ಹುಮನಾಬಾದ: ಬೇಮಳಖೇಡಾ ಗ್ರಾಮದ ವೀರಭದ್ರೇಶ್ವರ ಮಂದಿರದಲ್ಲಿ ಶ್ರಾವಣ ಸಮಾಪ್ತಿ ಹಾಗೂ ಚಂದ್ರಶೇಖರ ಶಿವಾಚಾರ್ಯರ ಅನುಷ್ಠಾನ ಮಂಗಲ ನಿಮಿತ್ತ ಪಾದಯಾತ್ರೆ ವಿವಾದಗಳ ನಡುವೆಯೂ ಶುಕ್ರವಾರ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ವೀರಭದ್ರೇಶ್ವರ ಮಂದಿರದಿಂದ ಆರಂಭವಾದ ಪಾದಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ
ಮರಳಿತು. ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಿಸಲಾಯಿತು. ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ನಂತರ ಚಂದ್ರಶೇಖರ ಶಿವಾಚಾರ್ಯರು ಆರ್ಶೀವಚನ ನೀಡಿ, ಶುದ್ಧ ಮನದಿಂದ ಪರಶಿವನ ಧ್ಯಾನ ಮಾಡಿದರೆ ಬರುವ ಕಷ್ಟಗಳನ್ನು ಕ್ಷಣದಲ್ಲೇ ಕಳೆಯುವನು. ಜಗತ್ತಿಗೆ ಬೆಳಕು ನೀಡುವ ಸೂರ್ಯನಿಗೆ ಒಮೊಂಮೆ ಗ್ರಹಣ ಹಿಡಿಯುವುದಲ್ಲವೇ. ನಮ್ಮ ಜೀವನದಲ್ಲೂ ಕಷ್ಟಗಳು ಬಂದರೂ ಧೃತಿಗೆಡದೆ ಶುದ್ಧ ಮನದಿಂದ ದೇವರ ಸ್ಮರಿಸಬೇಕು. ಶುದ್ಧ ಭಕ್ತಿಗೆ ಭಗವಂತ ಸದಾ ಹರಸುತ್ತಾನೆ ಎಂದರು.
ಏನಿದು ವಿವಾದ: ಗ್ರಾಮದ ಹಿರೇಮಠಕ್ಕೆ ಸಂಬಂಧಿ ಸಿದಂತೆ ಇಬ್ಬರು ಶ್ರೀಗಳ ನಡುವೆ ಇರುವ ಗೊಂದಲಗಳ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯ ಪೊಲೀಸ್ ಠಾಣೆವರೆಗೂ ಹೋಗಿದ್ದು, ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಎಲ್ಲರು ಸಮಾಧಾನದಿಂದ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದರು. ಅಲ್ಲದೇ ಪಾದಯಾತ್ರೆಗೆ ಯಾರೂ ಅಡ್ಡಿಪಡಿಸದಂತೆ ಸೂಚಿಸಿದ್ದರು. ಪಾದಯಾತ್ರೆ ವೇಳೆ ಡಿವೈಎಸ್‌ಪಿ ಚಂದ್ರಕಾಂತ ಪೂಜಾರಿ, ಸಿಪಿಐ ಬಿ.ಬಿ. ಪಟೇಲ, ಶಿವಾನಂದ ಪವಾಡಶೆಟ್ಟಿ, ಪಿಎಸ್‌ಐಗಳಾದ ಸುರೇಖಾ, ಮಹಾಂತೇಶ, ವೀರೇಂದ್ರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.