Advertisement

Janmashtami: ಶ್ರೀಕೃಷ್ಣ ಇತಿಹಾಸ ಪುರುಷನೇ? 6 ಬಾರಿ ಸಾಗರದಲ್ಲಿ ಮುಳುಗೆದ್ದ ದ್ವಾರಕೆ!

12:08 PM Aug 26, 2024 | Team Udayavani |
ಯುಗೇ ತೃತೀಯಕೇ .. .. ಹರಿಶ್ಚಕೃಷ್ಣ ರೂಪತಾಂ .. !
ಮಂಗಲಪ್ರದಮಂಥಧಾಮವಿರಾಜಿತಂ.. ಬಲಗೈಯಲ್ಲಿ ಕಡೆಗೋಲು, ಎಡಗೈಯಲ್ಲಿ ಪಾಶಧಾರಿಯಾದ, ನೆನೆದವರಿಗೆ ಮಂಗಲವನ್ನುಂಟು ಮಾಡುವ ಉಡುಪಿ ಶ್ರೀಕೃಷ್ಣ, ಅವತಾರವೆತ್ತಿದ ಸಂಭ್ರಮ! ದ್ವಾಪರದಲ್ಲಿ ಹರಿಯು ಕೃಷ್ಣರೂಪವನ್ನು ಧರಿಸಿದ ದಿನ.
ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಗದಾರ್ಯುದಾಯುಧಮ್‌ | 
ಶ್ರೀ ವತ್ಸಲಕ್ಷಂ ಗಲಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರಪಯೋದಸೌಭಗಮ್‌ ||
ವಸುದೇವನು ತನ್ನ ಮುಂದೆ ಅದ್ಭುತ ಬಾಲರೂಪನನ್ನು ನೋಡಿದನು. ಅವನ ಕಣ್ಣುಗಳು ಕಮಲದಂತೆಯೂ ಇದ್ದು, ಅವನ ಸುಂದರವಾದ ನಾಲ್ಕು ಕರಗಳು ಶಂಖ, ಚಕ್ರ, ಗದೆ, ಪದ್ಮಗಳನ್ನು ಧರಿಸಿದ್ದವು. ವಕ್ಷಸ್ಥಳದಲ್ಲಿ ಸುವರ್ಣಮಯವಾದ ಶ್ರೀವತ್ಸದ ಚಿಹ್ನೆಯಿದ್ದಿತು. ಕತ್ತಿನಲ್ಲಿ ಕೌಸ್ತುಭಮಣಿಯು ಫ‌ಳಫ‌ಳಿಸುತ್ತಿತ್ತು. ವರ್ಷಕಾಲದ ಮೋಡದಂತಿರುವ ಸುಂದರ, ಶ್ಯಾಮಲ ಶರೀರದ ಮೇಲೆ ಪೀತಾಂಬರವು ಕಂಗೊಳಿಸುತ್ತಿತ್ತು. ಗುಂಗುರು ಕೂದಲು, ವೈಡೂರ್ಯಮಣಿಯ ಕಿರೀಟ ಕುಂಡಲಗಳ ಕಾಂತಿಯಿಂದ ಸೂರ್ಯಕಿರಣಗಳಂತೆ ಶೋಭಿಸುತ್ತಿತ್ತು. ಸರ್ವ ಆಭೂಷಣಗಳಿಂದ ಅಲೌಕಿಕ ಸುಂದರನಾದ ಆ ಬಾಲಕನನ್ನು ಕಂಡ ವಸುದೇವನಿಗೆ ಅಸೀಮ ಆಶ್ಚರ್ಯವಾಯಿತು.
