ಹೊಸಪೇಟೆ: ನಗರದ ಲೋಹಾದ್ರಿ ಬೆಟ್ಟದಲ್ಲಿರುವ ಶ್ರೀಜಂಭುನಾಥಸ್ವಾಮಿ ರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಶ್ರೀಜಂಬುನಾಥಸ್ವಾಮಿಗೆ ವಿಶೇಷ ಅಭಿಷೇಕ, ಪುಷ್ಪಲಂಕಾರ ನೆರವೇರಿಸಲಾಯಿತು. ಬೆಳಗ್ಗೆ 9ಕ್ಕೆ ಸಂಪ್ರದಾಯದಂತೆ ಉತ್ಸವ ಮೂರ್ತಿಯೊಂದಿಗೆ ಭಕ್ತರು ಮಡಿತೇರು ಎಳೆದರು. ಬೆಳಗ್ಗೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದರು. ಬೇಸಿಗೆ ಬಿಸಿಲು ಲೆಕ್ಕಿಸದೆ ಜಂಭುನಾಥಸ್ವಾಮಿಯ ನಾಮಸ್ಮರಣೆಯೊಂದಿಗೆ ನಗರದಿಂದ ಮೂರು ಕಿ.ಮೀ. ನಡಿಗೆಯಲ್ಲಿ ಗುಡ್ಡಕ್ಕೆ ತೆರಳಿದರು. ರಸ್ತೆಯುದ್ದಕ್ಕೂ ಭಕ್ತರ ದಾಹ ತಣಿಸಲು ಭಕ್ತರೇ ನೀರಿನ ಅರವಟಿಗೆಗಳನ್ನಿಟ್ಟು ದಣಿವು, ದಾಹ ತಣಿಸಿದರೆ, ಇನ್ನೂ ಕೆಲವರು ಮಜ್ಜಿಗೆ, ಅನ್ನದಾಸೋಹ ಮಾಡಿ ಭಕ್ತಿಸೇವೆ ಸಲ್ಲಿಸಿದರು. ಶ್ರೀಜಂಭುನಾಥಸ್ವಾಮಿ ದೇವಸ್ಥಾನದಲ್ಲಿ ಮಾ.30ರಂದು ಕಡುಬಿನ ಕಾಳಗ ನಡೆಯಲಿದೆ. ಏ.5ರಂದು ಮಧ್ಯರಾತ್ರಿ 12ರಿಂದ ಬೆಳಗ್ಗೆ 5ರವರೆಗೆ ಗಂಗೆ ಪೂಜೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.