ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದ ಕೋವಿಡ್ ಸ್ಫುಟ್ನಿಕ್ V ಲಸಿಕೆಯನ್ನು ದೇಶದಲ್ಲಿ ಬಳಸಿಕೊಳ್ಳಲು ತಜ್ಞರ ಸಮಿತಿ ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ
ಒಂದು ವೇಳೆ ಸ್ಫುಟ್ನಿಕ್ V ಲಸಿಕೆ ಬಳಕೆಗೆ ಡಿಸಿಜಿಐ(ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಅನುಮತಿ ನೀಡಿದರೆ ಸೇರಂನ ಕೋವಿಶೀಲ್ಡ್, ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ನಂತರ ಸ್ಫುಟ್ನಿಕ್ ಭಾರತದಲ್ಲಿ ಬಳಕೆಯಾಗುತ್ತಿರುವ ಮೂರನೇ ಲಸಿಕೆಯಾಗಲಿದೆ ಎಂದು ವರದಿ ವಿವರಿಸಿದೆ.
ಭಾರತದಲ್ಲಿ ಡಾ.ರೆಡ್ಡೀಸ್ ಸ್ಫುಟ್ನಿಕ್ V ಲಸಿಕೆಯನ್ನು ಉತ್ಪಾದಿಸುತ್ತಿದೆ. ಮೊಡೆರ್ನಾ ಹಾಗೂ ಫೈಜರ್ ಬಳಿಕ ಸ್ಫುಟ್ನಿಕ್ ಕೋವಿಡ್ ಗೆ ಅತ್ಯಂತ (ಶೇ.91.6) ಪರಿಣಾಮಕಾರಿ ಲಸಿಕೆಯಾಗಿದೆ ಎಂದು ವರದಿ ಹೇಳಿದೆ. ಈಗಾಗಲೇ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಮೂರು ಹಂತದ ಪ್ರಯೋಗ ನಡೆದಿದ್ದು, ದೇಶದಲ್ಲಿ ತುರ್ತು ಬಳಕೆಗೆ ಸ್ಪುಟ್ನಿಕ್ ಗೆ ಅನುಮತಿ ನೀಡಬೇಕೆಂದು ಡಾ.ರೆಡ್ಡೀಸ್ ಫೆಬ್ರುವರಿ 19ರಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು.
ಸ್ಫುಟ್ನಿಕ್ ಲಸಿಕೆ ಒಂದು ಬಾರಿ ತೆಗೆದುಕೊಂಡ ಮೇಲೆ ಮನುಷ್ಯನ ದೇಹದೊಳಗಿನ ರೋಗನಿರೋಧಕ ಶಕ್ತಿಯ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಅಂಕಿಅಂಶ ನೀಡುವಂತೆ ಕೇಂದ್ರದ ತಜ್ಞರ ಸಮಿತಿ ಡಾ.ರೆಡ್ಡೀಸ್ ಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಅಷ್ಟೇ ಅಲ್ಲ ಸ್ಫುಟ್ನಿಕ್ ಲಸಿಕೆ ಪಡೆದ ನಂತರ ವ್ಯಕ್ತಿಯ ಆರೋಗ್ಯದ ಮೇಲಾಗುವ ಎಲ್ಲಾ ಅಡ್ಡ ಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡುವಂತೆ ತಜ್ಞರ ಸಮಿತಿ ಸೂಚಿಸಿದೆ. ಭಾರತದಲ್ಲಿ 18ರಿಂದ 99 ವರ್ಷದ ಸುಮಾರು 1,600 ಮಂದಿ ಮೇಲೆ ಸ್ಪುಟ್ನಿಕ್ ಲಸಿಕೆಯ ಪ್ರಯೋಗ ನಡೆಸಲಾಗಿತ್ತು ಎಂದು ವರದಿ ಹೇಳಿದೆ.