ವಾಸನಾದ್ವಾಸುದೇವಸ್ಯ ವಾಸಿತಂ ತೇ ಜಗತ್ತ್ರ ಯಂ |
ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೇ ||
ಶ್ರೀಕೃಷ್ಣಾವತಾರಕ್ಕೂ ಮೊದಲೇ ಈ ವಾಸುದೇವ ತತ್ತ್ವವು ಉಪನಿಷತ್ತಿನಲ್ಲಿ ವಾಸುದೇವಾಭಿಧನಾಗಿ, ವಸುದೇವ ಪುತ್ರನಾಗಿ ಅವತರಿಸಲಿರುವ ಕೃಷ್ಣಾವತಾರದ ಸೂಚನೆಯೆಂದು ಶಾಸ್ತ್ರಕಾರರ ಅಭಿಮತ.
ಬ್ರಹ್ಮಣ್ಯೋ ದೇವಕೀಪುತ್ರೋ ಬ್ರಹ್ಮಣ್ಯೋ ಮಧುಸೂದನೋಂ |
ಸರ್ವಭೂತಸ್ಥಮೇಕಂ ನಾರಾಯಣಂ .. .. | 
ಅಥರ್ವದ ನಾರಾಯಣೋಪನಿಷತ್‌ನ ಶ್ಲೋಕವೊಂದು ದೇವಕೀ ಪುತ್ರ ಕೃಷ್ಣರೂಪದಲ್ಲಿ ಅವತರಿಸುವನೆಂದು ತಿಳಿಸಿದೆ. ಶ್ರೀಕೃಷ್ಣ, ಶ್ರೀರಾಮ, ಶ್ರೀನೃಸಿಂಹ ಪೂರ್ಣಾವತಾರಗಳು. ಅವತಾರಗಳು ಹತ್ತು, ಇಪ್ಪತ್ತನಾಲ್ಕು ಎಂದು ಪುರಾಣಗಳ ಸ್ತುತಿ.

“ಕೃ-ಷ್ಣ’ ಎಂದರೆ ಭೂಮಿಗೆ ಆನಂದವನ್ನು ಕೊಡುವವನು, ಆನಂದಕ್ಕೆ ಭೂಮಿಯಾಗಿರುವವನು ಎಂಬರ್ಥವಿದೆ. ಶ್ರೀಕೃಷ್ಣ ಅವತಾರದ ಬಳಿಕ ಅವನ ಕೃಷ್ಣ ವರ್ಣವನ್ನು, ವಸುದೇವ “ಕೃಷ್ಣಂ ಚ ವರ್ಣಂ ತಮಸಾ ಜನಾತ್ಯಯೇ’ – ಸಂಹಾರವನ್ನು ಮಾಡುವ ಉದ್ದೇಶದಿಂದ ಕಪ್ಪು ಬಣ್ಣವನ್ನು ಧರಿಸಿ ಬಂದ. ತಮೋ ಗುಣದ ಸೂಚಕವೇ ಕಪ್ಪು ಬಣ್ಣ ಎಂದು ಬಣ್ಣಿಸುತ್ತಾನೆ.
ಕಲಿಯುಗದಲ್ಲಿ ಕೃಷ್ಣ ವರ್ಣದ ಶ್ರೀಕೃಷ್ಣನನ್ನೇ ವಿಶೇಷವಾಗಿ ಭಜಿಸಬೇಕು. ಕಲಿಕಾಲದಲ್ಲಿ ತಮೋಗುಣವನ್ನು ನಿಗ್ರಹಿಸಲು ಕೃಷ್ಣನಿಂದ ಮಾತ್ರ ಸಾಧ್ಯ! – ಕೃಷ್ಣವರ್ಣಂ ಕಲೌ ಕೃಷ್ಣಂ.. .. ಯಜಂತಿ ಹಿ ಸುಮೇಧಸಃ ಎಂದಿದ್ದಾರೆ ಕೃಷ್ಣಾಷ್ಟಕದಲ್ಲಿ ಶ್ರೀ ವಾದಿರಾಜರು!
