂದ್ರೋದಯದ ನಡುರಾತ್ರಿಯಲ್ಲಿ ಚಂದ್ರ ವಂಶದಲ್ಲಿ ಜನಿಸಿದ ಕೃಷ್ಣನ ನೆನಪಿನಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಹಾಗೂ ಚಂದ್ರನಿಗೂ ಅರ್ಘ್ಯ  ನೀಡಿ ಬಹುನಿಷ್ಠೆಯಿಂದ ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ.

ಮರುದಿನ ವಿಟ್ಲಪಿಂಡಿ ಯಂದು ಕೃಷ್ಣಹುಟ್ಟಿದ ಸಂಭ್ರಮವನ್ನು ಅಂದು ಗೋಕುಲದಲ್ಲಿ ಗೊಲ್ಲರು ಗೋಮಯ, ಗೋಮೂತ್ರ, ಹಾಲು, ಬೆಣ್ಣೆಗಳನ್ನು ಪರಸ್ಪರ ಎರಚಿಕೊಂಡು ವ್ಯಕ್ತಪಡಿಸಿದ್ದನ್ನು, ಅವರ ಮೈಯೆಲ್ಲ ತೊಯ್ದು ಪಟ್ಟೆಹುಲಿಗಳಂತೆ ಕಂಡು ಗೋವುಗಳು ಹೆದರಿದ್ದನ್ನು ನೆನಪಿಸುವ ಹುಲಿವೇಷದೊಂದಿಗೆ, ಅದೇ ರೀತಿ ಹಾಲು-ಮೊಸರ ಗಡಿಗೆಗಳನ್ನು ಒಡೆದ ಸ್ಮರಣೆಗೆ ಗೊಲ್ಲರು ಗುರ್ಜಿ ಕಟ್ಟಿ ಮೊಸರುಕುಡಿಕೆ ಒಡೆಯುವುದರೊಂದಿಗೆ ಕೃಷ್ಣನ ವೈಭವದ ಉತ್ಸವ ವಿಶಿಷ್ಟ ರೀತಿಯಲ್ಲಿ ಎಂಟು ಶತಮಾನಗಳಿಂದ ಆಚರಿಸಲ್ಪಡುತ್ತಿದೆ. ಕೃಷ್ಣನಿಗೆ ಸಮರ್ಪಿತವಾದ ಉಂಡೆ- ಚಕ್ಕುಲಿಗಳನ್ನೆಲ್ಲ ಭಕ್ತವೃಂದಕ್ಕೆ ಕೃಷ್ಣಪೂಜಕರಾದ ಪರ್ಯಾಯ ಶ್ರೀಪಾದರು ವಿತರಿಸುತ್ತಾರೆ.

ಕೃಷ್ಣನ ಜನ್ಮೋತ್ಸವವೂ ಸೂಜಿಗಲ್ಲು: ಕೃಷ್ಣ ಮಾತ್ರ ಸೂಜಿಗಲ್ಲಲ್ಲ. ಕೃಷ್ಣನ ಜನ್ಮೋತ್ಸವವೂ ಕೂಡ. ಉಡುಪಿಯಲ್ಲಿ ಇದು ಆಚರಿಸಲ್ಪಡುವುದು ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಊರ ಪರವೂರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರುವುದೇ ಇದಕ್ಕೆ ಸಾಕ್ಷಿ. ಈ ಕೃಷ್ಣ ಜಯಂತಿ ಉತ್ಸವವು ಅತ್ಯಂತ ಪುಣ್ಯಪ್ರದ ನಿತ್ಯವ್ರತ. ಹಿಂದಿನ ದಿನ ಉಪವಾಸವಿದ್ದು ಕೃಷ್ಣ ಜನನ ಕಾಲದಲ್ಲಿ ಅಘÂì ಪ್ರದಾನಗೈದು ಮರುದಿನ ಜನ್ಮೋತ್ಸವವನ್ನು ಸಂಭ್ರಮಿಸುವ ಎಲ್ಲ ಭಕ್ತರ ಪಾಪಗಳನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಾನೆ ನಮ್ಮ ಉಡುಪಿಯ ಶ್ರೀಕೃಷ್ಣ.

