ಗಂಗಾವತಿ: ದಾಸ ಸಾಹಿತ್ಯದ ಮೂಲಕ 15 ಶತಮಾನದಲ್ಲಿ ದೈವ ಹಾಗೂ ಲೌಖೀಕ ಸಮಸ್ಯೆಗಳಿಗೆ ಪರಿಹಾರವನ್ನು ಹರಿದಾಸ ಸಾಹಿತ್ಯ ರಚನೆಕಾರರು ಕಂಡುಕೊಂಡಿದ್ದರೆಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಪೂರ್ಣಿಮಾ(ಕನಕದುರ್ಗಾ) ಚಿತ್ರಮಂದಿರದಲ್ಲಿ ಶ್ರೀ ಜಗನ್ನಾಥ ದಾಸರು ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನಕದಾಸರು, ಪುರಂದರದಾಸರ ನಂತರ ಎರಡನೇ ತಲೆಮಾರಿನಲ್ಲಿ ಬರುವ ದಾಸ ಪರಂಪರೆಯಲ್ಲಿ ಶ್ರೀಜಗನ್ನಾಥ ದಾಸರು ಪ್ರಮುಖರಾಗಿದ್ದಾರೆ. ವಿಜಯದಾಸರು, ಗೋಪಾಲದಾಸರ ಪ್ರಭಾವಕ್ಕೊಳಗಾಗಿ ಶ್ರೀಜಗನ್ನಾಥ ದಾಸರು ದಾಸ ಸಾಹಿತ್ಯ ರಚನೆ ಮಾಡುತ್ತಾರೆ. ಇಂತಹ ಮಹನೀಯರು ಗಂಗಾವತಿ ತಾಲೂಕಿನಾದ್ಯಂತ ಸಂಚಾರ ಮಾಡಿ ಗುರುತು ಉಳಿಸಿದ್ದು ಇದನ್ನು ಸಿನಿಮಾ ಮಾಡುವ ಮೂಲಕ ಇಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಆನೆಗೊಂದಿಯ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಹಾಸ್ಯ ಭಾಷಣಕಾರ ಬಿ.ಪ್ರಾಣೇಶ, ರಾಘವೇಂದ್ರಶೆಟ್ಟಿ, ಜೋಗದ ಹನುಮಂತಪ್ಪ, ಪತ್ರಕರ್ತರಾದ ರಾಮಮೂರ್ತಿ ನವಲಿ, ಇಂಗಳಗಿ ನಾಗರಾಜ, ಹರೀಶ ಕುಲಕರ್ಣಿ, ಸಿನಿಮಾದಲ್ಲಿ ನಟಿಸಿರುವ ವಿಷ್ಣುತೀರ್ಥ ಆದಾಪುರ, ರಾಘವೇಂದ್ರ ಲಾಯದುಣಸಿ, ವಾಸುದೇವ ನವಲಿ ಸೇರಿ ಅನೇಕರಿದ್ದರು.