ದೊಡ್ಡಬಳ್ಳಾಪುರ: ಫೆ.17ರಂದು ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ರಾಜಕೀಯ ಮುಖಂಡರು ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮದ್ಯೆ ಗಲಾಟೆಯಾಗಿ ಭರತ್ ಮತ್ತು ಪ್ರತೀಕ್ ಎಂಬ ಇಬ್ಬರು ಅಮಾಯಕ ಯುವಕರ ಕೊಲೆಗೆ ಕಾರಣವಾಗಿತ್ತು. ಈ ಹಿನ್ನೆಲೆ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಿಗಳನ್ನು ನಿರ್ಬಂಧಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆ ಮುಗಿ ಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಿಮೆಂಟ್‌ಗಳನ್ನು ನಡೆಸದಂತೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಹಾಗೂ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಅನುಮತಿ ಪಡೆದಿರಲಿಲ್ಲ: ತಾಲೂಕಿನ ದೊಡ್ಡ ಬೆಳವಂಗಲದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಟದ ಮೈದಾನದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ನಡೆಸಲು ಅನುಮತಿ ಪಡೆದಿರಲ್ಲಿಲ್ಲ. ಚಾಕು ಇರಿತ ಘಟನೆಗೆ ಕ್ರಿಕೆಟ್ ಆಟವೇ ಮುಖ್ಯ ಕಾರಣವಾಗಿರುವ ಹಿನ್ನೆಲೆಯಲ್ಲಿ ಕ್ರೀಡೋತ್ಸವದ ಸಂಘಟಕರ ವಿರುದ್ಧವು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹರೀಶ್ ತಿಳಿಸಿದ್ದಾರೆ.
ಶಾಲಾ ಆವರಣದಲ್ಲಿ ಕ್ರಿಕೆಟ್ ಆಟ ನಡೆಸಲು ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿಯ ಅಧಿಕೃತ ಅನುಮತಿ ನೀಡಿರಲಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಂಗಪ್ಪ ತಿಳಿಸಿದ್ದಾರೆ.