ಶ್ರೀಮದಾನಂದತೀರ್ಥ ವಿರಚಿತ ದ್ವಾದಶಸ್ತೋತ್ರ ದಶಾವತಾರಗಳ ವರ್ಣನೆಯಲ್ಲಿ ಕೃಷ್ಣಾವತಾರದ ಸುಂದರ ಸ್ತುತಿ
ದೇವಕೀನಂದನ ನಂದಕುಮಾರ ವೃಂದಾವನಾಂಚನ ಗೋಕುಲ ಚಂದ್ರ
ಕಂದಫ‌ಲಾಶನ ಸುಂದರರೂಪ ನಂದಿತಗೋಕುಲ ವಂದಿತಪಾದ ||
ಪ್ರಾದುರ್ಭಾವವಾಗುವಾಗಲೇ ದೇವಕಿ ವಸುದೇವರಿಗೂ ನಂದಯಶೋದೆಯರಿಗೂ ಪುತ್ರನಾಗಿ, ಅಮಿತಾನಂದವನ್ನುಂಟು ಮಾಡಿದ ವೃಂದಾವನದಲ್ಲಿ ವಿಹರಿಸಿದ, ಗೋಕುಲದಲ್ಲಿ ಚಂದ್ರನಂತೆ ಬೆಳಗಿದ, ಗೆಡ್ಡೆಗೆಣಸುಗಳನ್ನು ಆಹಾರವಾಗಿ ಸೇವಿಸಿದ, ಬಹುಸುಂದರನಾದ, ಗೋಕುಲದಲ್ಲಿ ಗೋಪ-ಗೋಪಿಯರಿಗೆ ಸಂತೋಷವನ್ನುಂಟು ಮಾಡಿದ ಶ್ರೀಕೃಷ್ಣನೇ ನೀನು ವಂದಿತನಾಗಿರುವಿ.

ಸುಲಲಿತ ತನುವರವರದ ಮಹಾಬಲಯದುವರ ಪಾರ್ಥಪಭವಮಮ ಶರಣಮ್‌ | – ಸುಂದರರೂಪಿಯಾದ, ಭಕ್ತರಿಗೆ ಇಷ್ಟಾರ್ಥವನ್ನು ಕರುಣಿಸುವ, ಸರ್ವಶಕ್ತನಾದ, ಅರ್ಜುನನ್ನು ಕಾಪಾಡಿದ, ಕೃಷ್ಣಾವತಾರಿಯೂ ಆದ, ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆದ ಯದುಕುಲ ತಿಲಕ ಶ್ರೀಕೃಷ್ಣನೇ ನಿನ್ನನ್ನು ಶರಣು ಹೊಂದುತ್ತೇನೆ.
ಸ್ಮರಣಾದೇವ ಕೃಷ್ಣಸ್ಯ ನ ಪುನರ್ಜಾಯತೇ ಕ್ಷಚಿತ್‌ || – ಕೃಷ್ಣನನ್ನು ಸ್ಮರಿಸಿದರೆ ಸಾಕು ಮತ್ತೆ ಪುನರ್ಜನ್ಮವಿಲ್ಲ ಎಂದು ಕೃಷ್ಣಾಮೃತಮಹಾರ್ಣವದ ನುಡಿ. ಕೃಷ್ಣ ಸ್ಮರಣೆಯಿಂದ ಸಿಡಿಲು ಬಡಿದ ಬೆಟ್ಟ ಚೂರಾದಂತೆ ಪಾಪರಾಶಿ ಎಂಬ ಬೆಟ್ಟ ಪುಡಿಯಾಗುತ್ತದೆ.
