ಉಡುಪಿ: ಕೃಷ್ಣಾಷ್ಟಮಿ ಸಡಗರ ದಂದು ವೇಷಧಾರಿಗಳ ರಂಗಿನಾಟ ಎಲ್ಲೆಡೆ ವ್ಯಾಪಿಸಿರುತ್ತದೆ. ವಿವಿಧ ರೀತಿಯ ವೇಷಗಳನ್ನು ಧರಿಸುವುದು ಎಂದರೆ ಯುವ ಸಮುದಾಯಕ್ಕೆ ಅದೇನೂ ಉತ್ಸಾಹ. ಪ್ರತೀ ವರ್ಷವೂ ಕೃಷ್ಣಾಷ್ಟಮಿಯಂದು ಹುಲಿವೇಷ, ನಲ್ಕೆ ವೇಷ, ಮುಖವಾಡ ವೇಷ ಸಹಿತ ನವನವೀನ ಬಗೆಯ ಫ್ಯಾಷನ್ ಟ್ರೆಂಡ್ ವೇಷಗಳು ಉಡುಪಿಯಲ್ಲಿ ಕಾಣಸಿಗುತ್ತವೆ.
ಹುಲಿವೇಷ ಅಚ್ಚುಮೆಚ್ಚು
ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ ಕುಣಿತಕ್ಕೆ ಅದರದೇ ಆದ ಮಹತ್ವವಿದೆ. ಅದರಲ್ಲೂ ಉಡುಪಿಯ ನಾಡಹಬ್ಬವೆಂದು ಬಿಂಬಿತವಾಗಿರುವ ಶ್ರೀ ಕೃಷ್ಣಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವದಲ್ಲಿ ಹುಲಿ ಕುಣಿತವೇ ವಿಶೇಷ ಆಕರ್ಷಣೆ. ಹುಲಿವೇಷದ ಹೆಜ್ಜೆಗಳು, ಮುಖದಲ್ಲಿನ ಗತ್ತು, ತಾಸೆಯ ಸದ್ದಿಗೆ ತಕ್ಕಂತೆ ಕುಣಿಯುವ ವೇಷಧಾರಿಗಳನ್ನು ನೋಡುವುದೇ ಒಂದು ಸೊಬಗು. ಹುಲಿವೇಷ ಧರಿಸುವುದು, ತಾಸೆಯ ಸದ್ದಿಗೆ ಕುಣಿಯುವುದೆಂದರೆ ಯುವಕರಿಗೆ ಅಚ್ಚುಮೆಚ್ಚು. ಮೈಗೆ ಹಳದಿ, ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು, ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ನಾಲ್ಕಾರು ಮಂದಿಯ ತಂಡ, ಕಾಲು-ಕೈಗಳನ್ನು ಆಡಿಸುತ್ತಾ ತಾಸೆ ಪೆಟ್ಟಿನ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರೆ ನೋಡುವುದೇ ಚೆಂದ. ನೃತ್ಯದಲ್ಲಿ ಮೈನವುರೇಳಿಸುವಂತಹ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ತೇಲ್ ಬಗ್ಗುವುದು, ಚಕ್ರದಂಡದ ಮೂಲಕ ಜನರನ್ನು ಮನೋರಂಜಿಸುವುದು. ನೆಲದ ಮೇಲೆ ಹಣದ ನೋಟು ಇಟ್ಟು, ಅದನ್ನು ಹಿಂಬದಿ ಯಿಂದ ಬಾಗಿ ಬಾಯಲ್ಲಿ ಕಚ್ಚಿಕೊಳ್ಳುವಂತಹ ಕಸರತ್ತುಗಳು ಪ್ರದರ್ಶನವಾಗುತ್ತವೆ. ಒಟ್ಟಾರೆ, ಬಣ್ಣಬಣ್ಣದ ಹುಲಿವೇಷದ ನೃತ್ಯದ ಜತೆಗೆ ಕಸರತ್ತೂ ಇಲ್ಲಿ ಕಣ್ಣಿಗೆ ಹಬ್ಬ.
ಹುಲಿವೇಷದಲ್ಲೂ ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿ ಪಿಲಿಗಳೆಂಬ ಭಿನ್ನ ರೀತಿಯ ಬಣ್ಣಗಾರಿಕೆಯಿದೆ. ಕೆಲವೊಮ್ಮೆ ಹಸುರು ಬಣ್ಣದ ಹುಲಿಗಳೂ ಇರುತ್ತವೆ.
ಇಲ್ಲಿ ವೇಷಧಾರಿಯಲ್ಲಿ ನೈಜತೆ ತುಂಬುವವರು ಕಲಾವಿದರು. ತಮ್ಮ ಕುಂಚಗಳಿಂದ ಹುಲಿವೇಷ ಹಾಕುವವರಿಗೆ ವೈವಿಧ್ಯಮಯ ಬಣ್ಣ ಬಳಿದು, ಕಾಡಿನ ಹುಲಿಯನ್ನು ಊರಿಗೆ ತಂದು ಬಿಡುತ್ತಾರೆ.