ಬಾಗಲಕೋಟೆ: ನಾನು ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. 24 ವರ್ಷ ಮೇಲ್ಮನೆ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ, ಸಭಾ ನಾಯಕನಾಗಿ ಹಾಗೂ ಮೂರು ವರ್ಷ ಸಚಿವನಾಗಿದ್ದೆ. ಆದರೆ, ಈಚಿನ ದಿನಗಳಲ್ಲಿ ನನಗೆ ಆರು ಬಾರಿ ವಿವಿಧ ಹಂತದ ಅವಕಾಶ ಕೈತಪ್ಪಿದವು. ಆದರೂ, ನಾನು ಮೌನವಾಗಿದ್ದೆ. ನನಗೆ ಸಿಗಬೇಕಾದ ಅವಕಾಶ ವಂಚಿತನಾಗುವಲ್ಲಿ ಧರ್ಮ ವಿಭಜಕರ ಕೈ ಮೇಲಾಗಿರಬಹುದು ಎಂದು ಪರೋಕ್ಷವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲರ ವಿರುದ್ಧ ಮಾಜಿ ಸಚಿವ, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಸಚಿವ ಸ್ಥಾನದಿಂದ ಕೆಳಗಿಳಿಸಿದ್ದ ಅವಧಿಯಿಂದ ದೇವರಹಿಪ್ಪರಗಿ ಕ್ಷೇತ್ರದ ಟಿಕೆಟ್ ತಪ್ಪುವ ವರೆಗೂ ಆದ ಘಟನೆಗಳ ವಿವರ ನೀಡಿದರು.
ನಾನು ಧರ್ಮ ಜೋಡಿಸುವ ಕೆಲಸ ಮಾಡಿದೆ. ಉತ್ತರಕರ್ನಾಟಕಕ್ಕೆ ಇರುವ ಪ್ರಾದೇಶಿಕ ಅಸಮಾಧಾನ ಹೋಗಲಾಡಿಸಲು ಹೋರಾಟ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲು, ಕಾರ್ಯಾಧ್ಯಕ್ಷ ಸ್ಥಾನ, ವಿಧಾನಪರಿಷತ್ ಸಭಾಪತಿ ಸ್ಥಾನ ತಪ್ಪಿತು. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಲ್ಲೂ ಅವಕಾಶ ಸಿಗಲಿಲ್ಲ. ಸ್ಥಳೀಯ ಸಂಸ್ಥೆಯಲ್ಲಿ ಟಿಕೆಟ್ ತಪ್ಪಿತು. ಇದೀಗ ದೇವರಹಿಪ್ಪರಗಿ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿದ್ದರೆ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ. ಅವಕಾಶ ಸಿಗಲಿಲ್ಲ. ಈ ಅವಕಾಶ ಸಿಗದೇ ಇರುವಲ್ಲಿ ಧರ್ಮ ವಿಭಜಕರ ಕೈ ಮೇಲಾಗಿರಬಹುದು. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಪಕ್ಷ ಮತ್ತು ವ್ಯಕ್ತಿ ವಿಷಯ ಬಂದಾಗ ನಾನು ಪಕ್ಷವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಯಾರೋ ಒಂದಿಬ್ಬರಿಂದ ಪಕ್ಷವಲ್ಲ. ಸ್ವಾತಂತ್ರ‍್ಯ ಹೋರಾಟಕ್ಕೆ 12 ಲಕ್ಷ ಜನರು ಪ್ರಾಣ ತ್ಯಾಗ ಮಾಡಿದ ಪಕ್ಷ ಕಾಂಗ್ರೆಸ್. ಇಲ್ಲಿರುವುದು ನನ್ನ ಸೌಭಾಗ್ಯ ಅಂದುಕೊಂಡಿದ್ದೇನೆ. ನನ್ನ ಉಸಿರುವ ಇರೋವರೆಗೂ ಕಾಂಗ್ರೆಸ್‌ನಲ್ಲೇ ಇರುವೆ. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದು ಭಾವುಕರಾದರು.
ಬೀಳಗಿ ಅಭ್ಯರ್ಥಿ ಜೆ.ಟಿ. ಪಾಟೀಲ, ಬಾಗಲಕೋಟೆ ಅಭ್ಯರ್ಥಿ ಎಚ್.ವೈ. ಮೇಟಿ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಮುಖಂಡರಾದ ಬಸವಪ್ರಭು ಸರನಾಡಗೌಡ, ನಾಗರಾಜ ಹದ್ಲಿ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ :ಕಾಪು: ಯುವ ಶಕ್ತಿಯ ಬೆಂಬಲದಿಂದ ಪಕ್ಷ ಮತ್ತಷ್ಟು ಸಧೃಡ: ವಿನಯ್ ಕುಮಾರ್ ಸೊರಕೆ