ಆಲೂರು: 800 ವರ್ಷಗಳ ಇತಿಹಾಸವುಳ್ಳ ಕಸಬಾ ಮರಸು ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ, ಶ್ರೀ ಗಣಪತಿ, ಶ್ರೀ ಕಾಲಭೈರವಸ್ವಾಮಿ ದೇವಸ್ಥಾನ, ದ್ವಾರಮಂಟಪ, ಗರುಡಕಂಬದ ಪುನರ್ ಪ್ರತಿಷ್ಠಾಪನೆ ಮತ್ತು ಉದ್ಘಾಟನೆ ಸಮಾರಂಭ ಮೇ 1ರಿಂದ 3ರವರೆಗೆ ನಡೆಯಲಿದೆ.
ಮರಸು ಗ್ರಾಮ ವಿಶೇಷ ಐತಿಹಾಸಿಕ ಪರಂಪರೆಯನ್ನು ಹೊಂದಿದ ಗ್ರಾಮ. ಈ ಗ್ರಾಮದಲ್ಲಿ ಕರಿಗಲ್ಲು, ಕಾಲಭೈರವೇಶ್ವರ, ಕಲ್ಲೇಶ್ವರಸ್ವಾಮಿ, ಗಣಪತಿ, ಗರುಡಗಂಬ, ಕಲ್ಯಾಣಿ ಸೇರಿದಂತೆ ಅನೇಕ ಕುರುಹುಗಳು ಸಾಕ್ಷಿಯಾಗಿವೆ.
ಮರಸು ಗ್ರಾಮ: 800 ವರ್ಷಗಳ ಹಿಂದೆ ಮಮಕರರಾಜ ಎಂಬ ರಾಜನು ಕೋಟೆ ಕಟ್ಟಿಕೊಂಡು ಆಳ್ವಿಕೆ ನಡೆಸುತ್ತಿದ್ದನು. ಈ ಗ್ರಾಮಕ್ಕೆ ಬಂದವರು ಇಲ್ಲಿನ ವೈಭವ ಕಂಡು ಬೆರಗಾಗಿ, ತಾವು ಬಂದ ದಾರಿ ಮರೆತು ವಾಪಾಸು ತೆರಳದೆ ಉಳಿಯುತ್ತಿದ್ದ ಕಾರಣ, ಈ ಗ್ರಾಮಕ್ಕೆ ಮರಸು ಎಂದು ಹೆಸರಿಡಲಾಯಿತು ಎಂದು ಕುರುಹುರಟ್ಟಿನಲ್ಲಿ ಹೇಳಲಾಗಿದೆ.
ಗ್ರಾಮದ ವಿಶೇಷ: ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತಿರುವ ಗಣಪತಿ, ಪೂರ್ವಕ್ಕೆ ಮುಖ ಮಾಡಿ ನಿಂತಿರುವ ಕಲ್ಲೇಶ್ವರ, ಪಶ್ಚಿಮಕ್ಕೆ ಮುಖ ಮಾಡಿ ನಿಂತಿರುವ ಗರುಡದೇವರ ಗುಡಿ, ಗಣಪತಿ ದೇಗುಲದ ಎದುರಿಗಿರುವ ಕರಿಗಲ್ಲು. ಕಲ್ಲೇಶ್ವರ ದೇಗುಲದ ಎಡ ಭಾಗದಲ್ಲಿ ದಕ್ಷಿಣ ದಿಕ್ಕಿಗೆ ಮುಖಮಾಡಿ ನಿಂತಿರುವ ಕಾಲಭೈರವೇಶ್ವರ ಮೂರ್ತಿ, ಮುಂಭಾಗದಲ್ಲಿ ಕೊತ್ತಲರಾಮಪ್ಪ ದೇವರ ಗುಡಿ, ಕುದುರೆ ಸಮಾದಿ, ಪಕ್ಕದಲ್ಲಿ ಊರಿನ ದ್ವಾರ ಬಾಗಿಲು, ಎದುರಿಗಿರುವ ಕಲ್ಯಾಣಿ ಕೊಳ, ಗರುಡಗಂಬದ ಎದುರು ಒಂದು ಕಿ.ಮೀ.ದೂರದಲ್ಲಿ ಯಾಸನತೋಳು ಇದೆ.
ದೇಗುಲಗಳ ಜೀರ್ಣೋದ್ಧಾರ: ವಿಶೇಷವೆಂದರೆ ಗರುಡಗಂಬ ಇಲ್ಲಿ ಹೊರತುಪಡಿಸಿದರೆ ಉತ್ತರ ಪ್ರದೇಶ ಕಾಶಿಯಲ್ಲಿದೆ. ಕಾಲ ಕಳೆಂದತೆ ದೇಗುಲಗಳು ಶಿಥಿಲ ಸ್ಥಿತಿ ತಲುಪಿದವು. ಈಗ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೊತ್ಥಾನ ಟ್ರಸ್ಟ್(ರಿ), ರಾಜ್ಯ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಮತ್ತು ಕಲ್ಲೇಶ್ವರ ಜೀರ್ಣೋದ್ಧಾರ ಸಮಿತಿ ಸಹಯೋಗದೊಂದಿಗೆ ಜೀರ್ಣೋದ್ಧಾರ ಮಾಡಿದ ದೇಗುಲಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಮರಸು ಗ್ರಾಮ ಐತಿಹಾಸಿಕ ಗ್ರಾಮವಾಗಿದೆ. ಈ ಗ್ರಾಮದಲ್ಲಿರುವ ಕುರುಹುಗಳು ವಿಶೇಷವಾಗಿರುವುದರಿಂದ, ಈ ಗ್ರಾಮವನ್ನು ಪಾರಂಪರಿಕ ಇಲಾಖೆಗೆ ಸೇರಿಸಿ, ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎನ್ನುತ್ತಾರೆ ಸಮಿತಿ ಸಂಚಾಲಕ ಎಂ. ಪಿ. ಕುಮಾರ್.