Advertisement

2021: ಕ್ರೀಡಾಲೋಕದ ಮಹತ್ವದ ಘಟನೆಗಳ ಹಿನ್ನೋಟ

12:27 PM Dec 30, 2021 | Team Udayavani |

ಕ್ರೀಡಾಲೋಕ ಸದಾ ಸಕ್ರಿಯವಾಗಿರುವ ತಾಣ. ಸದಾ ಅಲ್ಲೊಂದು ಇಲ್ಲೊಂದು ಕೂಟಗಳು ನಡೆಯುತ್ತಾ ಇರುತ್ತದೆ. ಕೋವಿಡಗ ಭೀತಿಯ ನಡುವೆಯೂ 2021ರಲ್ಲೂ ಹಲವು ಕೂಟಗಳು, ಹಲವು ಬೆಳವಣಿಗಳನ್ನು ಕ್ರೀಡಾಲೋಕ ಕಂಡಿದೆ. ಭಾರತಕ್ಕೆ ಸಂಬಂಧ ಪಟ್ಟಂತೆ ಈ ವರ್ಷದ ಪ್ರಮುಖ ಕ್ರೀಡಾ ಸುದ್ದಿಗಳ ಒಂದು ಹಿನ್ನೋಟ ಇಲ್ಲಿದೆ.

Advertisement

ಟೋಕಿಯೋ ಒಲಿಂಪಿಕ್ಸ್

ಕ್ರೀಡಾಲೋಕದ ಅತೀ ದೊಡ್ಡ ಕೂಟ ಒಲಿಂಪಿಕ್ಸ್ ಇದೇ ವರ್ಷದ ಆಗಸ್ಟ್ ನಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆಯಿತು. ಕಳೆದ ವರ್ಷವೇ ನಡೆಯಬೇಕಾಗಿದ್ದ ಕೂಟ ಕೋವಿಡ್ ಕಾರಣದಿಂದ 2021ರಲ್ಲಿ ಜರಗಿತು. ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಈ ಬಾರಿ ಅತ್ಯುನ್ನತ ಸಾಧನೆಗೈದಿತು. ಜಾವೆಲೆನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ, ಮೀರಾಬಾಯಿ ಚಾನು ಮತ್ತು ರವಿ ಕುಮಾರ್ ದಹಿಯಾ ಬೆಳ್ಳಿ ಗೆದ್ದರು. ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದ ಭಾರತ ಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿತು.

ಟಿ 20 ವಿಶ್ವಕಪ್; ಕಳಪೆ ಪ್ರದರ್ಶನ

Advertisement

ಯುಎಇ ನಲ್ಲಿ ನಡೆದ ಟಿ20 ವಿಶ್ವಕಪ್ ಕೂಟದಲ್ಲಿ ಭಾರತ ಕಳಪೆ ಪ್ರದರ್ಶನ ತೋರಿತು. ವಿರಾಟ್ ನಾಯಕತ್ವದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೇ ಪಾಕಿಸ್ಥಾನ ವಿರುದ್ಧ ಹೀನಾಯವಾಗಿ ಸೋಲನುಭವಿಸಿತ್ತು. ಸೆಮಿ ಫೈನಲ್ ಗೂ ಪ್ರವೇಶ ಮಾಡಲು ಸಾಧ್ಯವಾಗದೆ ಅವಮಾನ ಅನುಭವಿಸಬೇಕಾಯಿತು. ಕೂಟದಲ್ಲಿ ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ವಿಜೇತವಾಯಿತು.

ಅಜಾಜ್ ಪಟೇಲ್ 10 ವಿಕೆಟ್

ನ್ಯೂಜಿಲ್ಯಾಂಡ್ ತಂಡದ  ಸ್ಪಿನ್ನರ್ ಅಜಾಜ್ ಪಟೇಲ್ ಅವರು ಭಾರತದ ವಿರುದ್ಧದ ಮುಂಬೈ ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ ಜಿಮ್ ಲೇಕರ್, ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು.  ಮುಂಬೈ ಮೂಲದ ಅಜಾಜ್ ಮುಂಬೈ ಮೈದಾನದಲ್ಲೇ ಈ ಸಾಧನೆ ಮಾಡಿದ್ದು ವಿಶೇಷ.

