Advertisement
ಹೌದು, ಎಸ್.ಎ.ಚಿನ್ನೇಗೌಡ ಅವರು ಅಂಬರೀಷ್ ಅವರಿಗೆ ತಮ್ಮ ನಿರ್ಮಾಣ ಸಂಸ್ಥೆಯಡಿ “ಹೃದಯ ಹಾಡಿತು’,”ಸಪ್ತಪದಿ’, “ಗಂಡು ಸಿಡಿಗುಂಡು’ ಮತ್ತು “ವಸಂತ ಗೀತ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆ ಚಿತ್ರಗಳ ಚಿತ್ರೀಕರಣ ವೇಳೆ, ಅಂಬರೀಷ್ ಅವರಿಗೆ ಊಟ ಅಂದಾಕ್ಷಣ, ಶಾವಿಗೆ ಮತ್ತು ನಾಟಿ ಕೋಳಿ ಸಾರು ನೆನಪಾಗುತ್ತಿತ್ತಂತೆ. ಅದರಲ್ಲೂ, ಚಿನ್ನೇಗೌಡ ಅವರ ಮನೆಯಿಂದಲೇ ಅದನ್ನು ಮಾಡಿಸಿಕೊಂಡು ಹೋಗುತ್ತಿದ್ದರಂತೆ.
Related Articles
Advertisement
ಕನ್ನಡ ಚಿತ್ರರಂಗ ಕಂಡ ಲೆಜೆಂಡ್ ಅವರು. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ, ಅವರ ಅಂತಿಮ ತೀರ್ಮಾನವನ್ನು ಎಲ್ಲರೂ ಒಪ್ಪುತ್ತಿದ್ದರು. ನಿಜವಾಗಲೂ ಅಂಬರೀಷ್ ಶ್ರೇಷ್ಠ ಕಲಾವಿದರಷ್ಟೇ ಅಲ್ಲ, ವರ್ಣರಂಜಿತ ರಾಜಕಾರಣಿಯೂ ಹೌದು. ಚಿತ್ರರಂಗ, ರಾಜಕೀಯದಲ್ಲಿ ಏಳು-ಬೀಳು ಕಂಡಿದ್ದರೂ, ಎದೆಗುಂದದೆ ಜಾಲಿಯಾಗಿಯೇ ಬದುಕು ಸವೆಸಿದ ಅಪರೂಪದ ವ್ಯಕ್ತಿ. ಸ್ನೇಹಕ್ಕೆ ಮತ್ತೂಂದು ಹೆಸರೇ ಅಂಬರೀಷ್.
ದಕ್ಷಿಣ ಭಾಗದ ಎಲ್ಲಾ ಕಲಾವಿದರೊಂದಿಗೂ ಒಡನಾಟ ಬೆಳೆಸಿಕೊಂಡಿದ್ದ ಸ್ನೇಹ ಜೀವಿಯಾಗಿದ್ದರು ಎಂದು ಅಂಬಿ ಸ್ನೇಹ ಕುರಿತು ಕೊಂಡಾಡುತ್ತಾರೆ ಚಿನ್ನೇಗೌಡರು. “ಒಡಹುಟ್ಟಿದರು’ ಚಿತ್ರದ ಚಿತ್ರೀಕರಣದಲ್ಲಿ ನಿರ್ದೇಶಕ ಭಗವಾನ್ ಬಳಿ ಬಂದು, “ಮೊದಲು ಅಣ್ಣಾವ್ರ ಭಾಗದ ದೃಶ್ಯಗಳನ್ನು ಕಂಪ್ಲೀಟ್ ಮಾಡಿಬಿಡಿ, ಆಮೇಲೆ ನನ್ನ ಭಾಗದ ದೃಶ್ಯ ತೆಗೆಯಿರಿ. ನಾನು ಮಧ್ಯಾಹ್ನ ಹೊತ್ತಿಗೆ ಬರಿನಿ ಅಂತ ಹೇಳುತ್ತಿದ್ದರು.
ಅಣ್ಣಾವ್ರ ಬೆಳಗ್ಗೆ 8 ಗಂಟೆಗೆ ಮೇಕಪ್ ಮಾಡಿಕೊಂಡು ಅಂಬರೀಷ್ ಬರುವಿಕೆಗೆ ಕಾಯುತ್ತಿದ್ದರು. ಭಗವಾನ್, ಸರ್, ಶಾಟ್ ರೆಡಿ ಅಂದಾಗ, ರಾಜಕುಮಾರ್, ಇಲ್ಲಾ, ಅಂಬರೀಷ್ ಬರಲಿ, ಇಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರೀಕರಿಸಿ ಅನ್ನುತ್ತಿದ್ದರು. ಆದರೆ, ಭಗವಾನ್ ಮಾತ್ರ ಅವರು ಬರೋದು ತಡವಾಗುತ್ತೆ ನೀವು ಬನ್ನಿ ಅಂದರೂ ರಾಜಕುಮಾರ್, ಅಂಬರೀಷ್ ಬರುವಿಕೆಗೆ ಕಾದಿದ್ದೂ ಹೌದು. ಅಂಬರೀಷ್ ಸ್ವಲ್ಪ ತಡವಾಗಿ ಬಂದಾಗ, “ಭಗವಾನ್ ನಿಮಗೆ ಬುದ್ಧಿ ಇಲ್ವಾ? ಅಣ್ಣಾವ್ರನ ಯಾಕೆ ಹೀಗೆ ಕಾಯಿಸಿದ್ದೀರಿ. ಅಂತ ಹೇಳುತ್ತಿದ್ದರು. ಕೊನೆಗೆ ಇಬ್ಬರ ಕಾಂಬಿನೇಷನ್‌ನಲ್ಲಿ ಶೂಟಿಂಗ್ ನಡೆಯುತ್ತಿತ್ತು.
“ಒಡಹುಟ್ಟಿದವರು’ ಬಿಡುಗಡೆ ಮುನ್ನ, ರಾಜಕುಮಾರ್ ಅವರು ಅಂಬರೀಷ್ ಅವರ ಕಟೌಟ್ ನನಗಿಂತ ಎತ್ತರದಲ್ಲಿರಬೇಕು. ಅವರೊಬ್ಬ ಒಳ್ಳೆಯ ಕಲಾವಿದರು. ಅದರಲ್ಲೂ ಅವರು ಎತ್ತರದಲ್ಲಿದ್ದಾರೆ. ಅವರ ಕಟೌಟ್ ಎತ್ತರವಿರಬೇಕು ಅಂದಾಗ, ಸ್ವತಃ ಅಂಬರೀಷ್ ಅವರೇ, “ಏನಣ್ಣಾ ನಿಮ್ಮ ಮುಂದೆ ನಾವೆಲ್ಲಾ ಏನೂ ಇಲ್ಲಾ. ನೀವೇ ಈಗ ಎತ್ತರದಲ್ಲಿರೋದು ಅಂತ ಹೇಳಿದ್ದರು. ಅಂಬರೀಷ್ ಸಿನಿಮಾ ಲೋಕದ ಆಪ್ತಮಿತ್ರರಾಗಿ, ಸದಾ, ನನ್ನನ್ನು ಪಾಂಡುರಂಗ ಅಂತ ಕರೆಯುವ ಮೂಲಕವೇ ತಮಾಷೆ ಮಾಡುತ್ತಿದ್ದರು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ ಚಿನ್ನೇಗೌಡ.