ದಕ್ಷಿಣ ಭಾರತದ ಚಿತ್ರರಂಗಕ್ಕೆ ಇದೀಗ ಡ್ರಗ್ ಮಾಫಿಯಾದ ನಂಟಿನ ಆರೋಪ ಅಂಟಿಕೊಂಡಿದೆ. ನೆರೆಯ ಆಂಧ್ರ ಪ್ರದೇಶದಲ್ಲಿ ಈ ಮಾದಕ ಮಾಫಿಯಾ ಬಲವಾಗಿ ಬೇರೂರಿದ್ದು, ಕರ್ಮಕಾಂಡದ ಹೆಜ್ಜೆ ಜಾಡು ಬೆನ್ನತ್ತಿರುವ ಪೊಲೀಸರು ಸಿನಿಮಾ ರಂಗದ ಗಣ್ಯರಿಗೂ ಡ್ರಗ್ ಪಾತಕಿಗಳಿಗೂ ನಂಟಿರುವ ಗುಮಾನಿಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕಾರ್ಯಾಚರಣೆ ಮುಂದುವರಿಸಿರುವ ತನಿಖಾ ತಂಡ ತೆಲುಗು ಚಿತ್ರರಂಗದ ಖ್ಯಾತ ನಟ ನಟಿಯರು ಈ ಡ್ರಗ್ ಮಾಫಿಯಾದ ಜೊತೆ ಕೈ ಜೋಡಿಸಿರುವ ಸುಳಿವನ್ನು ಬೆನ್ನಟ್ಟಿದೆ. ಈ ಸಂಬಂಧ 10ಕ್ಕೂ ಹೆಚ್ಚು ಮಂದಿ ನಟ ನಟಿಯರು ನಿರ್ದೇಶಕರಿಗೆ ನೋಟಿಸ್ ಜಾರಿಮಾಡಿದ್ದಾರೆ. ಖ್ಯಾತ ನಟ ರವಿತೇಜಾ, ನಟಿ ಚಾರ್ಮಿ, ನಿರ್ದೇಶಕ ಪುರಿ ಜಗನ್ನಾಥ್ ಹೆಸರು ಈ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?
ಈ ತಿಂಗಳ 4ರಂದು ಅಬಕಾರಿ ಅಧಿಕಾರಿಗಳು ಮಾದಕ ಜಾಲವನ್ನು ಬೇಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಿದಾಗ ಈ ಡ್ರ್ಯಾಗ್ ಮಾಫಿಯಾ ಟಾಲಿವುಡ್ ಚಿತ್ರರಂಗಕ್ಕೂ ವಿಸ್ತಾರವಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಹಗರಣದ ಪ್ರಮುಖ ಆರೋಪಿಯ ದೂರವಾಣಿ ಕರೆ ವಿವರ ಮಾಹಿತಿ ಪರಿಶೀಲಿಸಿದಾಗ ಚಿತ್ರರಂಗದ ಪ್ರಮುಖರ ಜೊತೆ ಈ ಆರೋಪಿಗಳಿಗೆ ಒಡನಾಟ ಇದ್ದುದ್ದು ಬೆಳಕಿಗೆ ಬಂದಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.
ಒಂದು ಮೂಲದ ಪ್ರಕಾರ, ಚಿತ್ರರಂಗದ 50ಕ್ಕೂ ಹೆಚ್ಚು ಮಂದಿಗೆ ಡ್ರಗ್ ಮಾಫಿಯಾದ ಜತೆ ನಂಟು ಇದೆ ಎಂಬ ಗುಮಾನಿಯಿದ್ದು,ಇದೀಗ 12 ಮಂದಿಗೆ ನೋಟಿಸ್ ನೀಡಿರುವ ತನಿಖಾ ತಂಡ, ಇನ್ನೂ 35 ಮಂದಿಗೆ ನೋಟಿಸ್ ನೀಡಲು ಚಿಂತನೆ ನಡೆಸಿದೆ ಎಂದು ವರದಿ ತಿಳಿಸಿದೆ.