Advertisement

ಹೈದರಾಬಾದ್‌ಗೆ ಒಲಿದೀತೇ ವಾಂಖೇಡೆ?

09:15 AM May 03, 2019 | keerthan |

ಮುಂಬಯಿ: ಗುರುವಾರದ ಐಪಿಎಲ್‌ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್‌-ಸನ್‌ರೈಸರ್ ಹೈದರಾಬಾದ್‌ “ವಾಂಖೇಡೆ’ ಅಂಗಳ ದಲ್ಲಿ ಸೆಣಸಲಿವೆ. ಎರಡೂ ತಂಡಗಳ ಪಾಲಿಗೆ ಇದು ಮಹತ್ವದ ಪಂದ್ಯ.

Advertisement

14 ಅಂಕಗಳೊಂದಿಗೆ 3ನೇ ಸ್ಥಾನ ದಲ್ಲಿರುವ ಮುಂಬೈ ಈ ಪಂದ್ಯ ಗೆದ್ದರೆ ತನ್ನ ಪ್ಲೇ ಆಫ್ ಪ್ರವೇಶವನ್ನು ಅಧಿಕೃತಗೊಳಿಸಲಿದೆ. ತವರಿನ ಪಂದ್ಯ ವಾದ್ದರಿಂದ ರೋಹಿತ್‌ ಪಡೆ ಇದರಲ್ಲಿ ಯಶಸ್ಸು ಕಂಡೀತು ಎಂಬುದೊಂದು ಲೆಕ್ಕಾಚಾರ. ಇನ್ನೊಂದೆಡೆ 12 ಅಂಕ ಹೊಂದಿರುವ ಹೈದರಾಬಾದ್‌ 4ನೇ ಸ್ಥಾನದಲ್ಲಿದೆ. ಮೇಲೇರಬೇಕಾದರೆ ಈ ಪಂದ್ಯವನ್ನು ಗೆಲ್ಲಬೇಕಾದುದು ಅನಿವಾರ್ಯ.
ಮುಂಬೈ ಎದುರಿನ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಅಲ್ಜಾರಿ ಜೋಸೆಫ್ ದಾಳಿಗೆ ತತ್ತರಿಸಿದ ಹೈದರಾಬಾದ್‌ ತವರಿನಲ್ಲೇ 40 ರನ್‌ಗಳ ಸೋಲುಂಡಿತ್ತು. ಈ ಹೀನಾಯ ಸೋಲಿಗೆ ಹೈದರಾಬಾದ್‌ ಸೇಡು ತೀರಿಸಿಕೊಂಡೀತೇ ಎಂಬುದೊಂದು ಕುತೂಹಲ. ಅಂದು ಸನ್‌ರೈಸರ್ಗೆ ಬಿಸಿ ಮುಟ್ಟಿಸಿದ ಜೋಸೆಫ್ ಈಗಿಲ್ಲ ವಾದರೂ ಮುಂಬೈ ಬೌಲಿಂಗ್‌ ಬಲವೇನೂ ಕುಂಟಿತವಾಗಿಲ್ಲ.

ಮುಂಬೈ ಸಮತೋಲಿತ ತಂಡ
ಮುಂಬೈ ಇಂಡಿಯನ್ಸ್‌ ಅತ್ಯಂತ ಸಮತೋಲಿತ ತಂಡ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡದ ದೊಡ್ಡ ಆಸ್ತಿ. ಯಾವುದೇ ಪರಿಸ್ಥಿತಿಯಲ್ಲಿಯೂ ಸಿಡಿಯಬಲ್ಲ ಪಾಂಡ್ಯ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಕಳೆದ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ತಂಡತೀವ್ರ ಹಿನ್ನಡೆಯಲ್ಲಿದ್ದರೂ ಪಾಂಡ್ಯ 17 ಎಸೆತಗಳಿಂದ 50 ರನ್‌ ಸಿಡಿಸಿ ಈ ಬಾರಿಯ ವೇಗದ ಫಿಫ್ಟಿ ದಾಖಲಿಸಿದ್ದನ್ನು ಮರೆಯುವಂತಿಲ್ಲ.

ಆರಂಭಿಕರಾದ ರೋಹಿತ್‌ ಶರ್ಮ, ಡಿ ಕಾಕ್‌ ಮಿಂಚಿದರೆ ಮುಂಬೈ ಮೇಲುಗೈ ಸಾಧಿಸುವುದು ಖಚಿತ. ತಂಡದ ಬೌಲಿಂಗ್‌ ಕೂಡ ಘಾತಕವಾಗಿದೆ. ಅನುಭವಿ ಲಿಸಿತ ಮಾಲಿಂಗ, ಜಸ್‌ಪ್ರೀತ್‌ ಬುಮ್ರಾ, ಪಾಂಡ್ಯ ಬ್ರದರ್, ರಾಹುಲ್‌ ಚಹರ್‌ ಉತ್ತಮ ಲಯದಲ್ಲಿದ್ದಾರೆ.

