Advertisement

ಅನ್ನದಾನಿ ಕಾಲಭೈರವ

09:25 AM Sep 22, 2019 | mahesh |

ತ್ರಿವಿಧ ದಾಸೋಹ ನಡೆಸುತ್ತಿರುವ ನಾಡಿನ ಪ್ರಸಿದ್ಧ ಮಠಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಇಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ “ಅನ್ನದಾನಿ ಭೈರವ’ ಅಂತಲೇ ಖ್ಯಾತಿವೆತ್ತಿದ್ದಾನೆ. ಹಸಿದ ಹೊಟ್ಟೆಯಲ್ಲಿ ಬಂದವರಿಗೆ, ಹಾಗೇ ಕಳುಹಿಸಿದ ಉದಾಹರಣೆ, ಮಠದ ಇತಿಹಾಸದಲ್ಲಿ ಸಿಗುವುದಿಲ್ಲ.

Advertisement

ನಾಡಿನ ಮೂಲೆ ಮೂಲೆಯಲ್ಲೂ ಶ್ರೀ ಕಾಲಭೈರವೇಶ್ವರನ ಒಕ್ಕಲುತನದವರಿದ್ದಾರೆ. ನಿತ್ಯವೂ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಎಲ್ಲರಿಗೂ ಪ್ರಸಾದ ರೂಪದಲ್ಲಿ ಅನ್ನದಾಸೋಹವನ್ನು ಹಲವು ದಶಕಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ರೀಮಠದ ಹೆಗ್ಗಳಿಕೆ.

ನಿತ್ಯ ಎಷ್ಟು ಮಂದಿಗೆ ಊಟ?
ಪ್ರತಿದಿನ 4 ರಿಂದ 5 ಸಾವಿರ ಜನರು ಶ್ರೀ ಕಾಲಭೈರವೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
ಭಕ್ಷ್ಯ ಸಮಾಚಾರ
– ಬೆಳಗ್ಗಿನ ಉಪಾಹಾರಕ್ಕೆ ರೈಸ್‌ ಬಾತ್‌, ಉಪ್ಪಿಟ್ಟು, ಚಿತ್ರಾನ್ನ, ಇಡ್ಲಿ, ಪೊಂಗಲ್‌ ಸೇರಿದಂತೆ ವೈವಿಧ್ಯಮಯ ತಿಂಡಿಗಳು.
– ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರ್‌, ರಸಂ, ಮಜ್ಜಿಗೆ ಹಾಗೂ ಪಾಯಸ
– ರಾತ್ರಿ ಊಟಕ್ಕೆ ಅನ್ನ, ಸಾಂಬಾರ್‌, ರಸಂ, ಸಂಡಿಗೆ
– ವಿಶೇಷ ಸಂದರ್ಭದಲ್ಲಿ ಬೂಂದಿ, ಪಾಯಸ ಇರುತ್ತದೆ.


ಊಟದ ಸಮಯ
ಬೆಳಗ್ಗೆ: 8 - 11.30
ಮಧ್ಯಾಹ್ನ: 12.30- 3.30
ರಾತ್ರಿ: 7.30- 10
ಏನೇನು? ಎಷ್ಟೆಷ್ಟು?
ಏಕಕಾಲದಲ್ಲಿ ಸುಮಾರು 10 ಸಾವಿರ ಜನರಿಗೆ ಊಟ ತಯಾರಿಸಬಹುದಾದ ಸುಸಜ್ಜಿತ ಅಡುಗೆಶಾಲೆ ಇಲ್ಲಿದೆ. ಅನ್ನ, ಸಾಂಬಾರ್‌, ಪಾಯಸ, ರಸಂ ತಯಾರಿಕೆಗೆ ಪ್ರತ್ಯೇಕವಾದ ಬಾಯ್ಲರ್‌ ವ್ಯವಸ್ಥೆ ಇದೆ. ಅತ್ಯಾಧುನಿಕ ತಂತ್ರಜ್ಞಾನದ ಡಿಶ್‌ವಾಶ್‌ ವ್ಯವಸ್ಥೆ ಇದೆ. ಶನಿವಾರ ಮತ್ತು ಭಾನುವಾರದಂದು ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕನಿಷ್ಠ 50 ರಿಂದ 60 ಸಾವಿರ ಮುಟ್ಟುತ್ತದೆ. ಅಂದು ಅಡಕೆ ತಟ್ಟೆ ಮೂಲಕ ಬಫೆ ವ್ಯವಸ್ಥೆಯಲ್ಲಿ ಭೋಜನ ವಿತರಿಸಲಾಗುತ್ತದೆ.

