Advertisement

Punjalkatte ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಕುಸಿತ

12:57 AM Sep 04, 2024 | Team Udayavani |

ಪುಂಜಾಲಕಟ್ಟೆ: ಇಲ್ಲಿನ ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಕುಸಿದು ಬಿದ್ದ ಘಟನೆ ಸೆ. 1ರಂದು ರಾತ್ರಿ ಸಂಭವಿಸಿದೆ.

Advertisement

ದೇವಸ್ಥಾನದ ಹೊರಾಂಗಣದ ಎಡ ಪಾರ್ಶ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆ ಗೋಡೆ ಕುಸಿದು ಬಿದ್ದಿದ್ದು, ಮರುದಿನ ಬೆಳಗ್ಗೆ ಸಿಬಂದಿಗಳ ಗಮನಕ್ಕೆ ಬಂದಿದೆ. ಇಲ್ಲಿ ಅಂಗಣದಲ್ಲಿ ವಾನರಗಳಿಗೆ ನೈವೇದ್ಯ ಅನ್ನ ಬಡಿಸುತ್ತಿದ್ದು, ತಡೆಗೋಡೆಯೊಂದಿಗೆ ಅಂಗಣದ ಇಂಟರ್‌ಲಾಕ್‌ ಕಿತ್ತು ಹೋಗಿದೆ. ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ. ದೇವಸ್ಥಾನ ಬೃಹತ್‌ ಬಂಡೆಯ ಮೇಲೆ ಸ್ಥಾಪಿತಗೊಂಡಿದೆ.

ಕೆಳಭಾಗದಲ್ಲಿ ಶ್ರೀ ಪಾರ್ವತಿ ಸನ್ನಿಧಿ ಹಾಗೂ ತುತ್ತ ತುದಿಯಲ್ಲಿ ಶ್ರೀ ಈಶ್ವರ (ಶ್ರೀ ಕಾರಿಂಜೇಶ್ವರ) ದೇವಸ್ಥಾನವಿದೆ.

ಶ್ರಮದಾನದ ಮೂಲಕ ದುರಸ್ತಿ
ವ್ಯವಸ್ಥಾಪನ ಸಮಿತಿಯ ವಿನಂತಿಯ ಮೇರೆಗೆ ಗ್ರಾಮಸ್ಥರು ಶ್ರಮದಾನದ ಮೂಲಕ ಕುಸಿದ ತಡೆಗೋಡೆಯನ್ನು ಪುನರ್‌ ನಿರ್ಮಿಸಲು ಕಾರ್ಯ ಪ್ರವೃತ್ತರಾಗಿದ್ದಾರೆ. ಕೆಳಭಾಗದಲ್ಲಿರುವ ಶ್ರೀ ಪಾರ್ವತಿ ಸನ್ನಿಧಿ ಬಳಿಯಿಂದ ಗ್ರಾಮಸ್ಥರು ಸಾಮಗ್ರಿಗಳನ್ನು ತಲೆ ಹೊರೆಯ ಮೂಲಕ ಹೊತ್ತುತಂದು ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದ ಸಮಸ್ಯೆ?
2020ರಲ್ಲಿ ದೇಗುಲದ ಎಡಭಾಗದ ತಡೆಗೋಡೆ ಕುಸಿತವಾಗಿತ್ತು. ದೇಗುಲದ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ಕುಸಿತವಾಗಿರುವ ಆರೋಪ ಕೇಳಿ ಬಂದಿತ್ತು. ಆಗ ಗಣಿಗಾರಿಕೆ ಸ್ಥಗಿತಗೊಳಿಸ ಲಾಗಿತ್ತು. ಗಣಿಗಾರಿಕೆ ಮತ್ತೆ ಆರಂಭವಾಗಿಲ್ಲ. ಆದರೂ ತಡೆಗೋಡೆ ಕುಸಿತವಾಗಿದೆ. ತಜ್ಞರ ಪರಿಶೀಲನೆ ಬಳಿಕ ಏನೆಂದು ನೋಡಬೇಕಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next