Advertisement

ಕೆಲಸದ ಒತ್ತಡದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ

10:28 AM Feb 03, 2019 | Team Udayavani |

ಯಾದಗಿರಿ: ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮೂಲವಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ನೌಕರರ ಮೇಲೆ ಸಾಮಾನ್ಯವಾಗಿ ಒತ್ತಡ ಹಾಗೂ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೆಲಸ ಮಾಡುವವರು ಆರೋಗ್ಯ ಸರಿಯಾಗಿ ಇಟ್ಟುಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ ಸಲಹೆ ನೀಡಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಕಂದಾಯ ಇಲಾಖೆ ನೌಕರರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆ, ಸಂಗೀತ, ಧ್ಯಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ದೈಹಿಕ, ಮಾನಸಿಕ ಸದೃಢತೆಗೆ ಪೂರಕವಾಗಿವೆ. ಎಲ್ಲರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ನಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಕ್ರೀಡೆ ಕೂಡ ಒಂದು ವೇದಿಕೆಯಾಗಿದೆ ಎಂದು ಹೇಳಿದರು. ಕ್ರಿಕೆಟ್, ವಾಲಿಬಾಲ್‌ ಹಾಗೂ ಕಬಡ್ಡಿ ಮೂರು ಹಂತದ ಕ್ರೀಡೆಗಳು ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗವಹಿಸಿವೆ. ಲಾಟರಿ ಎತ್ತುವ ಮೂಲಕ ಕ್ರಿಕೆಟ್ ತಂಡಗಳ ಆಯ್ಕೆ ನಡೆಯಿತು. ಹುಣಸಗಿ-ಶಹಾಪುರ, ಯಾದಗಿರಿ-ಸುರಪುರ ತಂಡಗಳು ಪೈಪೋಟಿ ನಡೆಸಲಿವೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ತಂಡ-ಗುರುಮಠಕಲ್‌ ತಂಡ ನೇರವಾಗಿ ಸೆಮಿಫೈನಲ್‌ಗೆ ಆಯ್ಕೆಯಾದವು.

ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಸುರೇಶ ಅಂಕಲಗಿ, ಸಂಗಮೇಶ ಜಿಡಗೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಕುಳಿಗೇರಿ, ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಸಿದ್ದಯ್ಯ ಸ್ವಾಮಿ ಇದ್ದರು. ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಭಾಗವಹಿಸಿದ್ದರು. ಗ್ರಾಮ ಲೆಕ್ಕಾಧಿಕಾರಿ ಮಧುಶ್ರೀ ಪ್ರಾರ್ಥಿಸಿದರು. ಚನ್ನಬಸಪ್ಪ ಮ್ಯಾಗೇರಿ ಸ್ವಾಗತಿಸಿದರು. ಜಿಲ್ಲಾ ತರಬೇತಿ ಸಂಸ್ಥೆ ಉಪ ಪ್ರಾಚಾರ್ಯ ಗುರು ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next