Advertisement
ಜಾತಿ, ಮತ, ಪಂಥ ಮೀರಿ ಎಲ್ಲ ರಿಂದಲೂ ಗುರುತ್ವೇನ ಮಾನ್ಯರಾದವರು ಶ್ರೀ ರಾಘವೇಂದ್ರರು. ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ “ಮಂಚಾಲೆಯ ರಾಘಪ್ಪ’ ಎಂಬುದು ಅತಿಶಯೋಕ್ತಿಯಲ್ಲ. ರಾಯರ ನೆರಳಲ್ಲಿ ನಾಸ್ತಿಕನಿಗೂ ಆಸ್ತಿಕತೆಯ ಚಿಗುರು ಟಿಸಿಲೊಡೆದರೂ ವಿಶೇಷವಿಲ್ಲ. ರಾಯರಿಂದ ಅನುಗ್ರಹೀತರಾದ ಭಕ್ತ ಸಮೂಹವೇ ಇದಕ್ಕೆ ಸಾಕ್ಷಿ. ರಾಯರು ಭಗವಂತನಲ್ಲ, ದೇವರ ದೂತರಾಗಿ, ಭಕ್ತಿಯ ಪ್ರಚಾರಕರಾಗಿ ಭುವಿಗೆ ಬಂದವರು. “ಹರಿಪಾದ-ಕಂಜ ನಿಷೇವಣಾಲಬ್ಧ ಸಮಸ್ತ ಸಂಪತ್’- ಭಗವಂತನ ಅನುಗ್ರಹದ ದೊಡ್ಡ ಬಲವೇ ರಾಯರ ಪ್ರಭಾವ, ಪವಾಡ, ಆಶೀರ್ವಾದದ ಮೂಲ ಸ್ರೋತ.
Related Articles
Advertisement
ಪ್ರಹ್ಲಾದನ ಭೌಮ ಅವತಾರವೆಂದು ನಂಬಿದೆ ಭಕ್ತ ವೃಂದ. ನಾರದ ಬಿತ್ತಿದ ಭಕ್ತಿಯ ಭೀಜ ಧರೆಯೊಳಗೆ ಟಿಸಿಲೊಡೆದು ರೆಂಬೆ ಕೊಂಬೆಗಳಿಂದ ತುಂಬಿ ಫಲಭರಿತ ವೃಕ್ಷವಾಗಿ ಕಂಗೊಳಿಸುತ್ತಿರುವುದು. ರಾಯರಿಂದ “ಅದ್ಯ ಶ್ರೀ ರಾಘವೇಂದ್ರಾತ್ ವಿಲಸತಿ ಫಲಿತೋ ಮಧ್ವ ಸಿದ್ಧಾಂತ ಶಾಖೀ’. ಅನೇಕ ಟಿಪ್ಪಣಿ ಗ್ರಂಥಗಳು, ಹಾಡುಗಬ್ಬದಿಂದ, ದಾಸ ಹಾಗೂ ವ್ಯಾಸ ಸಾಹಿತ್ಯವನ್ನು ಪುಷ್ಟಿಗೊಳಿಸಿದರು ರಾಯರು.
ಥಾಮಸ್ ಮನ್ರೋರಂತ ಆಂಗ್ಲರೇ ಇರಲಿ, ಆದವಾನಿಯ ನವಾಬನೇ ಇರಲಿ; ಜಾತಿ, ಮತಗಳ ಎಲ್ಲೆ ಮೀರಿ ಅನುಗ್ರಹಿಸಿದರು ರಾಯರು. ಅದಕ್ಕೆ ಸಾಕ್ಷಿಯೇ ಇಂದು ಮಂಚಾಲೆಯಲ್ಲಿ ನೆಲೆನಿಂತ ಶ್ರೀರಾಯರ ಮೂಲ ಬೃಂದಾವನ. ತಮ್ಮ ಪ್ರತಿಯೊಂದು ಪವಾಡಗಳ ಹಿನ್ನೆಲೆಯಲ್ಲೂ ರಾಯರು ತಣ್ತೀವನ್ನು ಜನರಿಗೆ ತೋರಿದರು. ವಿಷಯಾಸಕ್ತರಾಗಿ ಭೌತಿಕದಲ್ಲೇ ಮುಳುಗಿದವರನ್ನೂ ಜ್ಞಾನಭಕ್ತಿ ಕೊಟ್ಟು ಉದ್ಧರಿಸುವೆನೆನ್ನಲು ಕುಲಕರ್ಣಿಯ ಮಗನನ್ನು ಪರಮಾನ್ನದ ಕೊಪ್ಪರಿಗೆಯಿಂದ ರಕ್ಷಿಸಿದರು. ದೇವರ ಅಸ್ತಿತ್ವನ್ನು ತೋರಲು ಆದವಾನಿಯ ನವಾಬನಿಗೆ ಅನುಗ್ರಹಿಸಿದರು. ಆದರೆ ರಾಯರು ಕೇವಲ ಪವಾಡಗಳಿಂದಲೇ ದೊಡ್ಡವರಾದವರಲ್ಲ. ಭಗವನ್ಮಹಿಮೆಯನ್ನು ಜನಮಾನಸದಲ್ಲಿ ಬಿತ್ತಿದ್ದರಿಂದಲೇ ಎತ್ತರಕ್ಕೇರಿದರು. ಇದಕ್ಕೂ ಅವರ ಪೂರ್ವಾವತಾರ ಪ್ರಹ್ಲಾದನೇ ಸಾಕ್ಷಿ.
