Advertisement

ಅಳಿಲು ಮತ್ತು ಪುಟ್ಟಿ

07:34 PM Oct 23, 2019 | mahesh |

ಪುಟ್ಟಿಯ ಮನೆಯ ಹಿತ್ತಲಿನಲ್ಲಿ
ದಟ್ಟನೆ ಗಿಡ ಮರ ಬಳ್ಳಿ ಹೂ ಚೆಲ್ಲಿ
ಬಟ್ಟಲು ಹಿಡಿದು ಬಟಾಣಿ ಕಡಿಯುತ
ಪುಟ್ಟಿಯು ಹಿತ್ತಲ ಕಡೆಗೆ ನೋಡಿದಳು

Advertisement

ಮರದಲಿ ನಾಮದ ಅಳಿಲು ಆಡುತಲಿತ್ತು
ಸರ ಸರ ಓಡುತ ಚಿಂವ್‌ ಚಿಂವ್‌
ಸ್ವರವನು ಹೊಮ್ಮಿಸಿ ಹಣ್ಣನು ಅರಸಿ
ಹೊರಟಿತ್ತು .

ಸುಮ್ಮನೆ ಒಂದಡೆ ನಿಲ್ಲದೆ ಗಲಿಬಿಲಿಗೊಳ್ಳುತ
ಬಿಮ್ಮನೆ ಕಣ್ಣುಗಳರಳಿಸಿ ಮೇಲೆ ಕೆಳಗೆ ನೋಡುತ
ಒಮ್ಮೆಲೆ ನಿಂತು ಮೀಸೆಯ ತಿರುವುತ ಅತ್ತಿಂದಿತ್ತ
ಓಡುತ ಗಮ್ಮನೆ ವಾಸನೆ ಬರುವ ಹಣ್ಣನು ತಿಂದಿತ್ತು

ಮರದಲಿ ಇದ್ದ ಅಳಿಲನು ಕಂಡು
ದೂರದಿ ಬೆಕ್ಕು ಹೊಂಚನು ಹಾಕಿ-
ಕರಕರ ಹಲ್ಲನು ಮಸೆದಿತ್ತು.

ಚಂಗನೆ ಮರಕೆ ಎಗರಿದ ಬೆಕ್ಕು
ರಂಬೆಯ ತುದಿಯಲಿ ಮೌನದಿ ಕುಳಿತು
ಚಂದದ ಅಳಿಲನು ಹಿಡಿದಿತ್ತು
ಅಳಿಲನು ಹಿಡಿದ ಬೆಕ್ಕನು ಕಂಡು ಪುಟ್ಟಿಯು
ದಡ ದಡ ಸದ್ದನು ಮಾಡಿ, ಬೆಕ್ಕದು
ಗಡ ಗಡ ಬೆದರಿ ಆಳಿಲನು ಬಿಟ್ಟು ಓಡಿತ್ತು
ನಡುಗುತ ಅಳಿಲದು ನೆಲಕೆ ಬಿದ್ದಿತು

Advertisement

ಕಳವಳದಲಿ ಓಡಿದ ಪುಟ್ಟಿ
ಅಳಿಲನು ಎತ್ತಿ ಗಾಳಿಯ ಹಾಕಿ
ಕಾಳನು ಇತ್ತು ಉಪಚರಿಸಲು
ಫ‌ಳಫ‌ಳ ಕಣ್ಣನು ಬಿಟ್ಟು ಮತ್ತದೆ ಮರಕೆ ಏರಿತ್ತು.

ಬುದ್ದಿಯ ಬಳಸಿ
ಮುದ್ದಿಯ ಅಳಿಲನು ಉಳಿಸಿದ
ಬದ್ದತೆಯುಳ್ಳ ಪುಟ್ಟಿಯ ಮೊಗದಲಿ ಸಂತಸ ಅರಳಿತ್ತು.

-ಪ. ಚಂದ್ರಕುಮಾರ ಗೌನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next