ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯಾದ್ಯಂತ ಕೆರೆಗಳ ಪುನಃಶ್ಚೇತನ ಕಾರ್ಯಮದಡಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ವರ್ಷ ಹೊಸದಾಗಿ ಪುನಃಶ್ಚೇತನಗೊಂಡ 120 ಕೆರೆಗಳ ಸುತ್ತ ಗಿಡನಾಟಿ ನಡೆಯಲಿದೆ ಎಂದು ಶ್ರೀ ಕ್ಷೇ ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ರಾಜ್ಯಾದ್ಯಂತ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಮೂಲಕ ಈ ವರೆಗೆ 394 ಕೆರೆಗಳನ್ನು ಹಾಗೂ ಯೋಜನೆಯ ಸಹಯೋಗದೊಂದಿಗೆ ಸರಕಾರದ ಕೆರೆ ಸಂಜೀವಿನಿ ಕಾರ್ಯಕ್ರಮದಡಿ 65 ಕೆರೆಗಳನ್ನು ಪುನಃಶ್ಚೇತನಗೊಳಿಸಿದ್ದು, ಒಟ್ಟು 459 ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ.
ಪುನಃಶ್ಚೇತನಗೊಂಡ ಕೆರೆಗಳ ಅತಿಕ್ರಮಣ ತಡೆಗಟ್ಟುವುದು, ಏರಿ ಜರಿಯದಂತೆ ಹಸಿರು ಹೊದಿಕೆ ನಿರ್ಮಾಣವಾಗಬೇಕಿರುವುದರಿಂದ ಕೆರೆಯಂಗಳದಲ್ಲಿ ಅರಣ್ಯ ಸಸಿಗಳ ನಾಟಿ ಮತ್ತು ಅವುಗಳ ಸಂರಕ್ಷಣೆಯನ್ನು ಜೂನ್‌ನಲ್ಲಿ ಆಯೋಜಿಸಲಾಗಿದೆ. ಮಾಸಾಂತ್ಯದೊಳಗೆ ಹೊಸದಾಗಿ ಪುನಃಶ್ಚೇತನಗೊಂಡ 120 ಕೆರೆಗಳ ಸುತ್ತ ಗಿಡನಾಟಿ ಪೂರ್ಣಗೊಳ್ಳಲಿದೆೆ.
ಮುಖ್ಯವಾಗಿ ಪ್ರಾಣಿ-ಪಕ್ಷಿಗಳಿಗೆ, ಜನ-ಜಾನುವಾರುಗಳಿಗೆ, ಹಣ್ಣು, ಹೂವು, ಮೇವು, ನೆರಳು ಕೊಡುವ ಗಿಡಗಳನ್ನು, ಕೆರೆ ಸಮಿತಿಗೆ ಆದಾಯ ತಂದುಕೊಡಬಹುದಾದ ವಿವಿಧ ಹಣ್ಣಿನ ಗಿಡಗಳ 16,000 ಸಸಿಗಳ ನಾಟಿಗೆ ಆದ್ಯತೆ ನೀಡಲಾಗಿದೆ. ಅದೇ ರೀತಿ ನೂತನವಾಗಿ ನಿರ್ಮಿಸಿರುವ ಕೆರೆಯ ಏರಿ ಜರಿಯದಂತೆ ಏರಿಯ ಸುತ್ತ ಹುಲ್ಲು ಬೆಳೆಯುವ ಬೀಜಗಳ ಬಿತ್ತನೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿಗಳು, ಜನಪ್ರತಿನಿಧಿಗಳು, ಗಣ್ಯರು, ಸ್ಥಳೀಯರು ಸೇರಿ 6,000 ಜನ ಭಾಗವಹಿಸಲಿದ್ದಾರೆ. ನಾಟಿ ಮಾಡುವ ಪ್ರತೀ ಗಿಡಕ್ಕೆ ಬೇಲಿ ರಚಿಸಿ ನೀರು, ಗೊಬ್ಬರ ಹಾಕಿ ಪೋಷಿಸಿ ಸಂರಕ್ಷಿಸುವ ಜವಾಬ್ದಾರಿಯನ್ನು ಕೆರೆ ಅಭಿವೃದ್ಧಿ ಸಮಿತಿಯವರು ನಿರ್ವಹಿಸಲಿದ್ದಾರೆ ಎಂದು ಮಂಜುನಾಥ್ ತಿಳಿಸಿದ್ದಾರೆ.