ಬೆಂಗಳೂರು : ಗುಂಡು ಕಲ್ಲು ಎತ್ತುವ ಸ್ಪರ್ಧೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಪ್ರಸಿದ್ಧಿಯಾಗಿದೆ. ಆದರೆ ಕ್ರೀಡಾಪಟುಗಳಿಗೆ ಮಾಸಾಶನ ಇಲ್ಲದ ಕಾರಣ ಯುವಜನತೆ ಈ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಕ್ರೀಡೆ ನಶಿಸಿ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳಿಗೆ ಮಾಸಾಶನ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳ ಸಂಘದವರು ಸಚಿವ ಡಾ. ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಿದರು.
ಇಂದು ವಿಧಾನ ಸೌಧದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರನ್ನು ಭೇಟಿಯಾದ ಸಚಿವ ಮುರುಗೇಶ್ ನಿರಾಣಿ ಹಾಗೂ ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳ ಸಂಘದವರು, ಗುಂಡು ಕಲ್ಲು ಎತ್ತುವ ಕ್ರೀಡೆ ಹಾಗೂ ಕ್ರೀಡಾಪಟುಗಳ ಸಮಸ್ಯೆ ಬಗ್ಗೆ ಚರ್ಚಿಸಿದರು.
ಗುಂಡು ಕಲ್ಲು ಎತ್ತುವ ಸ್ಪರ್ಧೆಯನ್ನು ದಸರಾ ಹಬ್ಬದಲ್ಲಿಯೂ ಆಯೋಜಿಸಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ. ರಾಜ್ಯ ಸರ್ಕಾರ ಸಹ ಈ ಹಿಂದೆ ಕ್ರೀಡಾಪಟುಗಳಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ ರಾಜ್ಯ ಸರ್ಕಾರದಿಂದ ಈ ಕ್ರೀಡೆಗೆ ಪ್ರೋತ್ಸಾಹ ಹಾಗೂ ಅನುದಾನ ದೊರಕಲಿಲ್ಲ. ಹಾಗಾಗಿ ಕ್ರೀಡೆ ಬಗ್ಗೆ ಯುವ ಜನತೆ ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಕ್ರೀಡೆಯೇ ನಶಿಸಿ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಮಾಸಾಶನ ನೀಡಿ, ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ :ಧಾರಾವಾಡದಲ್ಲೊಂದು ಹೀನ ಕೃತ್ಯ : ತಿಂಡಿ ಆಸೆ ತೋರಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಸಚಿವ ಮುರುಗೇಶ್ ನಿರಾಣಿ ಹಾಗೂ ಕ್ರೀಡಾಪಟುಗಳ ಸಂಘದವರು ಮಾಡಿದ ಮನವಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳಿಗೆ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ. ಗ್ರಾಮೀಣ ಭಾಗದ ಈ ಕ್ರೀಡೆ ನಶಿಸಿ ಹೋಗಬಾರದು. ಯುವ ಜನರು ಕೂಡ ಈ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿ ತಿಂಗಳು ರೂ. 2 ಸಾವಿರ ಮಾಸಾಶನ ನೀಡುವಂತೆ ತಕ್ಷಣ ಆದೇಶಿಸುವುದಾಗಿ ತಿಳಿಸಿದರು.