Advertisement

ಶ್ರಮಯೋಗಿ ಮಾನ್‌ ಧನ್‌ ನೋಂದಣಿ

11:24 AM Aug 28, 2019 | Suhan S |

ಹಾವೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳನ್ನು ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ ಧನ್‌ ಯೋಜನೆಗೆ ಸೇರ್ಪಡೆಗೊಳಿಸುವ ಕುರಿತು ತಾಲೂಕಿನ ಅಗಡಿ ಗ್ರಾಮದಲ್ಲಿ ಮಾಹಿತಿ ನೀಡಲಾಯಿತು.

Advertisement

ತಾಲೂಕು ಪಂಚಾಯಿತಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ಜಿ.ಎಸ್‌. ಬೆನ್ನೂರ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆಯ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಗಳು ಜೀವನಾಧಾರಕ್ಕಾಗಿ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ಅವರು ವಾಸಿಸುತ್ತಿರುವ ಸ್ಥಳದಲ್ಲಿಯೇ ಕೂಲಿ ಉದ್ಯೋಗಗಳನ್ನು ಒದಗಿಸಲಾಗುತ್ತದೆ. ಕೂಲಿ ಉದ್ಯೋಗಕ್ಕಾಗಿ ರಾಜ್ಯದಲ್ಲಿ ಈ ವರೆಗೆ 60.46 ಲಕ್ಷ ಕುಟುಂಬಗಳು ನೋಂದಾಯಿಸಿಕೊಂಡಿದ್ದು, ನೋಂದಾಯಿತ ಕೂಲಿಕಾರರ ಕುಟುಂಬಗಳಲ್ಲಿ 43.95 ಲಕ್ಷ ಕೂಲಿಕಾರರು 18 ರಿಂದ 40 ವರ್ಷದ ವಯೋಮಾನದವರಾಗಿರುತ್ತಾರೆ. ಇವರ ಮುಂದಿನ ಜೀವನ ಹಾಗೂ ಸಾಮಾಜಿಕ ಭದ್ರತೆ ರೂಪಿಸಿಕೊಳ್ಳಲು ಕೇಂದ್ರಸರ್ಕಾರವು ಜಾರಿಗೊಳಿಸಿರುವ ಪಿಂಚಣಿ ಸೌಲಭ್ಯದ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ’ಯಡಿ ಇವರನ್ನು ತರಬಹುದಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯದಿಂದ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ ತಂದಿದೆ. ಈ ಯೋಜನೆಯಡಿ ಅಸಂಘಟಿತ ಕೂಲಿಕಾರರ ನೋಂದಣಿ ಕಾರ್ಮಿಕ ಇಲಾಖೆಯಿಂದ ಈಗಾಗಲೇ ಆರಂಭಿಸಲಾಗಿದ್ದು, ಇದರಡಿ ಅಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ನರೇಗಾ ಕೂಲಿಕಾರರನ್ನು ಸೇರ್ಪಡೆ ಮಾಡಿಸಿದರೆ ಪಿಂಚಣಿ ಸೌಲಭ್ಯದಿಂದ ಕುಟುಂಬಗಳು ಸುಸ್ಥಿರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನೋಂದಣಿಯನ್ನು ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಅಭಿಯಾನವಾಗಿ ಆರಂಭಿಸುವ ಮೂಲಕ ಎಲ್ಲ ಅರ್ಹ ಕಾರ್ಮಿಕರನ್ನು ಯೋಜನೆಯಡಿ ತರಬಹುದಾಗಿದೆ ಎಂದು ತಿಳಿಸಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ನರೇಗಾ ಯೋಜನೆಯ ಅರ್ಹ ಕೂಲಿಕಾರರಿಗೆ ಈ ಪಿಂಚಣಿ ಸೌಲಭ್ಯದ ಮಾಹಿತಿ ಬಗ್ಗೆ ವ್ಯಾಪಕ ಪ್ರಚಾರವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕೈಗೊಳ್ಳಲು ತಾವೆಲ್ಲರೂ ವಿಶೇಷ ಗಮನಹರಿಸಿ ವ್ಯಾಪಕ ಪ್ರಚಾರ ಕೈಗೊಂಡು ಹೆಚ್ಚಿನ ಅರ್ಹ ಅಕುಶಲ ಕೂಲಿಕಾರರನ್ನು ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆಯಡಿ ತಮ್ಮ ಅಧೀಧಿನ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿಗೆ ಪ್ರಚಾರ, ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಿ ಈ ಯೋಜನೆಯಡಿ ಎಲ್ಲ ನೋಂದಾಯಿತ ಕೂಲಿಕಾರರು ಸ್ಥಳೀಯ ಡಿಜಿಟಲ್ ಸೇವಾ ಕೇಂದ್ರ (ಕಾಮನ್‌ ಸರ್ವೀಸ್‌ ಸೆಂಟರ್‌) ನಲ್ಲಿ ನೋಂದಾಯಿಸಲು ತಿಳಿಸಿದರು.

ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಮಾಲಾಶ್ರೀ ಕೆಂಚನಗೌಡ್ರ ಮಾತನಾಡಿ, ರೋಜಗಾರ್‌ ದಿವಸವನ್ನು ಒಂದು ತಿಂಗಳಲ್ಲಿ ಕನಿಷ್ಟ ಒಂದು ಬಾರಿ ವಾರ್ಡ್‌ ಮಟ್ಟದಲ್ಲಿ ಆಯೋಜಿಸಬೇಕು. ಹಂತವಾರು ಪ್ರಗತಿಯಲ್ಲಿರುವ ವಿವಿಧ ವಸತಿ ಯೋಜನೆ ಅಡಿ (ಮನೆ ನಿರ್ಮಾಣ ಕಾಮಗಾರಿಗೆ) ಪ್ರತಿಯೊಬ್ಬ ಫಲಾನುಭವಿಗೆ 90 ಮಾನವ ದಿನಗಳ ಮೊತ್ತವನ್ನು ಸಂಬಂಧಪಟ್ಟ ಫಲಾನುಭವಿಗೆ ಪಾವತಿಸುವದರ ಬಗ್ಗೆ ತಿಳಿಸಿದರು.

Advertisement

ರೋಜಗಾರ್‌ ದಿವಸವನ್ನು ವಾರ್ಡಿನ ಶಾಲೆಗಳಲ್ಲಿ, ಗ್ರಾಮ ಪಂಚಾಯಿತಿ ಭವನಗಳಲ್ಲಿ, ಸ್ವಸಹಾಯ ಸಂಘಗಳಲ್ಲಿ, ರಾಜೀವಗಾಂಧಿ ಸೇವಾ ಕೇಂದ್ರಗಳಲ್ಲಿ ನಡೆಸಬಹುದಾಗಿದೆ. ನಿಗದಿತ ಸಂಖ್ಯೆಯಲ್ಲಿ ಉದ್ಯೋಗದ ಬೇಡಿಕೆ ಇರುವಂತೆ ನೋಡಿಕೊಳ್ಳುವುದು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ್‌ ಮಾದರಿಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಉದ್ಯೋಗಚೀಟಿ ಪಡೆದ ಕೂಲಿ ಕಾರ್ಮಿಕರು, ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಪಂಚಾಯತ್‌ ದ್ವಿತೀಯ ದರ್ಜೆಯ ಲೆಕ್ಕಾಧಿಕಾರಿ ಎಸ್‌.ಬಿ. ಎಣ್ಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next