ಕೃಷ್ಣ ಸಂದೇಶ
ಸಗುಣ – ನಿರಾಕಾರ, ನಿರ್ಗುಣ – ನಿರಾಕಾರ ಮತ್ತು ಸಗುಣ – ಸಾಕಾರ ಈ ಮೂರು ನನ್ನ ಸ್ವರೂಪಗಳು. ಯಾರು ಈ ವಿವಿಧ ಸ್ವರೂಪಗಳ ಬಗ್ಗೆ ಚಿಂತನೆ ಮಾಡಿ ಶರೀರವನ್ನು ಬಿಡುತ್ತಾರೋ ಅವರು ಪರಮ ಗತಿಯನ್ನು ಪಡೆಯುತ್ತಾರೆ. ಜಗತ್ತಿನ ಸಂಬಂಧ ಇಟ್ಟುಕೊಳ್ಳದ ಪ್ರಾಣಿ ಯಾವ ಮಾರ್ಗದಲ್ಲಿ ಹೋದರೆ ಪುನಃ ಹಿಂತಿರುಗಿ ಜಗತ್ತಿಗೆ ಬರುವುದಿಲ್ಲವೋ ಮತ್ತು ಸಂಬಂಧ ಇಟ್ಟುಕೊಳ್ಳುವವರು ಪುನಃ ಹಿಂತಿರುಗಿ ಈ ಪ್ರಪಂಚಕ್ಕೆ ಬರುತ್ತಾರೋ ಆ ಎರಡು ಮಾರ್ಗಗಳು ಹೀಗಿವೆ. ಶುಕ್ಲ ಪಕ್ಷ ಮತ್ತು ಆರು ತಿಂಗಳುಳ್ಳ ಉತ್ತರಾಯಣದ ಅಧಿಪತಿ ದೇವತೆಗಳಿದ್ದಾರೋ ಆ ಮಾರ್ಗದಲ್ಲಿ ಶರೀರ ಬಿಟ್ಟುಹೋದವರು ಪುನಃ ಹಿಂತಿರುಗಿ ಬರುವುದಿಲ್ಲ. ಕೃಷ್ಣಪಕ್ಷ ಮತ್ತು ಆರು ತಿಂಗಳುಳ್ಳ ದಕ್ಷಿಣಾಯಣದ ಅಧಿಪತಿ ದೇವತೆಗಳಿದ್ದಾರೆಯೋ ಶರೀರ ತ್ಯಜಿಸಿ ಆ ಮಾರ್ಗದಲ್ಲಿ ಹೋದವರು ಪುನರ್ಜನ್ಮ ಪಡೆಯುತ್ತಾರೆ.
ನನಗೆ ಪ್ರಿಯನಾರು?
ಯಾವುದೇ ಪ್ರಾಣಿಯಲ್ಲಿಯೂ ದ್ವೇಷವಿರುವುದಿಲ್ಲ. ಎಲ್ಲ ಪ್ರಾಣಿಗಳೊಡನೆ ಪ್ರೇಮ, ದಯೆ, ಕರುಣೆ ಇರುತ್ತದೆ. ಯಾರು ಅಹಂತೆ, ಮಮತೆ ರಹಿತ, ಕ್ಷಮಾಶೀಲನಾಗಿದ್ದು ಸುಖ-ದುಃಖಗಳಲ್ಲಿ ಸಮಾನನಾಗಿರುತ್ತಾನೋ ಅವನು ನನಗೆ ಪ್ರಿಯರು. ಯಾರು ಹರ್ಷ, ಭಯ, ಅಸೂಯೆ ಉದ್ವೇಗ ರಹಿತರಾಗಿರುವರೋ ಅವರು, ಅಂತರಂಗ ಬಹಿರಂಗ ಶುದ್ಧವುಳ್ಳವರು ನನಗೆ ಪ್ರಿಯರು.

ವಿರಕ್ತನು, ದಕ್ಷನು, ಯಾರು ಭೋಗ ಮತ್ತು ಸಂಗ್ರಹಕ್ಕಾಗಿ ಮಾಡಲಾಗುವ ಎಲ್ಲ ಕರ್ಮಗಳ ತ್ಯಾಗಿಯೋ ಅವನು ಪ್ರಿಯನು. ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವವನು, ಶುಭ-ಅಶುಭ ಕರ್ಮಗಳಲ್ಲಿ ರಾಗ ದ್ವೇಷಗಳ ತ್ಯಾಗಿಯು ನನಗೆ ಪ್ರಿಯನು.