ಸಹಜವಾಗಿ ಪಾಪ ಭೂಯಿಷ್ಠರಾದ ಮಂದಭಾಗ್ಯರಾದ ಕಲಿಯುಗದ ಜನರ ಪಾಪವನ್ನು ಸೂಜಿಗಲ್ಲಿನಂತೆ ಸೆಳೆಯುವ ಮಹಾಮಹಿಮ ಕೃಷ್ಣ ಇಲ್ಲಿ ಮತ್ತೂಮ್ಮೆ ತನ್ನ ಸೂಜಿಗಲ್ಲುತನವನ್ನು ನಿತ್ಯವಾಗಿ ತೋರ್ಪ ಡಿಸುತ್ತಿ¨ªಾನೆ. ನಾವೆಲ್ಲರೂ ಕೃಷ್ಣನ ಜನ್ಮೋತ್ಸವವನ್ನು ತಪ್ಪದೇ ಆಚರಿಸೋಣ. ನಮ್ಮೆಲ್ಲ ಪಾಪಗಳನ್ನು ಸೂಜಿಗಲ್ಲಿನ ಕೃಷ್ಣ ಸೆಳೆಯುವಂತಾಗಲೆಂದು ಪ್ರಾರ್ಥಿಸೋಣ. ಅಂತ್ಯದಲ್ಲಿ ನಮ್ಮ ದುಃಖಗಳನ್ನು ಕಳೆದು ಅವನ ಶಾಶ್ವತ ತಾಣಕ್ಕೆ ನಮ್ಮನ್ನೆಲ್ಲ ಸೆಳೆದು ಕೃತಕೃತ್ಯರನ್ನಾಗಿಸಲೆಂದು ಆಶಿಸೋಣ.

ಧರ್ಮರಕ್ಷಕ, ಲೋಕ ಶಿಕ್ಷಕ
ಶ್ರೀಕೃಷ್ಣ ತನ್ನ ಅವತಾರದ ಒಂದೊಂದು ಲೀಲೆಯಲ್ಲೂ ಲೋಕ ಶಿಕ್ಷಣವನ್ನು ತೋರಿದ. ಹುಟ್ಟಿನಿಂದಲೇ ಹೆತ್ತವರಿಂದ ಬೇರ್ಪಟ್ಟು ದೂರದ ನಂದನ ಮನೆಯಲ್ಲಿ ಆನಂದದಿಂದ ಬೆಳೆದ, ಸಾಕಿದ ನಂದ-ಯಶೋದೆಯರ ಮುದ್ದಿನ ಕಂದನಾಗಿ ಬೆಳೆದ. ಗೋಪ-ಗೋಪಿಯರ ಮನಕೆ ಆನಂದವನ್ನು ನೀಡಿದ ಪುಟ್ಟ ಕಂದ ಕೃಷ್ಣ, ಬಯಸದೇ ದ್ವೇಷದಿಂದ ಬಂದವರನ್ನು ಶಿಕ್ಷಿಸಿದ.

ಬದುಕಿನಲಿ ಸತ್ಯ, ಧರ್ಮಗಳಿಗೆ ಹೊಸ ಅರ್ಥವನ್ನು ನೀಡಿದ. ಸಜ್ಜನರ ಹಿತವೇ ಸತ್ಯ, ಸಜ್ಜನರ ಬದುಕಿಗೆ ಹಿತವಾದ ಆಚರಣೆಯೇ ಧರ್ಮ ಎಂದು ತಿಳಿಹೇಳಿದ. ಅದರಂತೆ ನಡೆದು ತೋರಿದ ಭಕ್ತರನ್ನು ಅನುಗ್ರಹಿಸಿದ. ಸಂಸ್ಕಾರ, ಸಂಸ್ಕೃತಿಯ ರಕ್ಷಣೆ, ಅನುಸರಣೆಗಾಗಿ ಮಾರ್ಗದರ್ಶನ ನೀಡಿದ ಕೃಷ್ಣ. ಗೀತೆಯ ಮೂಲಕ ಸಮಗ್ರ ಮನುಕುಲಕ್ಕೆ, ಭಗವತ್‌ ಪ್ರಜ್ಞೆ, ಜ್ಞಾನ, ಕರ್ಮಗಳ ಮಹತ್ವವನ್ನು ತಿಳಿಹೇಳಿದ. ಸದಾ ಹಸನ್ಮುಖೀಯಾದ ಧರ್ಮರಕ್ಷಕ ಶ್ರೀಕೃಷ್ಣ ಆನಂದದ ಸೆಲೆಯಾಗಿ ನಮ್ಮೆಲ್ಲರ ಹೃದಯದಲ್ಲಿ ನೆಲೆಸಲಿ.

Advertisement

Udayavani is now on Telegram. Click here to join our channel and stay updated with the latest news.

Next