ಹುಣಸೂರು: ಮೈಸೂರು ಮಹರಾಜರ ಮನೆತನದ ಆರಾಧ್ಯಧೈವ ಹುಣಸೂರು ತಾಲೂಕಿನ ತಾಲೂಕಿನ ಬಿಳಿಕೆರೆ ಹೋಬಳಿಯ ಶ್ರೀಕ್ಷೇತ್ರ ಗದ್ದಿಗೆಯಲ್ಲಿ ಶ್ರೀ ಕೆಂಡಗಣ್ಣೇಶ್ವರ ಹಾಗೂ ಮಹದೇಶ್ವರ ವೈಭವದ ಜೋಡಿ ರಥೋತ್ಸವ ಹಾಗೂ ಕೊಂಡೋತ್ಸವವು ಸಾವಿರಾರು ಭಕ್ತರ ಉಧ್ಘೋಷಗಳ ನಡುವೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 11.30ಕ್ಕೆ ಮಾದಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ದಿವ್ಯಸಾನಿದ್ಯದಲ್ಲಿ ರಥಕ್ಕೆ ಪೂಜೆಸಲ್ಲಿಸಿ ಚಾಲನೆ ನೀಡಿದ ನಂತರ ಅಲಂಕೃತ ದೊಡ್ಡರಥದಲ್ಲಿ ಶ್ರೀ ಕೇಂಡಗಣ್ಣೇಶ್ವ ರಸ್ವಾಮಿ ಹಾಗೂ ಚಿಕ್ಕರಥದಲ್ಲಿ ಮಹದೇಶ್ವರ ಸ್ವಾಮಿ ದೇವರ ಉತ್ಸವ ಮೂರ್ತಿಗಳನ್ನಿಟ್ಟು ಕುಟ್ಟವಾಡಿ ಗೇಟ್‌ವರೆಗೆ ನೆರೆದಿದ್ದ ಸಾವಿರಾರು ಮಂದಿ ಭಕ್ತರು ಜೈಕಾರ ಹಾಕುತ್ತಾ ಒಂದರ ಹಿಂದೊಂದು ರಥವನ್ನೆಳೆದು ಪುನಿತರಾದರು. ಮತ್ತೆ ಸ್ವಸ್ಥಾನಕ್ಕೆ ರಥಗಳನ್ನು ತಂದು ನಿಲ್ಲಿಸಿದರು. ನವ ದಂಪತಿಗಳು, ಭಕ್ತರು ಹಣ್ಣು-ಜವನ ಎಸೆದು ಪುನಿತರಾದರೆ, ಹರಕೆ ಹೊತ್ತ ಭಕ್ತರು ಈಡುಗಾಯಿ ಒಡೆದು ಭಕ್ತಿ ಭಾವ ಮೆರೆದರು
ಶನಿವಾರ ರಾತ್ರಿ ದೇವರಿಗೆ ಹಾಲರವಿ ಸೇವೆ, ಭಾನುವಾರ ಮುಂಜಾನೆಯಿAದಲೇ ದೇವರಿಗೆ ಅಭಿಷೇಕ ಹಾಗೂ ಪ್ರಾರಂಭವಾದ ಜಾತ್ರಾ ಮಹೋತ್ಸವ ಅಂಗವಾಗಿ ದೇವರಿಗೆ ವಿವಿಧ ವಿಶೇಷ ಪೂಜಾ ಕೈಕರ್ಯಗಳನ್ನು ನೆರವೇರಿಸಿದರು.
ಕೊಂಡೋತ್ಸವ:ರಥೋತ್ಸವಕ್ಕೂ ಮುನ್ನ ಮುಂಜಾನೆ ದೇವಸ್ಥಾನದ ಆವರಣದಲ್ಲಿನ ಲಕ್ಷಣತೀರ್ಥ ನದಿ ದಂಡೆಯಲ್ಲಿ ನಡೆದ ಕೊಂಡೊತ್ಸವಕ್ಕೆ ಮಾದಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಕೆಂಡಗಣ್ಣೇಶ್ವರ ಸ್ವಾಮಿ ಮತ್ತು ಮಹದೇಶ್ವರ ಸ್ವಾಮಿಗೆ ಉಘೇ..ಉಘೇ.. ಎಂದು ಜಯಘೋಷಗಳ ನಡುವೆ ದೇವಾಲಯದ ಅರ್ಚಕ ಮಹದೇವಸ್ವಾಮಿರವರ ಪುತ್ರ ಮಹೇಶ್ ಕೊಂಡಹಾಯ್ದರು. ನಂತರ ಭಕ್ತರು ಅರಳು, ವಿವಿಧ ಧಾನ್ಯಗಳು, ಉಪ್ಪು, ಗಂಧದಕಡ್ಡಿ, ಕರ್ಪೂರವನ್ನು ಕೊಂಡಕ್ಕೆ ಸಮರ್ಪಿಸಿದರು. ಹರಕೆ ಹೊತ್ತವರು ಜಾನುವಾರುಗಳನ್ನು ಕೊಂಡದ ಸುತ್ತ ಪ್ರದಕ್ಷಿಣೆ ಹಾಕಿಸಿ ಹರಕೆ ತೀರಿಸಿದರು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಿದ್ದರು.
ಇಡೀ ಜಾತ್ರೆಗೆ ಸಿಹಿತಿಂಡಿ ಅಂಗಡಿ, ಐಸ್‌ಕ್ರೀಮ್, ಮಹಿಳೆಯರ ಸೌಂದರ್ಯ ಸಾಧನ ಅಂಗಡಿ ಗಮನ ಸೆಳೆಯಿತು.
ಬಸವಾಪಟ್ಟಣದ ತೊಟ್ಟಿಮನೆ ಸಹೋದರರ ಕುಟುಂಬ ವರ್ಗ, ರಿಸೀವರ್‌ಗಳಾದ ಪುಣ್ಯಶೀಲ, ಮಹದೇವಪ್ಪ ಹಾಗೂ ಯಾಜಮಾನರಾದ ಶಿವಲಿಂಗೇಗೌಡ, ಕುಟ್ಟವಾಡಿ ನಾಗಣ್ಣೆಗೌಡ, ಬಸವನಹಳ್ಳಿ ಪುಟ್ಟೆಗೌಡ, ಗ್ರಾ.ಪಂ.ಸದಸ್ಯ ವೆಂಕಟೇಶ್, ಪ್ರಕಾಶ್, ತಾ.ಪಂ.ಮಾ.ಸದಸ್ಯ ಗದ್ದಿಗೆದೇವರಾಜ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಸಂಭ್ರಮ-ಭಕ್ತಿಭಾವದಿಂದ ಭಾಗವಹಿಸಿದ್ದರು.