ಯಾರು ಶತ್ರು-ಮಿತ್ರ, ಮಾನ-ಅಪಮಾನ, ಅನುಕೂಲತೆ-ಪ್ರತಿಕೂಲತೆಯನ್ನು, ಹೊಗಳಿಕೆ-ತೆಗಳಿಕೆಯನ್ನು ಸಮನಾಗಿ ತಿಳಿದುಕೊಳ್ಳುವನೋ, ಯಾರು ಮನನಶೀಲನೋ, ಮಮತೆ ಆಸಕ್ತಿಗಳಿಲ್ಲದವನೋ, ಯಾರು ಸ್ಥಿರ ಬುದ್ಧಿಯುಳ್ಳವನೋ ಅಂತಹ ಭಕ್ತ ನನಗೆ ಪ್ರಿಯನು. ಕಾಮ ಕ್ರೋಧ ಮತ್ತು ಲೋಭ ಈ ಮೂರು ಬಗೆಯ ನರಕದ ಬಾಗಿಲುಗಳು ಮನುಷ್ಯನನ್ನು ಪತನಗೊಳಿಸುವಂತಹುಗಳು. ಆದ್ದರಿಂದ ಈ ಮೂರನ್ನೂ ತ್ಯಾಗಮಾಡಬೇಕು.
ಶ್ರೀಕೃಷ್ಣ ಇತಿಹಾಸ ಪುರುಷನೇ? 
ಕೃಷ್ಣ ಕೇವಲ ಪುರಾಣ ಪುರುಷ, ಇತಿಹಾಸದಲ್ಲಿ ಗೋಚರಿಸುವ ವ್ಯಕ್ತಿಯಲ್ಲ ಎಂಬ ವಾದವಿದೆ. ಆದರೆ ಗೀತೆಯಲ್ಲಿ ಶ್ರೀಕೃಷ್ಣನ ವಚನ ಇದನ್ನು ಸ್ಪಷ್ಟಪಡಿಸುತ್ತದೆ.
ಅವಜನಾಂತಿ ಮಾಂ ಮೂಢಾ ಮಾನುಷೀಂ .. .. ಭೂತಮಹೇಶ್ವರಮ್‌ (9-11) ಮೋಘಾಶಾ .. .. ಮೋಹಿನೀಂ ಶ್ರಿತಾಃ (9-12)
ಅಜ್ಞಾನಿಗಳು ಜ್ಞಾನಾನಂದಾದಿ ಗುಣಪರಿಪೂರ್ಣನಾದ ನನ್ನ ನಿಜ ಸ್ವರೂಪವನ್ನು ತಿಳಿಯದೆ ಸಾಮಾನ್ಯ ಮಾನವನೆಂದು ಅನಾದರದಿಂದ ನೋಡುತ್ತಾರೆ. ಬುದ್ಧಿಯನ್ನು ಕೆಡಿಸುವ ಹಿಂಸಾಮಯ ಮತ್ತು ಭೋಗಮಯ ಸ್ವಭಾವವನ್ನು ಹೊಂದಿದ ಇಂಥ ವಿಪರೀತ ಜ್ಞಾನಿಗಳ ಅಭಿಲಾಷೆ ಕರ್ಮ, ಜ್ಞಾನ ಎಲ್ಲವೂ ನಿಷ#ಲ. ಅದರಿಂದ ಯಾವ ಪಾರತ್ರಿಕ ಫ‌ಲವೂ ಅವರಿಗೆ ಲಭಿಸದು.