ಭಗವಂತ ವರವನ್ನು ನೀಡಿದರೂ ಸ್ವೀಕರಿಸದೆ ಭಕ್ತಿಯನ್ನಷ್ಟೇ ಬಯಸಿದ. ಅನುಗ್ರಹಕ್ಕಾಗಿ ಆರಾಧಿಸುವವನು ವ್ಯಾಪಾರಿಯಷ್ಟೇ. ಆತ ಭಕ್ತನಾಗಲಾರ. “ನಸಭಕ್ತಃ ಸವೈವಣಿಕ್’ ಎಂಬ ಅನುಸಂಧಾನದವನು ಪ್ರಹ್ಲಾದ. ದೇವರ ಪ್ರೀತಿಗಾಗಿಯಷ್ಟೇ ಅವನನ್ನು ಆರಾಧಿಸಬೇಕು ಎಂದವನು ಪ್ರಹ್ಲಾದ. ಅವನ ಭೌಮ ಅವತಾರ ಎಂದು ನಂಬಿದ ರಾಯರಲ್ಲಿ ಭೌತಿಕ ಸುಖಕ್ಕಾಗಿ ಲೌಕಿಕ ಕಾಮನೆಗಳನ್ನಷ್ಟೇ ಪ್ರಾರ್ಥಿಸುವುದು ಎಷ್ಟು ಉಚಿತ? ನಿಜವಾಗಿ ಅದರಲ್ಲಿ ನಾವು ಬೇಡಬೇಕಾಗಿರುವುದು ಭಗವಂತನಲ್ಲಿ ನಿರ್ವ್ಯಾಜ ಭಕ್ತಿ. ಅದೇ ರಾಯರಿಗೆ ಸಲ್ಲಿಸುವ ಸೇವೆ. “ನೈತಾನ್ ವಿಹಾಯ ಕೃಪಣಾನ್’ ಎಂಬಂತೆ ರಾಯರು ಖಂಡಿತವಾಗಿಯೂ ನಮ್ಮೆಲ್ಲರ ಅನುಗ್ರಹವನ್ನು ಮಾಡುತ್ತಾರೆ.
ರಾಯರು ಪೂರ್ವಾಶ್ರಮದಲ್ಲಿ ದೊಡ್ಡ ವೈಣಿಕರಂತೆ. ಆದರೆ ಆಶ್ರಮಾನಂತರದಲ್ಲಿ ಉಪನಿಷತ್ತಿನ “ದೈವೀ ವೀಣಾ’ ಎಂಬ ನುಡಿಗೆ ಸಾಕ್ಷಿಯಾದರು. ಈ ಶರೀರವೆಂಬ ವೀಣೆಯಲ್ಲಿ ನಿರಂತರ ಭಗ ವಂತನ ಗುಣಗಾನ, ಭಕ್ತಿಯೆಂಬ ಸ್ವರವನ್ನು ಮೀಟಿದರು. ಇಂತಹ ಗುರುರಾಯರು ಇಂದು ನಮಗೆಲ್ಲ ನಮ್ಮ ಬಯಕೆಗಳ ದಾತಾರರಾಗಿ ದೊರಕಿರು ವುದು ನಮ್ಮೆಲ್ಲರ ಭಾಗ್ಯವೇ ಸರಿ.
-ಚಿಪ್ಪಗಿರಿ ನಾಗೇಂದ್ರ ಆಚಾರ್ಯ, ಉಡುಪಿ