ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಭಟ್ಟರಾಗಿದ್ದ ಅಣ್ಣಯ್ಯ ಈಗ ರಾಯದುರ್ಗದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಇವರ ಹೋಟೆಲ್‌ಗೆ ಹೋದರೆ ಸಾಕು ಕಡಿಮೆ ಖರ್ಚಲ್ಲಿ ಹಸಿವು ಮಾಯವಾಗುತ್ತದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ನಿಂತು, “ಇಲ್ಲಿ ಭಟ್ರ ಹೋಟೆಲ್ ಎಲ್ಲಿ?’ ಅಂತ ಕೇಳಿ ವಿಳಾಸ ತಿಳಿದುಕೊಂಡರೆ ಸಾಕು, ಅಲ್ಲಿಗೆ ನಿಮ್ಮ ಹೊಟ್ಟೆ ತುಂಬಿದಂಗೆ. ಹೋಟೆಲ್ ಮುಂದೆ ನಿಂತು “ಇದೇನು, ಭಟ್ರ ಹೋಟೆಲ್ ಅಂತ ಬೋಡೇì ಇಲ್ಲಿ’ ಅಂತ ಅಂದು ಕೊಳ್ಳಬೇಡಿ.ಈ ಹೋಟೆಲ್‌ನ ನಿಜವಾದ ಹೆಸರು ಶ್ರೀ ಗುರು ದರ್ಶನ ಉಡುಪಿ ಹೋಟೆಲ್ ಅಂತ.ತಗಡಿನ ಚಪ್ಪರದ ಕೆಳಗೆ ಕೂಡ್ರಬೇಕು. ಇಲ್ಲಿ ಗ್ರಾಹಕರಿಗಾಗಿ ಆರು ಬೆಂಚು, 4 ಟೇಬಲ್‌ಗಳಿವೆ.
ಇದರ ಮಾಲೀಕರು ಅಣ್ಣಯ್ನಾ, ಅಡ್ಡ ಹೆಸರು ಭಟ್ರಾ ಅಂತ. ಈ ಅಣ್ಣಯ್ಯ 18 ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಉಡುಪಿ ಜಿಲ್ಲೆಯ ಕುಂದಾಪುರದ ವಾಲೂ¤ರಿನಿಂದ ರಾಮದುರ್ಗಕ್ಕೆ ಬಂದು ಈ ಹೋಟೆಲ್ ಆರಂಭಿಸಿದರು. ಅದಕ್ಕೂ ಮೊದಲು ದೆಹಲಿಯ ಅಶೋಕ ಹೋಟೆಲ್‌ನಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದರು. ತಂದೆನಿಧನರಾದ ನಂತರ ದೆಹಲಿ ಬಿಟ್ಟು ಊರಿಗೆ ವಾಪಸಾದ ಭಟ್ಟರು, ಈ ಹೋಟೆಲ್ ಪ್ರಾರಂಭಿಸಿದರು.
ಇಲ್ಲಿ ಬೆಳಗ್ಗೆ 6ರಿಂದ 11ಗಂಟೆಯವರೆಗೂ ಇಡ್ಲಿ, ವಡೆ, ಪೂರಿ, ಶಿರಾ, ಉಪ್ಪಿಟ್ಟು, ಜೊತೆಗೆ ಟೀ, ಕಾಫಿ, ಬೋರ್ನವಿಟಾ ಸಿಗುತ್ತದೆ. ಮಧ್ಯಾಹ್ನ ಫಲಾವ್, ಮೈಸೂರ ಭಜ್ಜಿ, ಒಗ್ಗರಣೆ ಹಾಕಿದ ಅವಲಕ್ಕಿ ಹಾಗೂ ಸಾಯಂಕಾಲ ಚುರುಮರಿ, ಗಿರಿಮಿಟ್, ಮೆಣಸಿಕಾಯಿ ಭಜ್ಜಿ ಸಿಗುತ್ತದೆ. ಬೆಳಗ್ಗೆ 6ಗಂಟೆಯಿಂದ ರಾತ್ರಿ 8ರವರೆಗೂ ಹೋಟೆಲ್ ತೆರೆದಿರುತ್ತದೆ. ತಿಂಡಿಗಳ ದರ ಗ್ರಾಹಕ ಸ್ನೇಹಿಯಾಗಿದ್ದು, ರೂ.15/- ನಿಂದ ರೂ.20- ಒಳಗೆ ಇದೆ. ಇಲ್ಲಿ ಬಿಸಿ ಬಿಸಿಯಾದ ಉತ್ತಮ ಚಹಾ ಕೇವಲ ರೂ.3. ಬೋರ್ನವಿಟಾ, ಕಾಫಿ, ಸ್ಪೇಷಲ್ ಚಹಾ ಎಲ್ಲವೂ ಕೇವಲ 10ರೂ.
