Advertisement

ಶ್ರಮಿಕ ರೈಲು: ತವರಿನತ್ತ 1,436 ಬಿಹಾರಿಗಳು

05:13 AM May 21, 2020 | Suhan S |

ಕಲಬುರಗಿ: ಲಾಕ್‌ಡೌನ್‌ನಿಂದ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ ಬಿಹಾರ ರಾಜ್ಯದ 1,436 ಜನರು ಬುಧವಾರ ರಾತ್ರಿ 8 ಗಂಟೆಗೆ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.

Advertisement

ಮಹಾಮಾರಿ ಕೋವಿಡ್  ನಿಯಂತ್ರಣಕ್ಕಾಗಿ ಕಳೆದೆರಡು ತಿಂಗಳಿನಿಂದ ಲಾಕ್‌ಡೌನ್‌ ಜಾರಿಯಿದ್ದ ಪರಿಣಾಮ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದರು. ಲಾಕ್‌ಡೌನ್‌ ಸಡಿಲಿಕೆ ಮಾಡಿ ಆಯಾ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಪ್ರಯಾಣ ಬೆಳಸಲು ಸರ್ಕಾರ ಅವಕಾಶ ನೀಡಿರುವುದರಿಂದ ಬುಧವಾರ ಸಂಜೆ ಇಲ್ಲಿನ ರೈಲ್ವೆ ನಿಲ್ದಾಣದಿಂದ ಬಿಹಾರನತ್ತ ವಲಸಿಗರು ಮುಖ ಮಾಡಿದರು. ತವರಿನತ್ತ ಹೊರಟ ವಲಸಿಗರ ಮುಖದಲ್ಲಿ ಮಂದಹಾಸ ಕಂಡಿತು. ಜಿಲ್ಲಾಧಿಕಾರಿ ಶರತ್‌ ಬಿ., ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ, ಡಿಸಿಪಿ ಕಿಶೋರ್‌ ಬಾಬು, ರೈಲು ನಿಲ್ವಾಣದ ವ್ಯವಸ್ಥಾಪಕ ಪ್ರಸಾದ ರಾವ್‌ ಹಾಗೂ ಅಧಿಕಾರಿಗಳು ವಲಸಿಗ ಕಾರ್ಮಿಕರನ್ನು ಬೀಳ್ಕೊಟ್ಟರು.

ಬಿಹಾರಕ್ಕೆ ಪ್ರಯಾಣ ಬೆಳೆಸಲು ಬೇರೆ ಜಿಲ್ಲೆಯಿಂದ ಬಂದವರನ್ನು ಆಯಾ ಜಿಲ್ಲೆಯಿಂದಲೇ ಸ್ಕ್ರಿನಿಂಗ್‌ ಮಾಡಿ ತರಲಾಗಿತ್ತು. ಜಿಲ್ಲೆಯಲ್ಲಿದ್ದ ಕಾರ್ಮಿಕರಿಗೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸ್ಕ್ರಿನಿಂಗ್‌ ಮಾಡಲಾಗಿತ್ತು. ರೈಲ್ವೆ ನಿಲ್ದಾಣಕ್ಕೆ ಕಾರ್ಮಿಕರು ಸಂಜೆ 6ಗಂಟೆಗೆ ಆಗಮಿಸಿದ್ದರು. ಎಲ್ಲರ ಹೆಸರು ಮತ್ತು ವಿಳಾಸದ ಸಮೇತ ಸೇವಾ ಸಿಂಧು ಆ್ಯಪ್‌ನಲ್ಲಿ ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡು, ರೈಲ್ವೆ ಪ್ರಯಾಣದ ವೆಚ್ಚವನ್ನು ತಲಾ ಒಬ್ಬರಿಂದ 825 ರೂ. ಪಡೆಯಲಾಯಿತು. ಕಲಬುರಗಿಯಿಂದ ಬಿಹಾರಕ್ಕೆ ಕರೆದುಕೊಂಡು ಹೋಗುತ್ತಿರುವ ಮೊದಲ ಶ್ರಮಿಕ ರೈಲು ಇದಾಗಿದೆ. ಶುಕ್ರವಾರ ಬಿಹಾರಕ್ಕೆ ತಲುಪಲಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ ಬಿಹಾರದ 1,436 ಜನರು ಬುಧವಾರ ತಮ್ಮೂರಿನತ್ತ ತೆರಳಿದರು. ಮೇ 21ರಂದು ಬಿಹಾರದ ವಲಸಿಗ ಕಾರ್ಮಿಕರ ಪ್ರಯಾಣಕ್ಕೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ಮತ್ತೂಂದು ಶ್ರಮಿಕ ರೈಲು ಹೊರಡಲಿದೆ.  – ಶರತ್‌ ಬಿ., ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next