ಇದು ಪಿಕಳಾರ ಗಾತ್ರದ “ಪೆಲೋರ್ನಿಡಿಯಾ’ ಕುಟುಂಬಕ್ಕೆ ಸೇರಿದ ಹಕ್ಕಿ. ಉರುಟಾದ ರೆಕ್ಕೆ, ಉದ್ದ ಬಾಲ. ಹಾರುವುದಕ್ಕಿಂತ ಹೆಚ್ಚು ನೆಲದ ಮೇಲೆ ಓಡಾಡುವುದೇ ಹೆಚ್ಚು. ಈ ಹಕ್ಕಿ ಸಂಘ ಜೀವಿ.Spoted Babbler (Pellorneum ruficeps ) R -Bul Bul + ಒಂದರ ಹಿಂದೆ ಒಂದು ಕೂಗುತ್ತಾ, ಸ್ವಲ್ಪ ದೂರ ಹಾರಿ, ಎಲ್ಲ ಹಕ್ಕಿಗಳು ಒಟ್ಟಾಗಿ ಸೇರಿ, ತೆರಗೆಲೆಗಳನ್ನು ಸರಿಸುತ್ತಾ ತಮ್ಮ ಆಹಾರ ಹುಡುಕುತ್ತದೆ. ಕೆಂಪು ಮಿಶ್ರಿತ ಕಂದು ಬಣ್ಣದ ಹಕ್ಕಿ ಇದು. ತಲೆಯ ಮೇಲೆ ಟೊಪ್ಪಿಯಂಥ, ಚುಂಚಿನ ಬುಡದಿಂದ ನೆತ್ತಿಯ ತನಕ ಕೆಂಪು ಬಣ್ಣದಿಂದ ಕೂಡಿರುತ್ತದೆ. ಕುತ್ತಿಗೆ ಮುಂಭಾಗದಲ್ಲಿ ಬಿಳಿ, ಎದೆಯ ಮೇಲೆ ಕಂದು ಬಣ್ಣದ ಚುಕ್ಕಿ ಇರುತ್ತದೆ. ಇದರಿಂದಾಗಿಯೇ ಇವಕ್ಕೆ ಚುಕ್ಕೆ ಚಿಕ್ಕ ಎಂಬ ಹೆಸರು ಬಂದಿದೆ. ಹಳದಿ ಮಿಶ್ರಿತ ಚಿಕ್ಕ ಕೊಕ್ಕು, ತೆಳ್ಳಗಿನ ತಿಳಿಗುಲಾಬಿ ಕಾಲುಗಳಿಂದ ಪಟ ಪಟನೇ ಓಡಾಡುತ್ತದೆ. ಉದ್ದ ಬಾಲ ಇದಕ್ಕಿದೆ. ಈ ಹಕ್ಕಿಗೆ ಹಿಂದೆ ಒಂದು ಮುಂದೆ ಮೂರು ಬೆರಳಿದ್ದು, ತುದಿಯಲ್ಲಿ ಉಗುರಿದೆ. ಇದರಿಂದ ನೆಲದಮೇಲೆ ಓಡಾಡಲೂ ಮತ್ತು ಒಣಗಿದ ತರಗೆಲೆ ತಿರುವಲು, ನೆಲ ಕೆದಕಿ ಚಿಕ್ಕ ಹುಳು, ಮಣ್ಣು ಹುಳು ಹಿಡಿಯಲು ಅನುಕೂಲ.
ಹಿಂದಿಯಲ್ಲಿ ಗೆಂಗ್ಯಾ ಎಂದು, ಕನ್ನಡದಲ್ಲಿ ಹರಟೆಮಲ್ಲ ಎಂದು, ಇನ್ನು ಕೆಲವರು ಇದನ್ನು ಗೆಂಗ್ಯಾ ಪಕ್ಷಿ ಅಂತಲೂ ಕರೆಯುತ್ತಾರೆ. ಗೆಂಗ್ಯಾ ಎಂದರೆ ಗುಂಪಾಗಿ ಇರುವ ಹಕ್ಕಿ ಅನ್ನೋ ಅರ್ಥವಿದೆ. ಸದಾ ಇದು ಕೂಗುತ್ತಿರುವುದರಿಮದ ಇದಕ್ಕೆ ಹರಟೆ ಮಲ್ಲ ಎಂಬ ಹೆಸರೂ ಬಂದಿರಲೂಬಹುದು. ಕಾಡಿನ ನೆಲದಲ್ಲಿ ಇಲ್ಲವೇ ಚಿಕ್ಕ ನೀರಿನ ಝರಿಗಳಿರುವ ಜಾಗದಲ್ಲಿ, ಇಲ್ಲವೇ ಕಾಡಿನ ಇಳಿಜಾರು ಪ್ರದೇಶ, ಬಿದಿರು ಮಳೆಗಳಿರುವ ಚಿಕ್ಕ ಗಿಡಗಂಟಿಗಳಿರುವೆಡೆ ನೆಲದ ಮೇಲೆ ಓಡಾಡುತ್ತಾ , ಪೊದೆಗಳಡಿಯಲ್ಲಿ ತನ್ನ ಆಹಾರ ಹುಡುಕಿ ತಿನ್ನುತ್ತದೆ. ಒದ್ದೆ ನೆಲದ ಮೇಲೆ ತರಗೆಲೆ ಇಲ್ಲವೇ ಕಸಗಳನ್ನು ಕೋಳಿಗಳಂತೆ ಕೆದರುತ್ತದೆ.