ಈ ಹೋಟೆಲ್‌ಗೆ ವೃದ್ಧರು, ಚಾಲಕರು, ಕಾರ್ಮಿಕರು, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದರ ಕಡಿಮೆ ಇದೆ ನಿಜ, ಹಾಗಂತ ಅಣ್ಣಯ್ಯ ಎಂದೂ ಗ್ರಾಹಕರಿಗೆ ಕಳಪೆ ಆಹಾರ ನೀಡುವುದಿಲ್ಲ. ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಉತ್ತಮ ತರಕಾರಿ, ಆಹಾರ ಪದಾರ್ಥಗಳು ಸಿಗುವ ಹೋಲ್‌ಸೇಲ್ ಅಂಗಡಿಗಳಿಂದ ತಂದು ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ಬಡಿಸುತ್ತಾರೆ. ಇಲ್ಲಿ ತಿಂಡಿ ತಿನ್ನಲು ಬಂದವರನ್ನು ನಗು ಮೊಗದಿಂದ ಸ್ವಾಗತಿಸಿ ಉಪಚರಿಸುವ ರೀತಿ ಆತ್ಮೀಯವಾದದ್ದು. ಭಟ್ಟರ ಹೋಟೆಲ್ ಫೇಮಸ್ಸಾಗಲು ಇದೂ ಒಂದು ಕಾರಣ.
ನಮಗೆ ಹೆಚ್ಚು ಲಾಭ ಮಾಡುವ ಆಸೆ ಇಲ್ಲ. ಗ್ರಾಹಕರಿಗೆ ಒಳ್ಳೆಯ ತಿಂಡಿ ಕೊಡಬೇಕು ಅನ್ನೋದೇ ನಮ್ಮ ಗುರಿ. ಹೀಗಾಗಿ ಕಡಿಮೆ ದರದಲ್ಲಿ ರುಚಿಯಾದ ತಿಂಡಿಯನ್ನು ನೀಡುತ್ತೇವೆ’ ಎನ್ನುತ್ತಾರೆ ಭಟ್ಟರು. ಮೊದಲಿನಿಂದಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಶುಚಿ, ರುಚಿಯಾದ ಆಹಾರ ನೀಡುತ್ತಾ ಸರಳ ಜೀವನ ಮೈಗೂಡಿಸಿಕೊಂಡಿರುವ ಅಣ್ಣಯ್ಯ ಅವರು ಹೋಟೆಲ್‌ಗೆ ಹೊಂದಿಕೊಂಡಿರುವ ಮಹಾಂತೇಶ ನಗರ, ವಿಜಯನಗರ, ಬಸವನಗರ ನಿವಾಸಿಗಳಿಗೆ ಅಚ್ಚುಮೆಚ್ಚಾಗಿದ್ದಾರೆ. ಪತ್ನಿ ಶ್ರೀಮತಿ ಕೂಡಾ ಭಟ್ಟರಿಗೆ ಸಾಥ್ ನೀಡುತ್ತಾರೆ.
ಹೊಟೇಲ್ ವಿಳಾಸ: ಕೆ.ಎಸ್.ಆರ್.ಟಿ.ಸಿ. ಹೊಸ ನಿಲ್ದಾಣದ ಹತ್ತಿರ, ರಾಮದುರ್ಗ (ಜಿ:ಬೆಳಗಾವಿ)
ಹೋಟೆಲ್ ಸಮಯ- ಬೆಳಿಗ್ಗೆ 6 ರಿಂದ ರಾತ್ರಿ 8ರವರೆಗೆ, ಹಬ್ಬಗಳಲ್ಲಿ ಮಾತ್ರ ರಜೆ.
– ಸುರೇಶ ಗುದಗನವರ