ಭೋಜನ ಶಾಲೆ ಹೇಗಿದೆ?
ಶ್ರೀಕ್ಷೇತ್ರದಲ್ಲೇ ಅನ್ನಪೂರ್ಣೇಶ್ವರಿ ನಿಲಯವಿದೆ. ಸುಸಜ್ಜಿತ ಭೋಜನ ಶಾಲೆಯಲ್ಲಿ ಒಟ್ಟಿಗೆ 500 ಮಂದಿ ಒಟ್ಟಿಗೆ ಕುಳಿತು ಊಟ ಮಾಡಬಹುದು. ಊಟಕ್ಕೆ ಟೇಬಲ್‌ ಹಾಗೂ ಕುರ್ಚಿ ವ್ಯವಸ್ಥೆ ಇದೆ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅವರೆಲ್ಲರಿಗೂ ಭೋಜನ ವ್ಯವಸ್ಥೆ ಅಲ್ಲದೇ, ಕ್ಷೇತ್ರದ ಸಂಸ್ಕೃತ ಪಾಠಶಾಲೆ ಹಾಗೂ ವಸತಿ ನಿಲಯದ ಸುಮಾರು 300 ಮಕ್ಕಳಿಗೆ ನಿತ್ಯವೂ ಉಪಾಹಾರ ಮತ್ತು ಊಟವನ್ನು ನೀಡಲಾಗುತ್ತಿದೆ.

ಕ್ಷೇತ್ರಕ್ಕೆ ಬರುವ ಭಕ್ತರು, ಹಸಿವಿನಿಂದ ಹೋಗಬಾರದು. ಇದೇ ನಮ್ಮ ಮಠದ ಮೂಲ ಉದ್ದೇಶ. ಅನ್ನಸಂತರ್ಪಣೆಯ ನಿತ್ಯದ ಯಶಸ್ಸಿನ ಹಿಂದೆ, ಸಹಸ್ರಾರು ದಾನಿಗಳ ಕೊಡುಗೆ ಇದೆ. ಕ್ಷೇತ್ರದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದದಿಂದ, ಅನ್ನದಾಸೋಹ ನಿರ್ವಿಘ್ನವಾಗಿ ನಡೆಯುತ್ತಿದೆ.
– ಶ್ರೀ ಪ್ರಸನ್ನನಾಥ ಸ್ವಾಮೀಜಿ, ಕಾರ್ಯದರ್ಶಿ, ಆದಿ ಚುಂಚನಗಿರಿ ಮಠ

Advertisement

ಸಂಖ್ಯಾ ಸೋಜಿಗ
18- ಕ್ವಿಂಟಲ್‌ ಅಕ್ಕಿ ಬಳಕೆ
300- ಮಕ್ಕಳಿಗೆ (ಹಾಸ್ಟೆಲ್‌) ನಿತ್ಯವೂ ಭೋಜನ ವ್ಯವಸ್ಥೆ
500- ಮಂದಿ ಏಕಕಾಲದಲ್ಲಿ ಭೋಜನ ಸ್ವೀಕರಿಸುವ ವ್ಯವಸ್ಥೆ
520- ಕಿಲೊ ತರಕಾರಿ ಅವಶ್ಯ
5000- ಮಂದಿಗೆ ನಿತ್ಯ ಅನ್ನಸಂತರ್ಪಣೆ
10,000- ಮಂದಿಗೆ ಏಕಕಾಲಕ್ಕೆ ಅಡುಗೆ ತಯಾರಿ ಸಾಮರ್ಥ್ಯ
60,000- ಭಕ್ತರು ವಾರಾಂತ್ಯದಲ್ಲಿ ಆಗಮನ

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next