ಕಾಡಲಿದೆ ವಾರ್ನರ್‌ ಕೊರತೆ
ಈ ಐಪಿಎಲ್‌ನ ಬ್ಯಾಟಿಂಗ್‌ ಹೀರೋ, ಎಡಗೈ ಆರಂಭ ಕಾರ ಡೇವಿಡ್‌ ವಾರ್ನರ್‌ ಹೊರ ಹೋಗಿರುವುದು ಹೈದರಾಬಾದ್‌ಗೆ ಎದು ರಾಗಿರುವ ದೊಡ್ಡ ಆಘಾತ. 12 ಪಂದ್ಯಗಳಲ್ಲಿ 692 ರನ್‌ ರಾಶಿ ಹಾಕಿದ ವಾರ್ನರ್‌ ಮುಂದಿನ ಏಕದಿನ ವಿಶ್ವಕಪ್‌ ತಯಾರಿಗಾಗಿ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದಾರೆ. ಜಾನಿ ಬೇರ್‌ಸ್ಟೊ ಇಲ್ಲದೇ ಬಡವಾಗಿರುವ ಸನ್‌ರೈಸರ್ಗೆ ಈಗ ವಾರ್ನರ್‌  ಕೂಡ ಇಲ್ಲದಿರುವುದು ಭಾರೀ ಹೊಡೆತ. ಈ ವರೆಗೆ ಹೈದರಾಬಾದ್‌ಗೆ ವಾರ್ನರ್‌- ಬೇರ್‌ಸ್ಟೊ ಜೋಡಿಯ ಬ್ಯಾಟಿಂಗ್‌ ಪರಾಕ್ರಮವೇ ಆಧಾರವಾಗಿತ್ತು. ತಂಡದ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ನಂಬಿಕೆ ಇಡುವ ಹಾಗಿಲ್ಲ. ಆದರೆ ಕನ್ನಡಿಗ ಮನೀಷ್‌ ಪಾಂಡೆ ಫಾರ್ಮ್ಗೆ ಮರಳಿರುವುದು ಸಮಾಧಾನದ ಸಂಗತಿ. ಬೌಲಿಂಗ್‌ನಲ್ಲಿ ಹೈದರಾಬಾದ್‌ ಬಲಿಷ್ಠ ವಾಗಿದೆ. ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಸಂದೀಪ್‌ ಶರ್ಮ, ಭುವನೇಶ್ವರ್‌ ಕುಮಾರ್‌ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಕ್ಲಿಕ್‌ ಆದರೆ ಮೇಲುಗೈ ನಿರೀಕ್ಷಿಸಲಡ್ಡಿಯಿಲ್ಲ.

Advertisement

ಗಾಯಾಳು ಚಕ್ರವರ್ತಿ ಪಂಜಾಬ್‌ನಿಂದ ಹೊರಕ್ಕೆ
ಗಾಯದಿಂದ ಚೇತರಿಸಿಕೊಳ್ಳದ ಪಂಜಾಬ್‌ ತಂಡದ ಲೆಗ್‌ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ತಮಿಳುನಾಡಿನವರಾದ ವರುಣ್‌ ಚಕ್ರವರ್ತಿ ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ್ದು ಒಂದು ಪಂದ್ಯ ಮಾತ್ರ. ಕೆಕೆಆರ್‌ ಎದುರಿನ ಈ ಪಂದ್ಯದಲ್ಲಿ 35 ರನ್ನಿತ್ತು ಒಂದು ವಿಕೆಟ್‌ ಉರುಳಿಸಿದ್ದರು. ಚೆನ್ನೈ ಎದುರಿನ ಪಂದ್ಯಕ್ಕಾಗಿ ತೆರಳಿದ ವೇಳೆ ವರುಣ್‌ ಕೈಬೆರಳಿನ ನೋವಿಗೆ ಸಿಲುಕಿದರು. ಇದು ಇನ್ನೂ ವಾಸಿಯಾಗದ ಕಾರಣ ಅವರನ್ನು ತಂಡದಿಂದ ಹೊರಗಿರಿಸಲು ನಿರ್ಧರಿಸಲಾಯಿತು.

ಸದ್ಯ 12 ಪಂದ್ಯಗಳಿಂದ 10 ಅಂಕ ಸಂಪಾದಿಸಿರುವ ಪಂಜಾಬ್‌ 7ನೇ ಸ್ಥಾನದಲ್ಲಿದೆ. ವರುಣ್‌ ಚಕ್ರವರ್ತಿ ಬದಲು ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಂಭವ ಕಡಿಮೆ.

Advertisement

Udayavani is now on Telegram. Click here to join our channel and stay updated with the latest news.

Next