Advertisement

ಕನ್ನಡದ ಕಾರ್ಯ ಮಾಡುವ ಶ್ರೀ ದೊರೆತಿದ್ದು ಸೌಭಾಗ್ಯ

05:51 PM Nov 30, 2021 | Team Udayavani |

ಬೆಳಗಾವಿ: ಭಗವತ್‌ ಗೀತೆ, ಸಿದ್ಧಾಂತ ಶಿಖಾಮಣಿ ಹೀಗೆ ಅನೇಕ ಸಂಸ್ಕೃತ ಗ್ರಂಥಗಳ ಸಿಡಿ ಮಾಡಿ ಜಗತ್ತಿಗೆ ಸಮರ್ಪಿಸುವ ಮಹನಿಯರನ್ನು ನಾವು ನೋಡಿದ್ದೇವೆ. ಆದರೆ ಚಿದಾನಂದ ಅವಧೂತರು ರಚಿಸಿದ 18 ಅಧ್ಯಾಯಗಳ ಕನ್ನಡದ ದೇವಿ ಪಾರಾಯಣವನ್ನು ಸುಮಾರು 14 ಲಕ್ಷ ರೂ. ವೆಚ್ಚ ಮಾಡಿ ನುರಿತ ಗಾಯಕರಿಂದ ಹಾಡಿಸಿ, ಕನ್ನಡದ ಪುರಾಣವನ್ನು ಲೋಕಕ್ಕೆ ಪರಿಚಯಿಸಿದ ಕೀರ್ತಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Advertisement

ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ 49ನೇ ಸುವಿಚಾರ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ಕನ್ನಡದ ಬಗ್ಗೆ ಮಾತನಾಡುವುದು ಅಷ್ಟೇ ಅಲ್ಲ. ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ಕನ್ನಡದ ಕಾರ್ಯ ಮಾಡಿರುವ ಶ್ರೀಗಳು ಸಿಕ್ಕಿರುವುದು ಜಿಲ್ಲೆಯ ಜನರ ಭಾಗ್ಯ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಸರ್ವಧರ್ಮಿಯರ ಹಿತ ಕಾಪಾಡುವುದರ ಜತೆಗೆ ಸಮಾಜಮುಖೀ ಕೆಲಸ ಮಾಡಿಕೊಂಡು ಬರುತ್ತಿರುವ ಹುಕ್ಕೇರಿ ಹಿರೇಮಠ,  ರಾಜ್ಯದಲ್ಲಿರುವ ಯಾವುದೇ ಮಠಗಳು ಮಾಡದ ಕಾರ್ಯವನ್ನು ಮಾಡಿದೆ. ಅನೇಕ ಸಂಸ್ಕೃತದ ಗ್ರಂಥಗಳನ್ನು ಆಧುನಿಕ ದಿನಮಾಗಳಲ್ಲಿ ಭಕ್ತರಿಗೆ ಅನುಕೂಲವಾಗುವ, ಅಭಿರುಚಿಗೆ ತಕ್ಕಂತೆ ಸಮಾಜಕ್ಕೆ ಮನವರಿಕೆಯಾಗುವ ಹಾಗೆ ಸಿಡಿ ರೂಪದಲ್ಲಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಹೇಳಿದರು.

ಆರ್‌ಎಸ್‌ಎಸ್‌ ಪ್ರಮುಖ ಮನೋಹರ ಮಠದ ಮಾತನಾಡಿ, ದೇಶದಲ್ಲಿ ಅಧಿಕೃತವಾಗಿ 1ಲಕ್ಷ 30 ಸಾವಿರ ಮಠಗಳಿವೆ. ಈ ಮಠಗಳು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿವೆ. ಭಾರತ ಎಂದರೆ ಅದು ಧರ್ಮಭೂಮಿ ಎಂದರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್‌ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಕನ್ನಡ ಕಾರ್ಯಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ಕನ್ನಡಿಗರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಸಿಹಿ ಹೋಳಿಗೆ ಊಣಬಡಿಸಿದ್ದು, ಅಷ್ಟೆ ಅಲ್ಲ, ಎಲ್ಲಾ ಕನ್ನಡದ ಕಾರ್ಯಗಳಿಗೆ ಸ್ಪಂದಿಸುತ್ತಾರೆ. ಕನ್ನಡದ ಅನೇಕ ಗ್ರಂಥಗಳನ್ನು ಶ್ರೀಮಠದಿಂದ ಹೊರ ತಂದಿದ್ದಾರೆ ಎಂದು ಹೇಳಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವು ಇಂದು ಕಿತ್ತೂರು ಕರ್ನಾಟಕದ ವಿಜಯೋತ್ಸವದ ಸಂದರ್ಭದಲ್ಲಿದ್ದೇವೆ. 49ನೇ ಸುವಿಚಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಉಜ್ಜಯಿನಿ ಜಗದ್ಗುರುಗಳ ಆಶೀರ್ವಾದದಲ್ಲಿ ನಾವೆಲ್ಲರೂ ದೇಶಕ್ಕಾಗಿ, ನಾಡಿಗಾಗಿ ನಮ್ಮನ್ನು ನಾವು ಸಮರ್ಪಿಸಬೇಕಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಸತ್ಯಗಿರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಜಯ ಶಾಸ್ತ್ರೀ, ಮಹಾಂತೇಶ ಶಾಸ್ತ್ರೀ, ವಿರುಪಾಕ್ಷಯ್ಯ ನೀರಲಗಿಮಠ, ವಿದ್ವಾನ್‌ ಚಂದ್ರಶೇಖರ ಸ್ವಾಮೀಜಿ ಉಪಸ್ಥಿತರಿದ್ದರು. ಬಸವರಾಜ ಹಳಂಗಳಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡನೇ ಬಾರಿ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾದ ಮಂಗಲಾ ಮೆಟಗುಡ್ಡ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next