Advertisement

ಕ್ರೀಡಾ ಸಾಧಕಿ ಅಂಜನಾ ಶೆಣೈ

06:42 PM Feb 07, 2020 | mahesh |

ಸಾಧನೆಯ ಸಾಮರ್ಥ್ಯವಿದ್ದರೂ ಆರ್ಥಿಕ ನೆರವು ಸಿಗದಿರುವ ಕಾರಣಕ್ಕೆ ಪ್ರತಿಭಾನ್ವಿತ ಕ್ರೀಡಾಪಟುಗಳು ಅನಿವಾರ್ಯವಾಗಿ ಕ್ರೀಡೆಯಿಂದ ಹಿಂದೆ ಸರಿದಿರುವ ಅನೇಕ ಉದಾಹರಣೆಗಳಿವೆ. ಅಂತಹವರಲ್ಲಿ ಹುಬ್ಬಳ್ಳಿಯ ಅಥ್ಲೀಟ್‌ ಅಂಜನಾ ರವೀಂದ್ರ ಶೆಣೈ ಕೂಡ ಒಬ್ಬರು.

Advertisement

ಹುಬ್ಬಳ್ಳಿಯ ಲಾಯನ್ಸ್‌ ಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಕಲಿಯುತ್ತಿರುವ ಅಂಜನಾ ಅಥ್ಲೆಟಿಕ್ಸ್‌ನಲ್ಲಿ ಭರವಸೆ ಮೂಡಿಸಿದ ಸ್ಪರ್ಧಿ. ಕಳೆದ 7 ವರ್ಷಗಳಿಂದ ಓಟದಲ್ಲಿ ತೊಡಗಿಕೊಂಡಿರುವ ಅಂಜನಾ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಆದರೆ ಪ್ರಾಯೋಜಕರ ಕೊರತೆಯಿಂದಾಗಿ ವಿದೇಶಗಳಲ್ಲಿ ಹುಬ್ಬಳ್ಳಿ ಖ್ಯಾತಿಯನ್ನು ಪಸರಿಸುವ ಅವಕಾಶ ಅಂಜನಾ ಕಳೆದುಕೊಳ್ಳುತ್ತಿದ್ದಾರೆ. 2019ರ ಜೂನ್‌ನಲ್ಲಿ ಗೋವಾದಲ್ಲಿ ನಡೆದ ಯುನೈಟೆಡ್‌ ನ್ಯಾಷನಲ್‌ ಗೇಮ್ಸ್‌ನಲ್ಲಿ 800 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರಿಂದ ದುಬೈನಲ್ಲಿ ನವಂಬರ್‌ 7ರಿಂದ 11ರವರೆಗೆ ಆಯೋಜಿಸಿದ 6ನೇ ಯುನೈಟೆಡ್‌ ಇಂಟರ್‌ನ್ಯಾಷನಲ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡರು. ದುಬೈಗೆ ತೆರಳಿದ ಅಂಜನಾ ಅಲ್ಲಿ 1500 ಮೀ. ಓಟದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ 800 ಮೀ. ಓಟದಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಅಂಜನಾ ಅವರ ಕ್ರೀಡಾಸಾಧನೆಯನ್ನು ಪರಿಗಣಿಸಿ ವಿಜಯಪುರದ ಅಮ್ಮನ ಮಡಿಲು ಚಾರಿಟೇಬಲ್‌ ಟ್ರಸ್ಟ್‌ “ಬಾಲ ಪ್ರತಿಭಾ’ ಪ್ರಶಸ್ತಿ ನೀಡಿದೆ. ಬೆಂಗಳೂರಿನಲ್ಲಿ ನಡೆದ ಕಲಾ ಪ್ರತಿಭೋತ್ಸವದಲ್ಲಿ ಅಂಜನಾಗೆ “ರಾಷ್ಟ್ರೀಯ ಕ್ರೀಡಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಂಜನಾ ಅವರು ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಒಟ್ಟು 150 ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಓಟದ ಜೊತೆಯಲ್ಲಿ ಯೋಗಪಟುವೂ ಆಗಿರುವ ಅಂಜನಾಗೆ ಪ್ರೋತ್ಸಾಹದ ಅವಶ್ಯಕತೆಯಿದೆ. ಸರಕಾರ ಹಾಗೂ ಸಂಘ ಸಂಸ್ಥೆಗಳು ಇಂಥ ಉದಯೋನ್ಮುಖ ಪಟುಗಳಿಗೆ ಕ್ರೀಡಾ ಉತ್ತೇಜನ ನೀಡುವುದು ಅಗತ್ಯ. ಕ್ರೀಡಾಪಟುವಿಗೆ ಅರ್ಥಿಕ ನೆರವು ನೀಡಲು ಬಯಸುವವರು ರವೀಂದ್ರ ಶೆಣೈ (9343869087) ಅವರನ್ನು ಸಂಪರ್ಕಿಸಬಹುದು.

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next