ಗಾಬಾ ಟೆಸ್ಟ್ ವಿಜಯ

ಈ ವರ್ಷದ ಆರಂಭದಲ್ಲಿ ನಡೆದ ಟೆಸ್ಟ್ ಪಂದ್ಯವಿದು. ಗಾಯದ ಕಾರಣದಿಂದ ಪ್ರಮುಖ ಆಟಗಾರರಿಲ್ಲದ ಭಾರತ ತಂಡ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಐತಿಹಾಸಿಕ ಗಾಬಾ ಪಂದ್ಯದಲ್ಲಿ ವಿಜಯ ಸಾಧಿಸಿತ್ತು. ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ಸಾಹಸಕ್ಕೆ ಬ್ರಿಸ್ಬೇನ್ ನ ಗಾಬಾ ಅಂಗಳ ಸಾಕ್ಷಿಯಾಗಿತ್ತು. ಈ ಪಂದ್ಯದ ಜಯದೊಂದಿಗೆ ಭಾರತ 2-1 ಅಂತರದಿಂದ ಸರಣಿ ಜಯಿಸಿತ್ತು.

ರಾಹುಲ್ ದ್ರಾವಿಡ್ ಯುಗಾರಂಭ

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಭಾರತ ಹಿರಿಯರ ತಂಡದ ಮುಖ್ಯ ಕೋಚ್ ಆಗಿ ನೇಮಕವಾದರು. ಟಿ20 ವಿಶ್ವಕಪ್ ಬಳಿಕ ರವಿ ಶಾಸ್ತ್ರಿ ಅವರ ಅಧಿಕಾರವಧಿ ಮುಕ್ತಾಯವಾದ ಬಳಿಕ ರಾಹುಲ್ ದ್ರಾವಿಡ್ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ನೇಮಕವಾದರು.

ನಾಯಕತ್ವ ಬದಲಾವಣೆ

ಮೂರು ಮಾದರಿ ಕ್ರಿಕೆಟ್ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಗೆ ಮೊದಲು ಚುಟುಕು ಮಾದರಿ ತಂಡಕ್ಕೆ ವಿದಾಯ ಘೋಷಿಸಿದ್ದರು. ಕಾರ್ಯದೊತ್ತಡದ ಕಾರಣ ನೀಡಿದ್ದ ವಿರಾಟ್ ಅವರು ಏಕದಿನ ಮತ್ತು ಟೆಸ್ಟ್ ತಂಡದ ನಾಯಕನ ಸ್ಥಾನದಲ್ಲಿ ಮುಂದುವರಿಯಲು ಬಯಸಿದ್ದರು. ಆದರೆ ಇತ್ತೀಚೆಗೆ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಕ್ಕಿಳಿಸಿ ರೋಹಿತ್ ಶರ್ಮಾರನ್ನು ಆ ಜಾಗದಲ್ಲಿ ಕೂರಿಸಲಾಗಿದೆ.

ವಿಜಯ್ ಹಜಾರೆ ಗೆದ್ದ ಹಿಮಾಚಲ ಪ್ರದೇಶ

ದೇಶಿ ಕ್ರಿಕೆಟ್ ನ ಬಲಿಷ್ಠ ತಂಡಗಳಲ್ಲಿ ಗುರುತಿಸಿಕೊಳ್ಳದ ಹಿಮಾಚಲ ಪ್ರದೇಶ ತಂಡವು ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಗೆದ್ದು ಇತಿಹಾಸ ಬರೆಯಿತು. ರಿಷಿ ಧವನ್ ನಾಯಕತ್ವದ ಹಿಮಾಚಲ ಪ್ರದೇಶ ತಂಡವು ಫೈನಲ್ ಪಂದ್ಯದಲ್ಲಿ ಬಲಿಷ್ಠ ತಮಿಳುನಾಡು ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಮೂಲಕ ದೇಶಿ ಕ್ರಿಕೆಟ್ ನ ಮೊದಲ ಟ್ರೋಫಿ ಗೆದ್ದಿತು.

Advertisement

Udayavani is now on Telegram. Click here to join our channel and stay updated with the latest news.

Next