ಅಬೆಡೀìನ್ (ಸ್ಕಾಟ್ಲೆಂಡ್): ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅಮೋಘ ಕ್ರಿಕೆಟ್ ಪ್ರದರ್ಶನ ನೀಡಿದ ಇಂಗ್ಲೆಂಡಿನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬಿಬಿಸಿಯ ಪ್ರತಿಷ್ಠಿತ “ನ್ಪೋರ್ಟ್ಸ್ ಪರ್ಸನಾಲಿಟಿ ಆಫ್ ದಿ ಇಯರ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ನ್ಯೂಜಿಲ್ಯಾಂಡ್ ಎದುರಿನ ವಿಶ್ವಕಪ್ ಫೈನಲ್, ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಬೆನ್ ಸ್ಟೋಕ್ಸ್ ಅವರ ಸಾಧನೆಯಾಗಿದೆ.
ಸಾರ್ವಜನಿಕ ಮತದಾನದ ಮೂಲಕ ಶ್ರೇಷ್ಠ ಕ್ರೀಡಾಪಟುವನ್ನು ಆರಿಸಲಾಗುತ್ತದೆ. 6 ಬಾರಿಯ ಫಾರ್ಮುಲಾ ವನ್ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್, 200 ಮೀ. ಓಟದ ವಿಶ್ವ ಚಾಂಪಿಯನ್ ಡಿನಾ ಆ್ಯಶರ್ ಸ್ಮಿತ್ ಅವರನ್ನು ಬೆನ್ ಸ್ಟೋಕ್ಸ್ ಹಿಂದಿಕ್ಕಿದರು. ಕಳೆದ ವರ್ಷವಷ್ಟೇ ಅವರು ಬ್ರಿಸ್ಟಲ್ ನೈಟ್ ಬಾರ್ ಪ್ರಕರಣದಿಂದ ಮುಕ್ತರಾಗಿ ಹೊಸ ಹುಟ್ಟು ಪಡೆದಿದ್ದರು.
“ಎರಡು ವರ್ಷಗಳ ಹಿಂದೆ ನನ್ನ ಬದುಕಿನ ಅತ್ಯಂತ ಕಠಿನ ದಿನಗಳನ್ನು ಎದುರಿಸಿದ್ದೆ. ಈ ಸಂದರ್ಭದಲ್ಲಿ ಎಷ್ಟೋ ಮಂದಿ ನನ್ನ ಸಹಾಯಕ್ಕೆ ನಿಂತರು.
ಇದು ನನ್ನಲ್ಲಿ ಹೊಸ ಹುರುಪು ಮೂಡಿಸಿತು. ಇವೆಲ್ಲದರ ಫಲದಿಂದ ಉತ್ತಮ
ಸಾಧನೆಗೈಯಲು ಸಾಧ್ಯವಾಯಿತು’ ಎಂದು ಬೆನ್ ಸ್ಟೋಕ್ಸ್ ಪ್ರತಿಕ್ರಿಯಿಸಿದರು.