Advertisement
ಶ್ರೀ ಕ್ಷೇತ್ರ ಸಿದ್ದಾಪುರದಿಂದ 6 ಕಿ.ಮೀ., ಕುಂದಾಪುರದಿಂದ 35 ಕಿ.ಮೀ ದೂರದಲ್ಲಿದೆ. ಶ್ರೀ ಬ್ರಾಹ್ಮಿದುರ್ಗಾಂಬೆಯು ಪ್ರಕೃತಿ ಪ್ರಿಯಳಾಗಿ ಇಲ್ಲಿ ನೆಲೆ ನಿಂತಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು, ಮಹಾಲಕ್ಷ್ಮೀ, ಮಹಾಕಾಳಿ, ಮಹಾ ಸರಸ್ವತಿಯಾಗಿ ನೆಲೆಸಿದ್ದಾಳೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಕ್ಷೇತ್ರವು ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಿದೆ. ಬಂದಂತಹ ಭಕ್ತಾದಿಗಳಿಗೆ ಹಿಂದೆ ಮಧ್ಯಾಹ್ನದ ಹಸಿವು ದೊಡ್ಡ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಕ್ಷೇತ್ರದ ಆನುವಂಶಿಕ ಆಡಳಿತ ಮಂಡಳಿ ಅನ್ನಪ್ರಸಾದ ವ್ಯವಸ್ಥೆ ಮಾಡಿದರು.
ಭಕ್ತರ ಸತ್ಕಾರ
ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿನ ಭಕ್ತರ ಸತ್ಕಾರ ನೋಡಿದರೆ ಮನೋಲ್ಲಾಸವಾಗುವುದು. ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ, ಸಹ ಮೊಕ್ತೇಸರರಾದ ಬರೆಗುಂಡಿ ಶ್ರೀನಿವಾಸ ಚಾತ್ರ ಮತ್ತು ಎ. ಚಂದ್ರ ಶೆಟ್ಟಿ ಅವರು ದೇಗುಲಕ್ಕೆ ಬಂದ ಪ್ರತಿಯೊಬ್ಬರನ್ನು ಮಾತನಾಡಿಸುತ್ತಾರೆ. ಪ್ರತೀ ದಿನ ಊಟದ ಸಮಯದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ. ಊಟದ ಆರಂಭದಿಂದ ಊಟ ಮುಗಿಸುವ ತನಕ ನಿರಂತರವಾಗಿ ವಿಚಾರಣೆ ನಡೆಯುತ್ತದೆ. ಭಕ್ತಾದಿಗಳು ಏನೇ ಕೇಳಿದರೂ ಕೂಡಾ ಸಾವಧಾನದಿಂದಲೇ ಪೂರೈಸುತ್ತಾರೆ. ದೇಗುಲದ ವತಿಯಿಂದ ನಡೆಯುವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಇದೆ. ದೊಡ್ಡ ಆದಾಯ ಈ ದೇವಸ್ಥಾನಕ್ಕೆ ಇಲ್ಲದಿದ್ದರೂ ಇರುವ ಆದಾಯದಲ್ಲಿಯೇ ಸದ್ವಿನಿಯೋಗ ಮಾಡುವುದರೊಂದಿಗೆ ಭಕ್ತಾದಿಗಳಿಗೆ ಉತ್ತಮ ಸೇವೆ ನೀಡುವ ಕಾರ್ಯ ಮಾಡಲಾಗುತ್ತಿದೆ.
ಕಮಲಶಿಲೆ ಎಂದಾಗ ಕಣ್ಣ ಮುಂದೆ ಬರುವುದು ಅನ್ನಪ್ರಸಾದ. ಇದಕ್ಕೆ ಕಾರಣ ಸರಳ ಭೋಜನ ಪದ್ಧತಿ. ಬಗೆಬಗೆ ಭಕ್ಷéಗಳು, ಅದ್ಭುತವಾದ ರುಚಿ, ಬಡಿಸುವಲ್ಲಿನ ಪ್ರೀತಿ ಕಾರಣವಾಗಿದೆ. ಅನ್ನ ಪ್ರಸಾದ ಸ್ವೀಕರಿಸಿದರೆ ಯಾವುದೋ ಅದ್ಧೂರಿ ಶುಭ ಸಮಾರಂಭದ ಭೋಜನ ಸ್ವೀಕರಿಸುತ್ತಿದ್ದೇವೆ ಎನ್ನುವ ಅನುಭವ. ಪ್ರತಿದಿನದ ಅಡುಗೆಯ ಮೆನು ಸಿದ್ಧಪಡಿಸಿ ಅಡುಗೆ ಮನೆಯಲ್ಲಿ ಅಳವಡಿಸಲಾಗುತ್ತದೆ. ಅದರಂತೆ ನುರಿತ ಬಾಣಸಿಗರು ಅಡುಗೆ ತಯಾರಿ ಮಾಡುತ್ತಾರೆ. ಕಮಲಶಿಲೆಯ ಅನ್ನಪ್ರಸಾದ ಮಾತ್ರ ಶುಚಿ, ರುಚಿ, ವೈವಿಧ್ಯತೆಯೊಂದಿಗೆ ಮೇರು ಸ್ಥಾನ ಪಡೆದುಕೊಳ್ಳುತ್ತದೆ.