ಸಿಳ್ಳೆಯ ಮೂಲಕ ರಾಗಾಲಾಪ ಮಾಡುವ ಹಾಡು ಹಕ್ಕಿಇದು. ಕಿಟ್ವೀಟ್ವೀ ಎಂದು ಸಿಳ್ಳು ಕೂಗುತ್ತದೆ. ಮರಿಮಾಡುವ ಸಮಯದಲ್ಲಿ ಸಿಳ್ಳು ಜಾಸ್ತಿ ಹಾಕುತ್ತದೆ. ಬರ್ಮಾ, ಪಾಕಿಸ್ತಾನದಲ್ಲೂ ಈ ಚುಕ್ಕೆ ಚಿಕ್ಕ ಕಾಣಸಿಗುತ್ತದೆ. ಚಿಕ್ಕ ಕೊಕ್ಕು, ಮೈಮೇಲೆ, ಎದೆಯಲ್ಲಿರುವ ಕಂದು ಬಣ್ಣದ ಗೀರು, ಚುಕ್ಕೆಗಳಿಂದ ಇದನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಹಕ್ಕಿಗಳ ವಿಕಸನ ಆಧಾರದ ಮೇಲೆ ಇದರ ಉಪ ಗುಂಪನ್ನು ಮಾಡಲಾಗಿದೆ. ಗಿಡದ ತುದಿ ಏರಿ ಹಾರುವುದು. ನೆಲದಮೇಲೆ ಆಹಾರ ಹುಡುಕುವುದು ಮಾಡಿದರೆ, ಉಳಿದವೂ ಅದನ್ನೇ ಅನುಸರಿಸಿ ಹಾರಿ ಪೊದೆಗಳಡಿ ಗುಂಪು ಗೂಡುತ್ತದೆ. ಇದರ ಎಲ್ಲಾ ಉಪ ಪ್ರಬೇಧದ ಹಕ್ಕಿಗಳಲ್ಲಿ ಈ ಸಾಮ್ಯತೆಯನ್ನು ಕಾಣಬಹುದು.
ಗಂಡು ಹೆಣ್ಣು ಎರಡೂ ಒಂದೇ ರೀತಿ ಇರುತ್ತದೆ. ಇದು ಅಷ್ಟೊಂದು ಚಂದವಲ್ಲದ ಹಕಿ.R ಆದರೂ ಇದರ ಸಿಳ್ಳಿನ ಮೂಲಕ ಸಂಭಾಷಿಸುವ ಪರಿ ಎಲ್ಲರಿಗೂ ಪ್ರಿಯ. ಇದರ ಈ ಸಿಳ್ಳಿನ ದನಿಯಿಂದಾಗಿ ಇದರ ಇರುವನ್ನು ತಿಳಿಯಲು ತುಂಬಾ ಉಪಯೋಗವಾಗಿದೆ. ಇದು ಕೀಟಾಹಾರಿ ಹಕ್ಕಿ .ಆದರೂ ಕೆಲವೊಮ್ಮೆ ಹಣ್ಣು, ಕಾಳು, ಹೂವಿನ ಮಕರಂದ ಸಹ ಹೀರುತ್ತದೆ. ತರಗೆಲೆ ಅಡಿಯಲ್ಲಿರುವ ಚಿಕ್ಕ ದೊಡ್ಡ ಕೀಟಗಳೇ ಇದರ ಪ್ರಧಾನ ಆಹಾರ. ವರ್ಷದ ಎಲ್ಲಾ ಸಮಯದಲ್ಲೂ ಮರಿಮಾಡುವುದು ವಿಶೇಷ.
ಚಿಕ್ಕ ಗಿಡಗಂಟಿ, ಬಿದಿರಿನ ಅಡಿಯಲ್ಲಿ ಇದು ವರ್ತುಲಾಕಾರದ ಗೂಡು ಕಟ್ಟಿ, ಪಕ್ಕದಲ್ಲಿ ಒಳ ಹೋಗಲು ಬಾಗಿಲು ಮಾಡಿಕೊಳ್ಳುತ್ತದೆ. ಮಾರ್ಚ್ -ಮೇ ಅವಧಿಯಲ್ಲಿ ಹೆಚ್ಚಾಗಿ ಗೂಡು ಕಟ್ಟುತ್ತದೆ. ಇದರ ಗೂಡು ಬಿದಿರಿನ ಎಲೆಯಿಂದ ಮಾಡಿದ ಗೋಲಾಕಾರ ದಂತಿರುತ್ತದೆ. ಕೆಲವೊಮ್ಮೆ ಮುಳ್ಳು ಗಿಡಗಂಟಿಗಳ ಅಡಿಯಲ್ಲಿಯೂ ಗೂಡು ಕಟ್ಟುತ್ತದೆ.
ಪಿ.ವಿ.ಭಟ್ ಮೂರೂರು