ಡಾ| ಮನೀಷ್‌ ಪಂಡಿತ್‌ ಎಂಬ ನ್ಯೂಕ್ಲಿಯರ್‌ ಮೆಡಿಸಿನ್‌ ತಜ್ಞ ಇಂಗ್ಲೆಂಡಿನಲ್ಲಿ ಖಗೋಳಶಾಸ್ತ್ರ, ಪುರಾತತ್ವಶಾಸ್ತ್ರ, ಮತ್ತು ಭಾಷಾಶಾಸ್ತ್ರವನ್ನು ಕಲಿಸುವ ಪ್ರಾಧ್ಯಾಪಕ. ಅಮೆರಿಕದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ| ನರಹರಿ ಆಚಾರ್‌ ಮತ್ತವರ ಸಂಶೋಧನೆಗಳ ಪರಿಚಯ 2004-2005ರಲ್ಲಿ ನನಗಾಯ್ತು ಎಂದರು. ಡಾ|ನರಹರಿಯವರು ಖಗೋಳಶಾಸ್ತ್ರದ ಆಧಾರದಿಂದ ಮಹಾಭಾರತದ ಕಾಲಮಾನವನ್ನು ನಿರ್ಧರಿಸಿದ್ದರು. ನನ್ನ ಪ್ಲಾನಟೋರಿಯಂ ಸಾಫ್ಟ್ ವೇರ್ ಸಂಶೋಧನೆಯೂ ಅವರ ಸಿದ್ಧಾಂತವೂ ತಾಳೆಯಾಯ್ತು ಎಂದಿದ್ದಾರೆ.‌

ಮಹಾಭಾರತ ನಡೆದದ್ದು ಕ್ರಿ.ಪೂ. 3067ರಂದು. ಶ್ರೀಕೃಷ್ಣನ ಅವತಾರ ಕಾಲ ಕ್ರಿ.ಪೂ. 3112. ಕುರುಕ್ಷೇತ್ರ ಯುದ್ಧ ಸಂಭವಿಸಿದಾಗ ಕೃಷ್ಣನ ಪ್ರಾಯ ಸುಮಾರು 54-55 ವರ್ಷ, ಶ್ರೀಕೃಷ್ಣ ನಮ್ಮ ನಡುವೆಯೇ ಬಾಳಿ ಬದುಕಿದ ವ್ಯಕ್ತಿ, ಮಹಾವಿಪ್ಲವದ ಸೂತ್ರಧಾರಿ ಎನ್ನುತ್ತಾರೆ ಪಂ| ಡಾ| ಆಚಾರರ ಸಂಶೋಧನೆಯಂತೆ (ಮಹಾಭಾರತದಲ್ಲಿ ಸುಮಾರು 140 ಖಗೋಳಶಾಸ್ತ್ರೀಯ ಉಲ್ಲೇಖಗಳಿವೆ) ಮಹಾಭಾರತ ಆರಂಭಗೊಂಡ ದಿವಸ ಕ್ರಿ.ಪೂ. 3067ರ ನವೆಂಬರ್‌ 22!
ಕೃಷ್ಣ ಪೂಜಾ ಸಂಸ್ಕೃತಿ ಕ್ರಿ.ಪೂ. 2200ರಲ್ಲೂ ಇತ್ತೇ? 
ಕುರುಕ್ಷೇತ್ರ ಭಾಗದಲ್ಲಿ ನಡೆಸಿದ್ದ ಕಾರ್ಬನ್‌ ಡೇಟಿಂಗ್‌ ಅಧ್ಯಯನವು, ಅಲ್ಲಿ ದೊರೆತ ಭಗ್ನಾವಶೇಷಗಳು ಸಿಂಧೂ ಕಣಿವೆ ನಾಗರೀಕತೆಗಿಂತಲೂ ಪೂರ್ವದ್ದು ಎಂದು ತಿಳಿಸಿದೆ. ಮೊಹೆಂಜೋದಾರೋ ಭಾಗದಲ್ಲಿ ಕೃಷ್ಣನ ಯಮಳಾರ್ಜುನ ಪ್ರಸಂಗದ ಆವೆ ಮಣ್ಣಿನ ಹಲಗೆಯಂತಹ ರಚವೆಯೊಂದು ಪತ್ತೆಯಾಗಿತ್ತು. ಆದ್ದರಿಂದ ಕ್ರಿ.ಪೂ. 2200ರಲ್ಲೂ ಶ್ರೀಕೃಷ್ಣ ಪೂಜೆಯ ಸಂಸ್ಕೃತಿ ಅಸ್ತಿತ್ವದಲ್ಲಿತ್ತು ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಇವಾನ್‌ ಮ್ಯಾಕೀ ಅಭಿಪ್ರಾಯಪಟ್ಟಿದ್ದಾರೆ.
