ಮುಂಬಯಿ: ಘಾಟ್‌ಕೋಪರ್ ಪಶ್ಚಿಮದ ಜಗುªಶ ನಗರದ ಶಿಲ್ಪಾ ಬಿಲ್ಡಿಂಗ್‌ನ ಸಮೀಪದಲ್ಲಿರುವ ಶ್ರೀ ಭವಾನಿ-ಶನೀಶ್ವರದ ದೇವ ಸ್ಥಾನದ 38ನೇ ವಾರ್ಷಿಕ ಮಹಾಪೂಜೆಯು ಡಿ. 9ರಂದು ಶ್ರೀ ಜೈ ಭವಾನಿ ಶನೀಶ್ವರ ಸೇವಾ ಸಮಿತಿಯ ಆಡಳಿತದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಚಾಲನೆಗೊಂಡಿತು.
ಧಾರ್ಮಿಕ ಕಾರ್ಯಕ್ರಮವಾಗಿ 38ನೇವಾರ್ಷಿಕ ಮಂಗಲೋತ್ಸವ, ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತುಶ್ರೀ ಶನೀಶ್ವರ ಮಹಾಪೂಜೆ ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 5ರಿಂದ ಸ್ವಸ್ತಿ ಪುಣ್ಯಾಹ ವಾಚನ, ಬೆಳಗ್ಗೆ 6ರಿಂದ ನಿತ್ಯ ಸೇವೆ, ನವಕ ಕಲಶ ಪೂಜೆ, ಬೆಳಗ್ಗೆ 7.30ರಿಂದ ಗಣಹೋಮ, ಬೆಳಗ್ಗೆ 8ರಿಂದ ನವಗ್ರಹ ಶಾಂತಿ, ಕಲಶಾಭಿಷೇಕ, ಪೂರ್ವಾಹ್ನ 10.35ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಅಪರಾಹ್ನ 2.30ರಿಂದ ಮಂದಿರದ ಭಜನ ಸಮಿತಿ ಹಾಗೂ ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ, ಸಂಜೆ 6.35ರಿಂದ ಶ್ರೀ ಶನೀಶ್ವರ ಕಲಶ ಪ್ರತಿಷ್ಠಾಪನೆ, ರಾತ್ರಿ 7ರಿಂದ ರಾತ್ರಿ 11.30ರವರೆಗೆ ಮಹಾ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು. ಶನಿವಾರ ರಾತ್ರಿ 7ರಿಂದ ರವಿವಾರ ಮುಂಜಾನೆಯವರೆಗೆ ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮುಂಜಾನೆ 4ರಿಂದ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿತು.
ಈ ಧಾರ್ಮಿಕ ಉತ್ಸವವು ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಬಿ. ಸಾಬ್ಲೆ, ಉಪ ಕಾರ್ಯಾಧ್ಯಕ್ಷ ಬಿ. ಕೂಸಪ್ಪ, ಸಲಹೆಗಾರ ಶೇಖರ್ ಎಸ್. ಅಮೀನ್, ಅಧ್ಯಕ್ಷ ಹರೀಶ್ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಕೆ.ಸಾಲ್ಯಾನ್, ಗೌರವ ಕೋಶಾಧಿಕಾರಿ ಕರುಣಾಕರ ಸಿ. ಬಂಗೇರ, ಉಪಾಧ್ಯಕ್ಷ ಅನಿಲ್ ಕುಕ್ಯಾನ್, ಜತೆ ಕಾರ್ಯದರ್ಶಿ ಪ್ರಮೋದ್ ಪೂಜಾರಿ, ಜತೆ ಕೋಶಾಧಿಕಾರಿ ಅಮೆಯ್ ಎ.ಮಯೆಕರ್, ಮುಖ್ಯ ಅರ್ಚಕ ರಮೇಶ್ ಶಾಂತಿ, ಜತೆ ಅರ್ಚಕ ನಾರಾಯಣ ಬಿ. ಅಮೀನ್ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ ನೇತೃತ್ವದಲ್ಲಿ ಜರಗಿತು. ತುಳು-ಕನ್ನಡಿಗ ಭಕ್ತಾದಿಗಳು ಸೇರಿದಂತೆ ಅನ್ಯಭಾಷಿಕರು, ವಿವಿಧ ತುಳು-ಕನ್ನಡಪರ ಮತ್ತು ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ಉದ್ಯಮಿಗಳು, ದಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದಲ್ಲಿ ಮಂಗಳ್ಳೋತ್ಸವ ವಿಶೇಷ ಸೇವೆ, ಮಹಾ ಸೇವೆ, ಪುಷ್ಪ ಸೇವೆ, ನಿತ್ಯಪೂಜೆ, ಮಂಗಳ ಸೇವೆ, ಶಾಶ್ವತ ಪೂಜೆ, ಅಲಂಕಾರ ಪೂಜೆ, ಶನಿಪೂಜೆ ಇನ್ನಿತರ ಸೇವೆಗಳನ್ನು ಭಕ್ತಾದಿಗಳು ನೀಡಿ ಸಹಕರಿಸಿದರು.