Advertisement

ಒತ್ತಡ ನಿವಾರಣೆಗೆ ಕ್ರೀಡೆ ಸಹಾಯ: ಡಿಸಿ

02:39 PM Mar 17, 2022 | Team Udayavani |

ಬಾಗಲಕೋಟೆ: ಸರ್ಕಾರಿ ನೌಕರರಿಗೆ ಪ್ರತಿ ದಿನ ಕೆಲಸದ ಒತ್ತಡ ಸಾಕಷ್ಟಿರುತ್ತದೆ. ಒತ್ತಡದ ನಿವಾರಣೆಗೆ ಹಾಗೂ ಆಧುನಿಕ ಜೀವನಶೈಲಿ ಬದಲಾಯಿಸಿಕೊಳ್ಳಲು ಕ್ರೀಡೆ ಅವಶ್ಯ. ಆದ್ದರಿಂದ ನೌಕರರೆಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ ಹೇಳಿದರು.

Advertisement

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಪಂ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2021-2022ನೇ ಸಾಲಿನ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.

ಕ್ರೀಡೆ ಮನಸ್ಸಿಗೆ ಉಲ್ಲಾಸ ನೀಡುವ ಜೊತೆಗೆ ದೈಹಿಕ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಕ್ರೀಡಾಕೂಟದಲ್ಲಿ ಮಾತ್ರವಲ್ಲದೇ ಪ್ರತಿದಿನ ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯಮಟ್ಟದಲ್ಲಿ ಜಿಲ್ಲೆಯ ನೌಕರರ ಕಾರ್ಯ ಸಾಧನೆ ಉತ್ತಮವಾಗಿದೆ. ಟಾಪ್‌ 5ರಲ್ಲಿ ಬಾಗಲಕೋಟೆ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಎಸ್ಪಿ ಲೋಕೇಶ ಜಗಲಾಸರ್‌ ಅವರಿಗೆ ಚಿನ್ನದ ಪದಕ, ಪ್ರಸಕ್ತ ವರ್ಷ ನರೇಗಾದಲ್ಲಿ ಜಿಪಂ ಸಿಇಒ ಟಿ. ಭೂಬಾಲನ್‌ ಅವರಿಗೆ ಪ್ರಶಸ್ತಿ ದೊರಕಿದೆ. ಇದರ ಹಿಂದೆ ಜಿಲ್ಲೆಯ ನೌಕರರ ಪರಿಶ್ರಮ ಅಡಗಿದೆ. ನೌಕರರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗಮನ ಹರಿಸಬೇಕು ಎಂದರು.

ಜಿಪಂ ಸಿಇಒ ಟಿ. ಭೂಬಾಲನ್‌ ಮಾತನಾಡಿ, ನರೇಗಾ ಯೋಜನೆಯಡಿ ಬಾಗಲಕೋಟೆ ಜಿಲ್ಲೆಗೆ ಉತ್ತಮ ಪ್ರಶಸ್ತಿ ದೊರಕಿದೆ. ಜಿಪಂ, ಗ್ರಾಪಂ, ಅರಣ್ಯ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರವೇ ಇದಕ್ಕೆ ಕಾರಣ. ನೌಕರರು ಶ್ರಮವಹಿಸಿದ್ದಕ್ಕೆ ಉತ್ತಮವಾದ ಸ್ಥಾನ ಸಿಕ್ಕಿದೆ ಎಂದು ಹೇಳಿದರು.

Advertisement

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗೆ ಉತ್ತಮ ವಾತಾವರಣವಿದೆ. 84 ಇಲಾಖೆಗಳ ನೌಕರರು ಸಂಘಟಿತರಾಗಿ ಕೆಲಸ ಮಾಡುತ್ತಾರೆ. ಕಳೆದ ಏಳು ವರ್ಷದಿಂದ ಕ್ರೀಡಾಕೂಟ ಆಯೋಜಿಸುತ್ತಿದ್ದು, ಆರಂಭದಲ್ಲಿ 175 ಜನ ನೌಕರರು ಮಾತ್ರ ಭಾಗವಹಿಸಿದ್ದರು. ಪ್ರಸಕ್ತ ವರ್ಷ 2 ಸಾವಿರ ಜನ ನೌಕರರು ಭಾಗವಹಿಸಿದ್ದು ಖುಷಿ ತಂದಿದೆ. ನೌಕರರಿಗೆ ಉತ್ತೇಜನ ನೀಡುವಲ್ಲಿ ಪ್ರತಿ ವರ್ಷ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next