ಆರು ಬಾರಿ ಸಾಗರದಲ್ಲಿ ಮುಳುಗೆದ್ದ ದ್ವಾರಕೆ!
ಮಹಾಭಾರತ ಯುದ್ಧ ನಡೆದು 36 ವರ್ಷಗಳ ಬಳಿಕ ದ್ವಾರಕೆಯ ನಿರ್ಮಾಣವಾಯ್ತು. ದ್ವಾರಕಾ ಪಟ್ಟಣವು ಆರು ಬಾರಿ ಸಮುದ್ರದಲ್ಲಿ ಮುಳುಗಿತ್ತು. ಈಗಿನ ದ್ವಾರಕಾ ಏಳನೇ ಬಾರಿಗೆ ನಿರ್ಮಾಣಗೊಂಡದ್ದು.
ಶ್ರೀಕೃಷ್ಣ ಜನ್ಮಾಷ್ಟಮಿ
ಗೋಪೂಜಾ ದಿನೋತ್ಸವ ಆಚರಣೆಗೆ ಆಂಧ್ರ ಸರಕಾರದ ಆದೇಶ! ಶ್ರೀಕೃಷ್ಣ ಜನ್ಮಾಷ್ಟಮಿ ದಿನವನ್ನು ಗೋಪೂಜಾ ದಿನೋತ್ಸವವನ್ನಾಗಿ ಆಚರಿಸಬೇಕೆಂದು ಆಂಧ್ರಪ್ರದೇಶ ಸರಕಾರ ಆದೇಶವನ್ನು ಹೊರಡಿಸಿದೆ. ಗ್ಲೋಬಲ್‌ ಹಿಂದು ಹೆರಿಟೇಜ್‌ ಪೌಂಡೇಶನ್‌ನ ಮನವಿ ಮೇರೆಗೆ ಕಳೆದ ಎಪ್ರಿಲ್‌ ಒಂದರಂದು ಈ ಆದೇಶವನ್ನು ಹೊರಡಿಸಲಾಗಿತ್ತು. ಈ ಬಗ್ಗೆ ಮನವಿ ಪತ್ರವನ್ನು ಎಂಡೋಮೆಂಟ್‌ ಸಚಿವರಾದ ಶ್ರೀ ಮಾಣಿಕ್ಯಲ ರಾವ್‌ ಅವರಿಗೆ 2015ರ ನವೆಂಬರಿನಲ್ಲಿ ನೀಡಲಾಗಿತ್ತು. ಎಲ್ಲ ದೇವಾಲಯಗಳಲ್ಲೂ ಗೋಪೂಜೆಯನ್ನು ಮಾಡಬೇಕೆಂದು ರಾಜ್ಯ ಸರಕಾರ ಸೂಚಿಸಿದೆ.
*ಜಲಂಚಾರು ರಘುಪತಿ ತಂತ್ರಿ, ಉಡುಪಿ
*ನಿರೂಪಣೆ: ಎಸ್.ಜಿ.ನಾಯ್ಕ್‌, ಸಿದ್ದಾಪುರ
Advertisement

Udayavani is now on Telegram. Click here to join our channel and stay updated with the latest news.

Next